ಕುಶಾಲನಗರ, ಸೆ. 25 : ಊರಿನ ಸ್ವಚ್ಛತೆಗಾಗಿ ಸದಾ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವದು ಅತ್ಯಗತ್ಯ ಎಂದು ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷÀ ಟಿ.ಆರ್.ಶರವಣಕುಮಾರ್ ಕಿವಿಮಾತು ಹೇಳಿದರು. ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸದಾ ದುಶ್ಚಟಗಳಿಗೆ ದಾಸರಾಗಿದ್ದ ಪೌರಕಾರ್ಮಿಕರಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿದೆ. ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗ ಕೊಡಿಸುವ ಮೂಲಕ ಸಮಾಜದಲ್ಲಿ ಇತರರಂತೆ ತಾವು ಕೂಡ ಜೀವನ ಕಟ್ಟಿಕೊಳ್ಳುತ್ತಿರುವದು ಸಂತಸದ ವಿಚಾರವಾಗಿದೆ ಎಂದರು.
ಊರಿನ ಶುಚಿತ್ವ ಕಾರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಪೌರಕಾರ್ಮಿಕರಿಗೆ ರಾಜ್ಯ ಸರಕಾರ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂದು ಆಗ್ರಹಿಸಿದರು.
ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಂ.ಚರಣ್, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಡಿ.ಚಂದ್ರು, ಸದಸ್ಯರಾದ ಹೆಚ್.ಜೆ.ಕರಿಯಪ್ಪ, ಪ್ರಮೋದ್ ಮುತ್ತಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಪೌರ ಕಾರ್ಮಿಕರುಗಳಾದ ಮಂಜುನಾಥ್, ರಘು, ಲಕ್ಷ್ಮಣ, ಬಣ್ಣಾರಿ ಅವರುಗಳನ್ನು ಗೌರವಿಸಲಾಯಿತು.
ಇದೇ ಸಂದರ್ಭ ಪೌರ ಕಾರ್ಮಿಕರಿಗೆ ಗೌರವ ಧನವನ್ನು ವಿತರಿಸಲಾಯಿತು. ಪೌರಕಾರ್ಮಿಕರು ತಮ್ಮ ಸಮಸ್ಯೆಗಳು, ಆಗ್ರಹಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ರೇಣುಕಾ, ಸುರಯ್ಯಭಾನು, ಕವಿತಾ, ಫಜಲುಲ್ಲಾ ಇದ್ದರು.