ಮಡಿಕೇರಿ, ಸೆ. 25: ಹತ್ತು ದಿನಗಳ ಹಿಂದೆ ಮಾದಾಪುರ ಸಮೀಪದ ಇಗ್ಗೋಡ್ಲು ಗ್ರಾಮದ ಮನೆಯೊಂದರಲ್ಲಿ ಒಂಟಿಯಾಗಿ ವಾಸವಿದ್ದ ಮಹಿಳೆಯ ನಿಗೂಢ ಕೊಲೆ ಪ್ರಕರಣ ಇದೀಗ ಪೊಲೀಸರು ಬೇಧಿಸುವಲ್ಲಿ ಕಗ್ಗಂಟಾಗಿ ಪರಿಣಮಿಸಿದೆ ಎಂದು ಮೂಲಗಳಿಂದ ಗೊತ್ತಾಗಿದೆ.ಇಗ್ಗೋಡ್ಲು ಗ್ರಾಮದ ನಿವಾಸಿ, ಸೀತಮ್ಮ ಅಲಿಯಾಸ್ ಕಾವೇರಿ (65) ತಾ. 15 ರಂದು ಮನೆಯೊಳಗೆ ಕೊಲೆಯಾಗಿರುವ ಬಗ್ಗೆ ಪೊಲೀಸರಿಗೆ ಕುಟುಂಬಸ್ಥರು ವಿಷಯ ಮುಟ್ಟಿಸಿದ್ದರು. ಆ ಮೇರೆಗೆ ಧಾವಿಸಿದ್ದ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಲಾಗಿ, ಮನೆಯ ಮುಂಬಾಗಿಲಿಗೆ ಬೀಗ ಹಾಕಿರುವದು ಗೋಚರಿಸಿತ್ತು.

ಬೀಗ ಒಡೆದು ಒಳಹೊಕ್ಕ ಪೊಲೀಸರು ಪರಿಶೀಲಿಸಿದಾಗ, ಮನೆಯ ಕಪಾಟುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿರುವದು ಗೋಚರಿಸುವದರೊಂದಿಗೆ, ಯಾರೋ ಹಣಕ್ಕಾಗಿ ದುಷ್ಕøತ್ಯ ನಡೆಸಿರಬಹು ದೆಂದು ಶಂಕೆ ವ್ಯಕ್ತಗೊಂಡಿತ್ತು. ಇನ್ನು ಮೃತಳಾಗಿರುವ ಮಹಿಳೆಯು ಶವ ನಾಲ್ಕಾರು ದಿನಗಳ ಹಿಂದೆಯೇ ಹತ್ಯೆಗೈಯಲ್ಪಟ್ಟು ಕೊಳೆಯುವದ ರೊಂದಿಗೆ ವಾಸನೆ ಬೀರುತ್ತಿದ್ದಲ್ಲದೆ, ಆಕೆಯ ಹಣೆಯಲ್ಲಿ ರೂ. 1ರ ನಾಣ್ಯ ಇರಿಸಿದ್ದದ್ದು ಸಾಕಷ್ಟು ಸಂಶಯ ಹುಟ್ಟು ಹಾಕಿತ್ತು. ಈ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸರು ಮಹಜರು ನಡೆಸಿ, ಮರಣೋತ್ತರ ಪರೀಕ್ಷೆಯೊಂದಿಗೆ ಆ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲ ಯಕ್ಕೆ ವರದಿಗಾಗಿ ಸಲ್ಲಿಸುವದ ರೊಂದಿಗೆ ಶವವನ್ನು ಸಂಬಂಧಿಕರಿಗೆ ಒಪ್ಪಿಸಿದ್ದರು.

