ಮಡಿಕೇರಿ, ಸೆ. 25: ಕಳೆದ ತಾ. 9 ರಂದು ಸಂಜೆಗತ್ತಲೆ ನಡುವೆ ಮಾಲ್ದಾರೆ ಸಂರಕ್ಷಿತ ಅರಣ್ಯದೊಳಗೆ ಅಕ್ರಮ ಪ್ರವೇಶಿಸಿ ವನ್ಯಪ್ರಾಣಿಗಳನ್ನು ಕಳ್ಳಬೇಟೆಯಾಡುತ್ತಿದ್ದ ಸಂಬಂಧ ವಶಪಡಿಸಿಕೊಂಡಿರುವ ಎರಡು ಕೋವಿಗಳು ಹಾಗೂ ಮದ್ದುಗುಂಡುಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.ಸೋಮವಾರಪೇಟೆ ಅರಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಸೂಚಿಸಿದ್ದು, ಆ ಮೇರೆಗೆ ತನಿಖೆ ಮುಂದುವರಿದಿರುವದಾಗಿ ತಿಳಿದು ಬಂದಿದೆ.
ತಾ. 9 ರ ರಾತ್ರಿ ಆರೋಪಿಗಳು ಬಿಟ್ಟು ಪರಾರಿಯಾಗಿದ್ದ ಎರಡು ಕೋವಿಗಳಲ್ಲಿ ಮದ್ದುಗುಂಡು ತುಂಬಿಸಲಾಗಿತ್ತು ಎಂದು ಗೊತ್ತಾಗಿದೆ. ಅಲ್ಲದೇ ಅಂದು ರಾತ್ರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್, ಸಹಾಯಕ ಅರಣ್ಯಾಧಿಕಾರಿ ಮಂಜುನಾಥ್ ಗೂಳಿ ಹಾಗೂ ಸಿಬ್ಬಂದಿಗಳಿಗೆ ಕೂಡ ನೋಟೀಸ್ ಜಾರಿಗೊಳಿಸಿ ಹೇಳಿಕೆ ಪಡೆಯಲಾಗಿದೆ.
ಆ ಮೇರೆಗೆ ಮಾಲ್ದಾರೆ ಅರಣ್ಯ ಪ್ರವೇಶಿಸಿರುವ ಬೇಟೆಗಾರರ ತಂಡವನ್ನು ಗಮನಿಸಿರುವ ಮಾಲ್ದಾರೆಯ ಕೆಲ ಮಂದಿ ಸ್ಥಳೀಯರನ್ನು ಕೂಡ ಅರಣ್ಯಾಧಿಕಾರಿ ಗಳು ವಿಚಾರಣೆ ಗೊಳಪಡಿಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಇನ್ನು ಬೇಟೆಗೆ ತೆರಳಿದ್ದ ವಾಹನ ಮಾಲೀಕ ಹಾಗೂ ಹಾಲುಗುಂದ ಗ್ರಾಮದ ಪಂಚಾಯಿತಿ ಸದಸ್ಯ ದಿನೇಶ್ ಹಾಗೂ ಇತರ ಐವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾಯ್ದೆ 307ರ ಅಡಿ ಪ್ರಕರಣ ದಾಖಲಾಗಿದ್ದು, ಇದುವರೆಗೆ ಆರೋಪಿಗಳ ಬಂಧನವಾಗಿಲ್ಲವೆಂದು ಮೂಲಗಳು ಖಾತರಿಪಡಿಸಿವೆ.