ಶ್ರೀಮಂಗಲ, ಸೆ. 25: ಫುಡ್ ಸೇಫ್ಟಿ ಮತ್ತು ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ(ಎಫ್‍ಎಸ್‍ಎಸ್‍ಐ) ಸಂಸ್ಥೆಯು ವಿಯೆಟ್ನಾಮ್ ದೇಶದಿಂದ ಕಳಪೆ ಹಾಗೂ ಅಪಾಯಕಾರಿ ರಾಸಾಯನಿಕ ಮಿಶ್ರಿತ ಕರಿಮೆಣಸು ಭಾರತಕ್ಕೆ ಆಮದು ಆಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ನಿಯಮವನ್ನು ಉಲ್ಲಂಘಿಸಿ ಕರಿಮೆಣಸನ್ನು ಕಡಿಮೆ ದರಕ್ಕೆ ಆಮದು ಮಾಡಿಕೊಂಡು ಭಾರತಕ್ಕೆ ತಂದು ಸ್ಥಳೀಯ ಕರಿಮೆಣಸು ಮಾರುಕಟ್ಟೆ ದರ ತೀವ್ರವಾಗಿ ಕುಸಿಯುವಂತೆ ಮಾಡಿರುವದರಿಂದ ಕರಿಮೆಣಸು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ದಿನಗಳಲ್ಲಿ ವಿಯೆಟ್ನಾಮ್ ಹಾಗೂ ಇತರ ದೇಶಗಳಿಂದ ಕಾಫಿಯು ಸಹ ಕಳಪೆ ಕರಿಮೆಣಸಿನಂತೆ ಆಮದಾಗುವ ಅಪಾಯವಿದೆ. ಹೀಗಾದರೆ ಕಾಫಿ ಹಾಗೂ ಕರಿಮೆಣಸನ್ನೇ ನಂಬಿ ಬದುಕುತ್ತಿರುವ ದೇಶೀಯ ಬೆಳೆಗಾರರಿಗೆ ಅತ್ಯಂತ ಸಂಕಷ್ಟ ಪರಿಸ್ಥಿತಿ ಉಂಟಾಗಲಿದೆ. ಕಾಫಿ ಹಾಗೂ ಕರಿಮೆಣಸನ್ನು ಭಾರತ ಆಮದು ಮಾಡಿಕೊಳ್ಳುವದನ್ನು ಶಾಶ್ವತವಾಗಿ ನಿಷೇಧಿಸುವಂತೆ ಜನಜಾಗೃತಿ ಹಮ್ಮಿಕೊಳ್ಳಲು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬೆಳೆಗಾರರ ಒಕ್ಕೂಟದಿಂದ ಬೃಹತ್ ಜನಜಾಗೃತಿ ಚಳುವಳಿಯನ್ನು ಹಮ್ಮಿಕೊಳ್ಳುವ ನಿರ್ಣಯ ಕೈಗೊಳ್ಳಲಾಯಿತು.
ಗೋಣಿಕೊಪ್ಪದಲ್ಲಿ ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬೀಲಿರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಈ ನಿಟ್ಟಿನಲ್ಲಿ ಆಮದು ಕರಿಮೆಣಸು ಹಾಗೂ ಕಾಫಿಯಿಂದ ಬೆಳೆಗಾರರಿಗೆ ಉಂಟಾಗುವ ಗಂಭೀರ ಸಮಸ್ಯೆ ಬಗ್ಗೆ ತಳಮಟ್ಟದಿಂದಲೇ ಜಾಗೃತಿ
(ಮೊದಲ ಪುಟದಿಂದ) ಮೂಡಿಸಿ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಈ ಬಗ್ಗೆ ಕೈಗೊಳ್ಳುವ ಜನಜಾಗೃತಿ ಬಗ್ಗೆ ಸಭೆಯು ಬೆಳೆಗಾರ ಒಕ್ಕೂಟದ ಆಡಳಿತ ಮಂಡಳಿಗೆ ನಿರ್ಧರಿಸುವ ಅಧಿಕಾರ ನೀಡಿದೆ. ತಕ್ಷಣದ ಕ್ರಮವಾಗಿ ಕರಿಮೆಣಸು ಆಮದುವಿನಿಂದ ತೀವ್ರವಾಗಿ ದರ ಕುಸಿತವಾಗಿರುವದನ್ನು ತಡೆಗಟ್ಟುವದು, ಇದಕ್ಕಾಗಿ ಕರಿಮೆಣಸು ಆಮದನ್ನು ನಿಷೇಧಿಸುವದು. ದೇಶದೊಳಗೆ ಆಮದಾಗಿರುವ ಕಳಪೆ ಮತ್ತು ಅಪಾಯಕಾರಿ ರಾಸಾಯನಿಕ ಮಿಶ್ರಣದ ಕರಿಮೆಣಸು ದಾಸ್ತಾನು ಹಾಗೂ ಮಾರಾಟದ ಮೇಲೆ ಕ್ರಮಕೈಗೊಳ್ಳುವದು. ಭಾರತಕ್ಕೆ ಕಾಫಿಯನ್ನು ಹೊರದೇಶದಿಂದ ಆಮದು ಮಾಡಿಕೊಳ್ಳುವದುನ್ನು ನಿಷೇಧಿಸುವದು ಜನಜಾಗೃತಿ ಆಂದೋಲನದ ಪ್ರಮುಖ ಅಂಶವಾಗಿದೆ.
