ಕುಶಾಲನಗರ, ಸೆ. 25: ಕೊಡವ ಸಂಸ್ಕøತಿ, ಆಚಾರ, ವಿಚಾರಗಳು ಉಳಿಯಬೇಕೆಂದರೆ ಯುವಪೀಳಿಗೆ ದಾರಿ ತಪ್ಪದಂತೆ ಅರಿವು ಮೂಡಿಸುವದು ಪೋಷಕರ ಕರ್ತವ್ಯವಾಗಿದೆ ಎಂದು ವಾಲ್ನೂರಿನ ಕಾಫಿ ಬೆಳೆಗಾರ ಚೇಂದಂಡ ಎಸ್.ಪೊನ್ನಪ್ಪ ಹೇಳಿದರು.

ಕುಶಾಲನಗರ ಕೊಡವ ಸಮಾಜದ ಆಶ್ರಯದಲ್ಲಿ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೈಲ್‍ಪೊಳ್ದ್ ಸಂತೋಷಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೊಡವರು ಎಲ್ಲಾ ಕ್ಷೇತ್ರದಲ್ಲೂ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವದು ಸಂತಸದ ವಿಚಾರವಾಗಿದೆ. ಜಿಲ್ಲೆಯ ಹೊರ ಭಾಗಗಳಲ್ಲಿ ನೆಲೆಸಿರುವ ಕೊಡವರು ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗದೆ ತಮ್ಮ ಮಕ್ಕಳಿಗೆ ಕೊಡವ ಸಂಸ್ಕøತಿಯ ಬಗ್ಗೆ ಅರಿವು ಮೂಡಿಸಬೇಕು. ಕೊಡವ ಹಬ್ಬ, ಹರಿದಿನಗಳ ಸಂದರ್ಭ ಮಕ್ಕಳು ಹೆಚ್ಚಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕಿದೆ ಎಂದರು.

ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರು ರಚಿಸಿದ ‘ಬಲ್ಲಾದೆ ಪಳಮೆ’ ಕೃತಿಯನ್ನು ಬಿಡುಗಡೆಗೊಳಿಸ ಲಾಯಿತು. ಈ ಸಂದರ್ಭ ಮಾತನಾಡಿದ ರಮೇಶ್ ಉತ್ತಪ್ಪ, ಕೊಡವರಿಗೆ ತಮ್ಮ ಪದ್ದತಿಯ ಬಗ್ಗೆ ಅಭಿಮಾನ ಇರಬೇಕು. ಸಂಸ್ಕøತಿಯ ದುರುಪಯೋಗವಾಗದಂತೆ ಎಚ್ಚರವಹಿಸಬೇಕು ಎಂದರು. ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಕೊಡವ ಪದ್ದತಿ, ಪರಂಪರೆ ವ್ಯವಸ್ಥೆಗಳ ಮಹತ್ವದ ಬಗ್ಗೆ ಸಮಾಜದ ಮೂಲಕ ಪ್ರತಿಯೊಬ್ಬರಿಗೆ ಮನವರಿಕೆ ಆಗುವ ಕಾರ್ಯಕ್ರಮಗಳು ಹಮ್ಮಿಕೊಳ್ಳುವದಾಗಿ ತಿಳಿಸಿದರು. ಸಮಾಜದ ಬಗ್ಗೆ ಬಹಿರಂಗ ಚರ್ಚೆಗೆ ಯಾರೂ ಆಸ್ಪದ ಕಲ್ಪಿಸಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಡೀನಾ ಬೊಳ್ಳಮ್ಮ ಅವರು ಯುವಪೀಳಿಗೆ ದಾರಿ ತಪ್ಪದಂತೆ ಜಾಗೃತಿ ಮೂಡಿಸುವ ಸಲುವಾಗಿ ಕೆಲವು ಹಿತವಚನಗಳನ್ನು ಹೇಳಿದರು.

ಸಮಾಜದ ಉಪಾಧ್ಯಕ್ಷ ಆಯಿಲಪಂಡ ಮಂದಣ್ಣ, ಕಾರ್ಯದರ್ಶಿ ಪುಲಿಯಂಡ ಚಂಗಪ್ಪ, ಖಜಾಂಚಿ ಗೌಡಂಡ ಗಣೇಶ್ ದೇವಯ್ಯ, ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಇದ್ದರು. ಕೊಡವ ಮಕ್ಕಡ ಕೂಟದ ವತಿಯಿಂದ ಬಲ್ಲಾದೆ ಪಳಮೆ ಪುಸ್ತಕದ ಪ್ರತಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಸಮಾರಂಭಕ್ಕೂ ಮುನ್ನ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕೈಲ್‍ಪೊಳ್ದ್ ನಮ್ಮೆಗೆ ಚಾಲನೆ ನೀಡುವದರೊಂದಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.