ಮಡಿಕೇರಿ, ಸೆ. 26: ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ರಾಜ್ಯ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಈ ಕೆಳಗಿನ ಪತ್ರ ಬರೆದಿದ್ದಾರೆ.ಕೊಡಗು ಜಿಲ್ಲೆಯ ಪ್ರಮುಖ ದಿನಪತ್ರಿಕೆಯಾದ ಶಕ್ತಿ ದಿನಪತ್ರಿಕೆಯಲ್ಲಿ ತಾ. 21 ರಂದು ಪ್ರಕಟವಾಗಿರುವ ‘ಬಾಳೆಲೆ ಆರೋಗ್ಯ ಕೇಂದ್ರ ಖಾಸಗಿ ಸಂಸ್ಥೆಯ ವಶಕ್ಕೆ’ ಎಂಬ ಪ್ರಮುಖ ಪತ್ರಿಕಾ ವರದಿಯ ಪ್ರತಿಯನ್ನು ತಮ್ಮ ಮುಂದಿನ ಕ್ರಮಕ್ಕಾಗಿ ಈ ಮೂಲಕ ಕಳುಹಿಸಿರುತ್ತೇನೆ.
ಯಾವದೇ ರಾಜ್ಯ ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಲಿ ಅಥವಾ ಜಿಲ್ಲಾಮಟ್ಟದ ಆರೋಗ್ಯ ಕೇಂದ್ರಗಳಾಗಲಿ ಜಿಲ್ಲೆಯ ಅಥವಾ ರಾಜ್ಯದ ರೋಗಿಗಳ ಹಿತದೃಷ್ಟಿಯಿಂದ ಸರ್ಕಾರವೇ ನಡೆಸಬೇಕೆಂಬದು ರಾಜ್ಯ ಸರ್ಕಾರದ ಒಂದು ನೀತಿಯ ಪ್ರಶ್ನೆ. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮತ್ತು ತಾಲೂಕು ಮಟ್ಟದ ಕೆಲವು ಆರೋಗ್ಯ ಕೇಂದ್ರಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಟ್ಟಿರುವದು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಕಾರ್ಯವೈಖರಿಯನ್ನು ಈ ಪತ್ರಿಕಾ ವರದಿ ಬೆಳಕು ಚೆಲ್ಲುತ್ತದೆ.
ಬಾಳೆಲೆ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲಾ ರಾಜಕೀಯ ಪಕ್ಷದ ಪ್ರತಿನಿಧಿಗಳು, ಗ್ರಾಮಸ್ಥರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಇಂತಹ ವರ್ಗಾವಣೆಯನ್ನು ವಿರೋಧಿಸಿದ್ದರೂ ಕೂಡ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ನಿವೃತ್ತಿಗೊಂಡ ಜಿಲ್ಲಾ ವೈದ್ಯಾಧಿಕಾರಿಗಳು ಈ ಒಂದು
(ಮೊದಲ ಪುಟದಿಂದ) ಸರ್ಕಾರಿ ಆಸ್ಪತ್ರೆಯನ್ನು ಬೆಂಗಳೂರಿನ ಉದ್ಭವ ಶೈಕ್ಷಣಿಕ್ ಹಾಗೂ ಗ್ರಾಮೀಣ ಆರೋಗ್ಯ ಸಂಸ್ಥೆಗೆ ಗುತ್ತಿಗೆ ಮುಖಾಂತರ ನಿರ್ವಹಣೆಗೆ ನೀಡಿರುವದು ಸರ್ಕಾರದ ನೀತಿಯ ಪ್ರಶ್ನೆಯ ಒಂದು ಸ್ಪಷ್ಟ ಉಲ್ಲಂಘನೆ. ಇದೇ ಸಂಸ್ಥೆಗೆ ಕೆಲವು ವರ್ಷಗಳ ಹಿಂದೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಸೂರ್ಲಬ್ಬಿ ಪಂಚಾಯಿತಿಗೆ ಒಳಪಟ್ಟಿರುವ ಸರ್ಕಾರಿ ಆಸ್ಪತ್ರೆಯನ್ನು ಹೊರಗುತ್ತಿಗೆಗೆ ಕೊಟ್ಟಿರುವದು ಮತ್ತು ಅಲ್ಲಿ ಈ ಒಂದು ಖಾಸಗಿ ಸಂಸ್ಥೆ ನಡೆಸಿರುವ ಅವ್ಯವಹಾರಗಳನ್ನು ಕೆಲವು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಶಾಮೀಲಾಗಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಸಿದ ಹಿನ್ನೆಲೆಯಲ್ಲಿ ಆ ಸಂಸ್ಥೆಯನ್ನು ಆ ಭಾಗದ ಕೆಲವು ರಾಜಕೀಯ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಜಿಲ್ಲಾ ಆರೋಗ್ಯ ಇಲಾಖೆ ಮಾಡಿರುವ ತಪ್ಪನ್ನು ಅರಿತು ಸರ್ಕಾರವೇ ಆ ಸಂಸ್ಥೆಯನ್ನು ವಹಿಸಿಕೊಂಡ ಮೇಲೂ ಪುನಹ ಅದೇ ಸಂಸ್ಥೆಗೆ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ವಹಿಸಿರುವದು ಕೊಡಗು ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿರುವ ಮತ್ತು ಇದಕ್ಕೆ ಒಪ್ಪಿಗೆ ನೀಡಿರುವ ರಾಜ್ಯಮಟ್ಟದ ಆರೋಗ್ಯ ಇಲಾಖೆಯ ಭ್ರಷ್ಟಾಚಾರವೇ ಮೂಲ ಕಾರಣವೆಂದು ಹೇಳಿದರೆ ಅತಿಶಯೋಕ್ತಿಯಲ್ಲ.
ತಮಗೆ ಕಳುಹಿಸಿರುವ ಶಕ್ತಿ ದಿನಪತ್ರಿಕೆಯ ಪ್ರತಿಯಲ್ಲಿ ಇದರ ಬಗ್ಗೆ ಸಂಪೂರ್ಣವಾದ ವಿವರಣೆಯನ್ನು ಕೊಡುವದರ ಮೂಲಕ ಕರ್ನಾಟಕ ರಾಜ್ಯದ ಆರೋಗ್ಯ ಖಾತೆಯ ಸಚಿವರಾಗಿ ತಮ್ಮ ಗಮನವನ್ನು ಈ ಭಾಗದ ಜನರು ಸೆಳೆದಿದ್ದಾರೆ. ತಾವು ಈ ಕೂಡಲೇ ಶಕ್ತಿ ದಿನಪತ್ರಿಕೆಯಲ್ಲಿ ಬಂದಿರುವ ವರದಿಯ ಬಗ್ಗೆ ಕೂಡಲೇ ನಿಷ್ಪಕ್ಷಪಾತವಾದ ತನಿಖೆಯನ್ನು ನಡೆಸಿ ಇದಕ್ಕೆ ಕಾರಣಕರ್ತರಾದ ಭ್ರಷ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕೆಂದು ಕೋರುವದಲ್ಲದೆ, ಈ ಒಂದು ಸರ್ಕಾರಿ ಆರೋಗ್ಯ ಕೇಂದ್ರವನ್ನು ಖಾಸಗಿ ಸಂಸ್ಥೆಗೆ ವಹಿಸಿರುವ ಆದೇಶವನ್ನು ರದ್ದುಪಡಿಸಬೇಕೆಂದು ಕೋರುವದಾಗಿ ಯಂ.ಸಿ. ನಾಣಯ್ಯ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.