ಪ್ರಕರಣಕ್ಕೆ ತಿರುವು : ಇದೀಗ ಕೊಲೆಗೀಡಾಗಿರುವ ಮಹಿಳೆಯಿಂದ ಕಳ್ಳರು ಹಣ ಅಥವಾ ಚಿನ್ನಾಭರಣ ದೋಚಲು ದುಷ್ಕøತ್ಯ ಎಸಗಿರುವದು ಅಲ್ಲವೆಂದು ಪೊಲೀಸರ ತನಿಖೆ ಸಂದರ್ಭ ಸುಳಿವಿನೊಂದಿಗೆ ಪ್ರಕರಣ ತಿರುವು ಪಡೆದುಕೊಂಡಿದೆ. ಈ ಕೃತ್ಯ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸ್ ಇನ್ಸ್‍ಪೆಕ್ಟರ್ ಪರಶಿವ ಮೂರ್ತಿ ತಂಡ, ಕೊಲೆಗೀಡಾಗಿರುವ ಮಹಿಳೆಯ ಮನೆಯನ್ನು ಪರಿಶೀಲನೆ ಕೈಗೊಂಡಿದ್ದ ಸಂದರ್ಭ ಈ ಅಂಶ ಬೆಳಕಿಗೆ ಬಂದಿರುವದಾಗಿ ಸುಳಿವು ಲಭಿಸಿದೆ.

ಹಣದ ಗಂಟು ಪತ್ತೆ : ನಿಗೂಢ ರೀತಿ ಕೊಲೆಗೀಡಾಗಿರುವ ಸೀತಮ್ಮ ತನ್ನ ಬಳಿ ರೂಪಾಯಿ 60 ಸಾವಿರಕ್ಕೂ ಅಧಿಕ ಮೊತ್ತವನ್ನು ವಸ್ತ್ರದ ಗಂಟೊಂದರಲ್ಲಿ ಭದ್ರಪಡಿಸಿ ಇಟ್ಟುಕೊಂಡಿದ್ದಲ್ಲದೆ, ಬೆಲೆ ಬಾಳುವ ಚಿನ್ನಾಭರಣಗಳನ್ನು ಕೂಡ ಆ ಗಂಟಿನಲ್ಲಿಯೇ ಇರಿಸಿಕೊಂಡಿದ್ದು, ಕಳ್ಳರಿಗೆ ಗೋಚರಿಸಿಲ್ಲ!

ಪೊಲೀಸ್ ತನಿಖೆ ವೇಳೆ ಲಭಿಸಿರುವ ನಗದು ಸಹಿತ ಆಭರಣಗಳ ಸುಳಿವಿನಿಂದಾಗಿ, ಸೀತಮ್ಮ ಯಾವ ಕಾರಣಕ್ಕಾಗಿ ಹತ್ಯೆಗೊಳಗಾಗಿದ್ದಾರೆ ಎಂಬ ನಿಗೂಢ ಸತ್ಯ ಬೇಧಿಸುವ

(ಮೊದಲ ಪುಟದಿಂದ) ದಿಸೆಯಲ್ಲಿ ಇದೀಗ ತನಿಖೆ ಸಾಗಿದ್ದು, ಮೃತರ ಹಲವಷ್ಟು ಸಂಬಂಧಿಕರು ಹಾಗೂ ನೆರೆಕರೆಯ ಮಂದಿ ಬಗ್ಗೆಯೂ ಪೊಲೀಸರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಅಲ್ಲದೆ, ಆಕೆಯ ಶವದ ಹಣೆಯಲ್ಲಿ ನಾಣ್ಯ ಇತ್ಯಾದಿ ಇರಿಸಿ ಸಾವಿನ ಕ್ರಿಯೆ ಕೈಗೊಂಡಿರುವದು ಸತ್ತ ಸೀತಮ್ಮಳಿಗೂ ಕೊಲೆಗಡುಕರಿಗೂ ಯಾವದೋ ರೀತಿಯ ಸಂಬಂಧದ ಸೂಚಕವಿರಬಹುದೆಂಬ ಸಂಶಯ ಪೊಲೀಸರನ್ನು ಕಾಡ ತೊಡಗಿದೆ. ಈ ಎಲ್ಲಾ ಸೂಕ್ಷ್ಮತೆಗಳ ನಡುವೆ ಇಗ್ಗೋಡ್ಲು ಕೊಲೆ ಪ್ರಕರಣ ಬೇಧಿಸುವತ್ತ ಪೊಲೀಸ್ ತನಿಖಾದಳ ಕಾರ್ಯೋನ್ಮುಖವಾಗಿದೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಹಾಗೂ ತಂಡ ಸಾಕಷ್ಟು ಮಾಹಿತಿ ಕಲೆ ಹಾಕತೊಡಗಿದೆ ಎಂದು ಗೊತ್ತಾಗಿದೆ.