ಮಡಿಕೇರಿ, ಸೆ. 25: ಮಡಿಕೇರಿ ದಸರಾ ಉತ್ಸವದಲ್ಲಿ 41ನೇ ವರ್ಷದ ಉತ್ಸವ ಆಚರಣೆಗೆ ಶ್ರೀ ಕೋಟೆ ಮಹಾಗಣಪತಿ ದೇವಾಲಯ ದಸರಾ ಸಮಿತಿ ಸಜ್ಜಾಗುತ್ತಿರುವದಾಗಿ ಸಮಿತಿಯ ಅಧ್ಯಕ್ಷ ಬಿ.ಪಿ. ಗುರುಕಿರಣ್ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ವಿನಾಯಕನಿಂದ ತಾಳಾಸುರನ ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಮಡಿಕೇರಿಯ ಪೂಜಾ ಲೈಟಿಂಗ್ಸ್ ನಜೀರ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ ವ್ಯವಸ್ಥೆಯನ್ನು ಮಡಿಕೇರಿಯ ಫ್ಯೂಚರ್ ಈವೆಂಟ್‍ನ ಲೋಕೇಶ್ ಮಾಡಲಿದ್ದಾರೆ. 19 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಉದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಪ್ಲಾಟ್‍ಫಾರಂ ನಿರ್ಮಾಣ ಹಾಗೂ ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆಯನ್ನು ಮಡಿಕೇರಿ ಸಿದ್ಧಪ್ಪಾಜಿ ಕ್ರಿಯೇಷನ್ಸ್‍ನ ಹೊನ್ನಪ್ಪ ಸುರೇಶ್ ಮತ್ತು ತಂಡದವರು ಮಾಡಲಿದ್ದಾರೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಫಿಕ್ಸಲ್ ಕ್ರಿಯೇಷನ್ಸ್‍ನ ಗಣೇಶ್ ಮತ್ತು ನಿತೀಶ್ ತಂಡ ಮಾಡಲಿದೆ.

ಕಥಾ ಸಾರಾಂಶವನ್ನು ಆರ್.ಬಿ. ರವಿ ಆಯ್ಕೆ ಮಾಡಿದ್ದು, ಕೊಡಗಿನ ಸಾಂಪ್ರದಾಯಿಕ ವಾಲಗ ಮಂಟಪವನ್ನು ಮುನ್ನಡೆಸಲಿದೆ ಎಂದು ಗುರುಕಿರಣ್ ಮಾಹಿತಿಯಿತ್ತರು. ಟೀಂ-99 ರೆಟ್ರೋ ಟ್ರ್ಯಾಂಗಲ್‍ನವರು ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಿದ್ದು, ಮಂಟಪದಲ್ಲಿ ಹಾಗೂ ಮಂಟಪದ ಸುತ್ತಮುತ್ತ ಯಾವದೇ ದುಷ್ಕøತ್ಯಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಇದೇ ಮೊದಲ ಬಾರಿಗೆ ಮಂಟಪದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುತ್ತಿ ದ್ದೇವೆ. ಒಟ್ಟು 19.50 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ. ಜನಾಕರ್ಷಣೆ ಯೊಂದಿಗೆ ಪ್ರಥಮ ಬಹುಮಾನಕ್ಕೂ ಪೈಪೋಟಿ ನೀಡಲಾಗುವದು ಎಂದು ಗುರುಕಿರಣ್ ವಿವರಿಸಿದರು.

- ಉಜ್ವಲ್ ರಂಜಿತ್