ಶನಿವಾರಸಂತೆ, ಸೆ. 25: ಶನಿವಾರಸಂತೆ ಸುತ್ತ ಮುತ್ತಲಿನ ಮೀಸಲು ರಕ್ಷಿತಾರಣ್ಯದಲ್ಲಿ ನಿರಂತರವಾಗಿ ಶ್ರೀ ಗಂಧ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಜಾಲವೊಂದನ್ನು ಅರಣ್ಯ ಇಲಾಖೆ ಬೇಧಿಸಿದೆ. ಈ ಕೃತ್ಯದಲ್ಲಿ ತೊಡಗಿದ್ದ ಮೂವರು ಆರೋಪಿಗಳ ಕುರಿತು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿ ಸಹಿತ ಸುಳಿವು ನೀಡಿದ್ದ ವ್ಯಕ್ತಿಯ ಮನೆ ಮೇಲೆ ಧಾಳಿ ನಡೆಸಿ ಕೊಲೆಗೆ ಯತ್ನಿಸಿರುವ ದುಷ್ಕøತ್ಯ ತಡವಾಗಿ ಬಹಿರಂಗಗೊಂಡಿದೆ.ಈಗಾಗಲೇ ಅಕ್ರಮ ಗಂಧ ಸಾಗಾಟ ಪ್ರಕರಣದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಮೂವರನ್ನು ಗಂಧ ಸಹಿತ ಕಳೆದ ಜುಲೈ 19 ರಂದು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಆ ಮೇರೆಗೆ ಚಿಕ್ಕಕಣಗಾಲು ಗ್ರಾಮದ ಪುರಂದರ, ಮಧುಸೂದನ, ಪೂವಯ್ಯ ಕಾನೂನು ಕ್ರಮಕ್ಕೆ ಒಳಗಾಗಿದ್ದಾರೆ.

ಜುಲೈ 19 ರಂದು ಆರೋಪಿಗಳು ಎಸಗಿರುವ ಈ ಕೃತ್ಯದಲ್ಲಿ ಮೂವರು ಗಂಧಚೋರರ ಪೈಕಿ, ಪ್ರಮುಖನಾಗಿರುವ ಪುರಂದರನ ಸಹೋದರ ಪಕ್ಕದ ಮನೆ ನಿವಾಸಿ ಯು.ಬಿ. ಚಂಗಪ್ಪ ಅವರ ಮನೆಯಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರಾದಲ್ಲಿ ಘಟನೆ ಸೆರೆಯಾಗಿತ್ತು.

ಅರಣ್ಯ ವಲಯಾಧಿಕಾರಿ ಕೊಟ್ರೇಶ್ ಹಾಗೂ ಸಿಬ್ಬಂದಿ ಈ ದ್ಯಶ್ಯಾವಳಿಗಳ ಸಾಕ್ಷಿ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಮೂವರ ಪೈಕಿ ಪ್ರಮುಖ ಆರೋಪಿ ಪುರಂದರ, ತನ್ನ ಅಳಿಯ ಮುಕ್ಕೋಡ್ಲು ಗ್ರಾಮದ ದಯಾನಂದ ಎಂಬಾತನ ಮೂಲಕ ಚಂಗಪ್ಪ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿ ತಿಳಿದು ಬಂದಿದೆ.

