ಭಾಗಮಂಡಲ, ಸೆ. 26: ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಬರದ ಸಿದ್ಧತೆಗಳು ನಡೆಯುತ್ತಿದೆ. ಅಂಗಡಿ ಮುಂಗಟ್ಟುಗಳು ಸುಣ್ಣ ಬಣ್ಣಗಳಿಂದ ಲೇಪನವಾಗುತ್ತಿದೆ. ಗ್ರಾ.ಪಂ. ವತಿಯಿಂದ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ತಲಕಾವೇರಿಯಲ್ಲಿ ಪಂಚಾಯಿತಿ ವತಿಯಿಂದ ರೂ. 70 ಸಾವಿರಗಳಲ್ಲಿ ಸುಮಾರು 150ಕ್ಕೂ ಅಧಿಕ ವಾಹನ ನಿಲುಗಡೆಗೆ ನೂತನ ಜಾಗವನ್ನು ಗುರುತಿಸಿ ಸಮತಟ್ಟು ಮಾಡಲಾಗುತ್ತಿದೆ. ಸೂಕ್ತ ಜಾಗಗಳಲ್ಲಿ ನಾಮಫಲಕಗಳನ್ನು ಅಳವಡಿಸಲಾಗುತ್ತಿದ್ದು, ತಲಕಾವೇರಿಯಲ್ಲಿ ಕುಡಿಯುವ ನೀರು, ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಅಚ್ಚುಕಟ್ಟು ವ್ಯವಸ್ಥೆಯನ್ನು ಮಾಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಅಧಿಕ ನೀರಿನ ಮೋಟಾರನ್ನು ಖರೀದಿಸಿಟ್ಟುಕೊಳ್ಳಲಾಗಿದೆ. ಭಾಗಮಂಡಲದ ರಸ್ತೆ ಬದಿಗಳಲ್ಲಿದ್ದ ಹೊಂಡಗಳನ್ನು ಮುಚ್ಚಲಾಗಿದೆ. ಪಂಚಾಯಿತಿ ವತಿಯಿಂದ ಭಾಗಮಂಡಲದಲ್ಲಿ ರಸ್ತೆ ಬದಿಗಳಲ್ಲಿ 37 ತಾತ್ಕಾಲಿಕ ಅಂಗಡಿ ಮಳಿಗೆಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಅಂಗಡಿ ಮುಂಗಟ್ಟುಗಳ ಜೋಡಣೆ ಕಾರ್ಯ ನಡೆಯುತ್ತಿದೆ.
ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಬೀದಿ ದೀಪ ಅಳವಡಿಕೆ ಕಾರ್ಯವೂ ಮುಂದುವರೆದಿದ್ದು, ಗ್ರಾ.ಪಂ. ಜಾತ್ರೆ ವಿಶೇಷವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ದೇವಾಲಯ ವತಿಯಿಂದ ಸಿದ್ಧತಾ ಕಾರ್ಯಗಳು ಆರಂಭಗೊಂಡಿದ್ದು, ಗೋಪುರ ಸ್ವಚ್ಛತಾ ಕಾರ್ಯ ಹಾಗೂ ಇನ್ನಿತರ ಕಾರ್ಯಗಳು ನಡೆಯುತ್ತಿವೆ.ಕಾವೇರಿ ತುಲಾ ಸಂಕ್ರಮಣಕ್ಕೆ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಇಂದು ತುಲಾ ಲಗ್ನದಲ್ಲಿ ಬೆಳಿಗ್ಗೆ 8.45ಕ್ಕೆ ಪತ್ತಾಯಕ್ಕೆ ಅಕ್ಕಿ ಹಾಕುವದರೊಂದಿಗೆ ಧಾರ್ಮಿಕ ಕಾರ್ಯಕ್ಕೆ ಚಾಲನೆ ದೊರೆಯಿತು.
ಭಗಂಡೇಶ್ವರ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಹಾಗೂ ಕುಟುಂಬಸ್ಥರು ಬಳ್ಳಡ್ಕ ಐನ್ಮನೆಯಲ್ಲಿ ಸೇರಿ ಪ್ರಾರ್ಥನೆಗೈದು ದೇವಾಲಯಕ್ಕೆ ಆಗಮಿಸಿ ತಕ್ಕರಾದ ಅಪ್ಪಾಜಿ ಪತ್ತಾಯಕ್ಕೆ ಅಕ್ಕಿಯನ್ನು ಹಾಕಿದರು.
ಈ ಸಂದರ್ಭ ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ, ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಪಾರುಪತ್ತೆಗಾರ ಪೊನ್ನಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.