ಗೋಣಿಕೊಪ್ಪ ಎಪಿಎಂಸಿ ಮಾಜಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಎಪಿಎಂಸಿಗಳಿಗೆ ಹೊರ ದೇಶದಿಂದ ಕರಿಮೆಣಸು ಸೇರಿದಂತೆ ಯಾವದೇ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಅಧಿಕಾರವಿಲ್ಲ.
ರೈತರು ಮತ ನೀಡಿ ಚುನಾಯಿಸಿದ ಎಪಿಎಂಸಿಯ ಪ್ರತಿನಿಧಿಗಳು ತಮ್ಮ ಹೊಣೆಗಾರಿಕೆಯನ್ನು ಮರೆತಿದ್ದಾರೆ. ಸಂಸದರು ಈ ಬಗ್ಗೆ ಬೆಳೆಗಾರರ ಸಭೆ ಕರೆದು ಅನ್ಯಾಯಕ್ಕೊಳಗಾಗಿರುವ ಬೆಳೆಗಾರರಿಗೆ ಸಾಂತ್ವನ ಹೇಳಿ ಸಮಸ್ಯೆ ಪರಿಹಾರ ಕಲ್ಪಿಸಬೇಕಾದವರು ಸ್ಪಂದಿಸದೆ ಇರುವದು ಸರಿಯಲ್ಲ ಎಂದು ಹೇಳಿದರು.
ನಿಟ್ಟೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಾಚಂಗಡ ಉಮೇಶ್ ಮಾತನಾಡಿ, ಕರಿಮೆಣಸು ಆಮದಿನಿಂದ ಬೆಳೆಗಾರರ ಕಂಗಲಾಗಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಜನಪ್ರತಿನಿಧಿಗಳು ಬೆಳೆಗಾರರ ಸಮಸ್ಯೆಗೆ ಸ್ಪಂದಿಸದೇ ಇರುವದು ಅತ್ಯಂತ ದುರದೃಷ್ಟಕರ. ಮುಂದಿನ ಚುನಾವಣೆಗೆ ಮತ ಕೇಳಲು ಬರುವ ರಾಜಕೀಯ ಪಕ್ಷದವರಿಗೆ ಗ್ರಾಮದೊಳಗೆ ಕಾಲು ಹಾಕಲು ಬಿಡಬಾರದೆಂದು ಎಚ್ಚರಿಸಿದರು.
ಸಭೆಯಲ್ಲಿ ಎಪಿಎಂಸಿ ಸದಸ್ಯೆ ಬೊಳ್ಳಾಜೀರ ಸುಶೀಲಾ ಅಶೋಕ್ ಮಾತನಾಡಿ, ನಾವು ರೈತರ ಮತದಿಂದ ಚುನಾಯಿತರಾಗಿದ್ದು, ಬೆಳೆಗಾರರ ಪರವಾಗಿದ್ದೇವೆ. ಆಮದಾಗಿರುವದಕ್ಕೆ ನಮ್ಮ ಸಮಿತಿ ಬೆಂಬಲಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಸುಶೀಲಾ ಅವರ ಮಾತನ್ನು ಸಮರ್ಥಿಸಿದರು.
ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಕಳಪೆ ಹಾಗೂ ಅತೀ ಹೆಚ್ಚು ರಾಸಾಯನಿಕ ಬಳಕೆ ಇರುವ ಬಗ್ಗೆ ಎಫ್‍ಎಸ್‍ಎಸ್‍ಐ ನೀಡಿದ ವರದಿಯಂತೆ ಕೇಂದ್ರ ಸರ್ಕಾರ ವಿಯೆಟ್ನಾಮ್ ದೇಶದಿಂದ 2017 ಮಾರ್ಚ್ 7ರಂದು ಕರಿಮೆಣಸು ಆಮದನ್ನು ನಿಷೇಧಿಸಿತ್ತು. ಆದರೆ, 2017 ಮಾರ್ಚ್ 21ರಂದು ಕರಿಮೆಣಸನ್ನು ಆಮದು ಮಾಡಿಕೊಳ್ಳಲು ನಿಷೇಧವನ್ನು ಹಿಂತೆಗೆದಿದೆ. ವಿಯೆಟ್ನಾಮ್ ದೇಶದಿಂದ ಸಾವಿರಾರು ಟನ್ ಕರಿಮೆಣಸು ಭಾರತಕ್ಕೆ ಬರುತ್ತಿದ್ದು, ಅದರಲ್ಲೂ ಅತೀ ಹೆಚ್ಚು ಕರಿಮೆಣಸು ಸಂಗ್ರಹಿಸುವ ಗೋಣಿಕೊಪ್ಪ ಎಪಿಎಂಸಿಯೊಳಗೆ ಬಂದಿರುವದು ಆತಂಕಕಾರಿ ಬೆಳವಣಿಗೆ. ಕೇಂದ್ರ ವಾಣಿಜ್ಯ ಸಚಿವರನ್ನು ರಾಜ್ಯದ ಸಂಸದರನ್ನು ಭೇಟಿಯಾಗಿ ಕರಿಮೆಣಸು ಆಮದನ್ನು ನಿಷೇಧಿಸಲು ಮುಂದಾಗಬೇಕು. ರಾಜ್ಯ ಸರಕಾರವೂ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಅಗತ್ಯ ಕ್ರಮಕೈಗೊಳ್ಳಬೇಕು. ಕರಿಮೆಣಸನ್ನು ಆಮದು ಮಾಡಿಕೊಂಡಿರುವ ವ್ಯಾಪಾರಿಗಳ ಪರವಾನಿಗೆ ಪತ್ರವನ್ನು ಕೂಡಲೇ ರದ್ದುಗೊಳಿಸಲು ಕ್ರಮಕೈಗೊಳ್ಳಲು ಒತ್ತಡ ಹಾಕಬೇಕೆಂದು ಹೇಳಿದರು.
ಕೊಡಗು ವನ್ಯ ಜೀವಿ ಸಂಘದ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ಮಾತನಾಡಿ, ಕರಿಮೆಣಸು ಆಮದು ನಿಷೇಧಕ್ಕೆ ಶೀಘ್ರ ಕ್ರಮಕೈಗೊಳ್ಳುವ ಮೂಲಕ ಬೆಳೆಗಾರರ ಹಿತಕಾಪಾಡಬೇಕೆಂದು ಹೇಳಿದರು. ಬೆಳೆಗಾರ ಮುಕ್ಕಾಟೀರ ಪೊನ್ನಪ್ಪ ಮಾತನಾಡಿ, ದೇಶಿಯ ಕರಿಮೆಣಸು ಬೆಳೆಗಾರರ ಹಿತಕಾಪಾಡಲು ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಮಾಧ್ಯಮಗಳು ಬೆಳಕು ಚೆಲ್ಲುವ ಕೆಲಸವಾಗಬೇಕೆಂದು ಹೇಳಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಸಹಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಸಲಹೆಗಾರ ಚೆಪ್ಪುಡೀರ ಶೆರಿ ಸುಬ್ಬಯ್ಯ, ಮಹಿಳಾ ಘಟಕದ ಕಾರ್ಯದರ್ಶಿ ಆಶಾ ಜೇಮ್ಸ್ ಉಪಸ್ಥಿತರಿದ್ದರು. ಸಭೆಯಲ್ಲಿ ಎಪಿಎಂಸಿ ಸದಸ್ಯರಾದ ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ, ಕಡೇಮಾಡ ಕುಸುಮಾ ಜೋಯಪ್ಪ, ಜಿಲ್ಲಾ ಹಿತರಕ್ಷಣ ಸಮಿತಿ ಕಾರ್ಯದರ್ಶಿ ಅರಮಾಣಮಾಡ ಸತೀಶ್ ದೇವಯ್ಯ, ಒಕ್ಕೂಟದ ಮಾಜಿ ಕಾರ್ಯದರ್ಶಿಗಳಾದ ಜಮ್ಮಡ ಮೋಹನ್ ಮಾದಪ್ಪ, ತೀತರಮಾಡ ಗಣೇಶ್, ರಾಜೇಂದ್ರ ಪ್ರಸಾದ್ ಮುಂತಾದವರು ಮಾತನಾಡಿದರು.