ಆ ದಿಸೆಯಲ್ಲಿ ಜುಲೈ 22 ರಂದು ರಾತ್ರಿ ದಯಾನಂದ ಹಾಗೂ ಮುಕ್ಕೋಡ್ಲುವಿನ ಟಿ.ಎಂ. ದಿನೇಶ್, ಟಿ.ಕೆ. ಕುಮಾರ್, ಮಾದಾಪುರ ನಿವಾಸಿ ಕೆ.ಕೆ. ಪ್ರದೀಪ್ ಅಕ್ರಮ ಕೂಟಕಟ್ಟಿಕೊಂಡು ಚಂಗಪ್ಪ ಅವರ ಮನೆ ಮೇಲೆ ಧಾಳಿ ನಡೆಸಿದ್ದಾರೆ. ಈ ಸಂದರ್ಭ ಮನೆ ಮಾಲೀಕ ಪತ್ನಿ ಹಾಗೂ ಮಗಳ ಸಹಿತ ಹೆದರಿಕೊಂಡು ಬಾಗಿಲು ತೆರೆದಿಲ್ಲ. ಈ ದೃಶ್ಯ ಕೂಡ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಮರುದಿನ ಚಂಗಪ್ಪ ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಶನಿವಾರಸಂತೆ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಲಭಿಸಿದೆ. ಈ ಸಂಬಂಧ ಎರಡು ತಿಂಗಳ ಬಳಿಕ ಎಚ್ಚೆತ್ತುಕೊಂಡು ಪೊಲೀಸ್ ಇಲಾಖೆಯು ಇದೇ ತಾ. 24 ರಂದು ಡಿವೈಎಸ್‍ಪಿ ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ ಹಾಗೂ ಸಿಬ್ಬಂದಿ ನಿನ್ನೆ ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ಪುರಂದರನ ಅಳಿಯ ಹಾಗೂ ಕೃತ್ಯದ ಪ್ರಮುಖ ಆರೋಪಿ ದಯಾನಂದ ಮನೆಯ ಹಿಂಬಾಗಿಲಿನಿಂದ ಪರಾರಿ ಯಾಗಿದ್ದಾನೆ. ಇನ್ನೋರ್ವ ಆರೋಪಿ ಟಿ.ಎಂ. ದಿನೇಶ್ ಜೀಪು (ಕೆಎ 12 ಎ 2030) ಸಹಿತ ಮಾರಕಾಸ್ತ್ರ ಗಳೊಂದಿಗೆ ಬಂಧಿಸಲ್ಪಟ್ಟಿದ್ದು, ಮೂರನೇ ಆರೋಪಿ ಟಿ.ಕೆ. ಕುಮಾರ್‍ನನ್ನು ಆತನ ಮನೆಯಲ್ಲಿ ವಶಕ್ಕೆ ಪಡೆಯಲಾಗಿದೆ. ನಾಲ್ಕನೇ ಆರೋಪಿ

(ಮೊದಲ ಪುಟದಿಂದ) ಕೆ.ಕೆ. ಪ್ರದೀಪ್ ಮಾದಾಪುರದ ತನ್ನ ಮನೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ.

ಬಂಧಿತ ಮೂವರ ಸಹಿತ ವಾಹನದೊಂದಿಗೆ 2 ಕತ್ತಿಗಳನ್ನು ಸ್ವಾಧೀನ ಪಡೆದ ಪೊಲೀಸರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಮೇರೆಗೆ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸಂತೋಷ್, ವಿಶ್ವನಾಥ್, ಮಂಜುನಾಥ್, ಹರೀಶ, ಶಫಿರ್ ಮೊದಲಾದವರು ಪಾಲ್ಗೊಂಡಿದ್ದರು.

ಮತ್ತೊಂದು ಪ್ರಕರಣ

ಮತ್ತೊಂದು ಪ್ರಕರಣ ಕೂಡ ಚಿಕ್ಕಕಣಗಾಲುವಿನಲ್ಲಿ ಬೆಳಕಿಗೆ ಬಂದಿದ್ದು, ಅಲ್ಲಿನ ಗಿರಿಜನ ಹಾಡಿಯ ಅಣ್ಣಯ್ಯ ಎಂಬಾತನನನ್ನು ಇತ್ತೀಚೆಗೆ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಈತನನ್ನು ಬಳಸಿಕೊಂಡು ನಿರಂತರ ದಂಧೆಯಲ್ಲಿ ತೊಡಗಿರುವ ಆರೋಪ ಎದುರಿಸುತ್ತಿರುವ ಸೋಮಯ್ಯ ಎಂಬಾತ ತಲೆಮರೆಸಿಕೊಂಡಿದ್ದು, ಈತ ಕಾಡಿನಿಂದ ಬೆಲೆ ಬಾಳುವ ಗಂಧ ತರಿಸಿ ತನ್ನ ದಿನಸಿ ಅಂಗಡಿ ಮೂಲಕ ಮೈಸೂರಿಗೆ ಸಾಗಿಸುತ್ತಿರುವದು ಬೆಳಕಿಗೆ ಬಂದಿದ್ದಾಗಿ ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. -ನರೇಶ್ಚಂದ್ರ