ಮಡಿಕೇರಿ, ಸೆ. 25: ಸಮಾಜದಲ್ಲಿನ ಕ್ರೌರ್ಯ, ಅಟ್ಟಹಾಸ, ಅತ್ಯಾಚಾರ, ರೈತರು ಪರಿಸರದ ಬಗೆಗಿನ ಕಾಳಜಿಯ ಕನಸಿನ ಭಾವನೆಗಳು ಕಾವೇರಿ ಕಲಾಕ್ಷೇತ್ರದಲ್ಲಿ ಮಾರ್ದನಿಸಿದವು.., ಮುಗ್ಧ ಮನಸಿನ ಭಾವನೆಗಳಂತೂ ಎಲ್ಲರ ಮನಸೂರೆಗೊಂಡವು.ದಸರಾ ಉತ್ಸವದ ಅಂಗವಾಗಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡ ಸೇರಿದಂತೆ ಇತರ ಸೋದರ ಭಾಷೆಗಳಲ್ಲಿ ಕವಿ ಮನದ ಭಾವನೆಗಳು ಹೊರ ಹೊಮ್ಮಿದವು. ಸುಕುಮಾರ್ ತೊರೆನೂರು ಅವರು ಮಾರ್ಗದರ್ಶಕರನ್ನು ನೆನೆಸಿಕೊಂಡರೆ, ಎಸ್.ಕೆ. ಈಶ್ವರಿ ಅವರು ಹಳೆಯ ಕಾಲದ ಜೀವನ, ಹುಲ್ಲಿನ ಮನೆಯನ್ನು ನೆನಪಿಸಿದರು. ವಿದ್ಯಾರ್ಥಿನಿ ವಿ.ಡಿ. ಸಿಂಚನ ‘ಓಡಿ ಓಡಿ ತಪ್ಪಿಸಿಕೊಳ್ಳಿ ಗೆಳೆಯರೇ ಮಕ್ಕಳನ್ನು ಹಿಡಿಯಲು ಬರುತ್ತಿದ್ದಾರೆ’ ಎಂಬ ಕವನದಲ್ಲಿ ಮಕ್ಕಳ ಮೇಲಾಗುತ್ತಿರುವ ಕ್ರೌರ್ಯವನ್ನು ಮನಮುಟ್ಟುವಂತೆ ತೆರೆದಿಟ್ಟಳು. ಆಹ್ವಾನಿತ ಕವಿಯಾಗಿದ್ದ ಕೊಟ್ಟಕೇರಿಯನ ಲೀಲಾ ದಯಾನಂದ್ ಅವರು ‘ಬಾಕೆ ಬುಡವ್ವ’ ಅನ್ನೋ ಕವನದಲ್ಲಿ ಹೆಣ್ಣು ಮಗುವಿನ ಹುಟ್ಟಿನ ಕಷ್ಟದ ಬಗ್ಗೆ ವಿವರಿಸಿದರು.

ಅಲ್ಲಾರಂಡ ವಿಠಲ ಅವರು ‘ಹೆಣಗಳೊಂದಿಗೆ ಮಾತು ಕಟ್ಟಿಕೊಂಡವರು’ ಎಂಬ ಕವನದಲ್ಲಿ ಸಮಾಜದ ಭ್ರಷ್ಟ ವ್ಯವಸ್ಥೆಯ ಬಗ್ಗೆ ಬಣ್ಣಿಸಿದರೆ, ಕಸ್ತೂರಿ ಗೋವಿಂದಮ್ಮಯ್ಯ ಅವರು ಗಂಡು ಮಕ್ಕಳೇ ಬೇಕೆಂಬ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲಿನ ಶೋಷಣೆ ಬಗ್ಗೆ ‘ಭರವಸೆ’ ಕವನದಲ್ಲಿ ಹೇಳಿದರು. ವಿ.ಎನ್. ರಂಜಿತಾ ಕಾರ್ಯಪ್ಪ ತಾಯಿಯ ಮಮತೆಯ ಬಗ್ಗೆ ಹೇಳಿದರೆ, ಪುಟಾಣಿ ಚೆರಿಯಮನೆ ಪ್ರತಂ ಪರಿಸರದ ಬಗೆಗಿನ ಕಾಳಜಿ ವ್ಯಕ್ತಪಡಿಸಿದ. ಕಿಗ್ಗಾಲು ಗಿರೀಶ್ ಬದುಕು ಕಲಿಸುವ ಪಾಠವನ್ನು ಹೇಳಿಕೊಟ್ಟರೆ, ಯು.ಆರ್. ಅಕ್ರಂ ಗೋಸಾಗಾಟದ ಗೋರಕ್ಷಣೆಯ ಪರಿಯನ್ನು ತಮ್ಮದೇ ಧಾಟಿಯಲ್ಲಿ ಬಿಂಬಿಸಿದರು.

ಮತ್ತೋರ್ವ ಆಹ್ವಾನಿತ ಕವಿ ನಾಗೇಶ್ ಕಾಲೂರು ಪತ್ರಕರ್ತರ ಹತ್ಯೆ, ಸಾಧುಸಂತರ ಕಾಮಕ್ರೀಡೆ, ಸಮಾಜದ ಕ್ರೌರ್ಯದ ಪರಿಯನ್ನು ‘ಕೇವಲ ಸುದ್ದಿಗಳು’ ಎಂಬ ಕವನದಲ್ಲಿ ಬಿತ್ತರಿಸಿದರು. ಕಡ್ಲೇರ ಜಯಲಕ್ಷ್ಮಿ ಸಂಸ್ಕøತಿಯ ಪ್ರತೀಕವಾದ ಐನ್‍ಮನೆಯ ಸೊಬಗು ಬಣ್ಣಿಸಿದರೆ, ವಿದ್ಯಾರ್ಥಿನಿ ಶ್ರಾವಣಿ ರೈತರ ಬಗೆಗಿನ ಕಾಳಜಿ ವ್ಯಕ್ತಪಡಿಸಿದಳು. ನರಿಯೂರು ದಯಾನಂದ ಸಮಾಜದಲ್ಲಿ ತಾತ್ಸಾರ ಬಗ್ಗೆ ಒಂದು ನಾಯಿಯ ಸಾವಿನ ಸುತ್ತ ಹೆಣೆದ ಪದ ಪುಂಜಗಳಲ್ಲಿ ಹಿಡಿದಿಟ್ಟರು.

ಸಾಹಿತ್ಯಾಭಿಮಾನಿಗಳಿಂದ ತುಂಬಿದ್ದ ಕಾವೇರಿ ಕಲಾಕ್ಷೇತ್ರದಲ್ಲಿ ಕವಿಮನಸುಗಳ ಭಾವರಸಗಳು ಮುದ ನೀಡಿದವು.

ಕವಿಗೋಷ್ಠಿಗೆ ಚಾಲನೆ

‘ಇದು ಬಹುಭಾಷಾ ಕವಿಗೋಷ್ಠಿ, ಈಗಾಗಲೇ ಆಗಿದೆ ಕವನಗಳ ಸೃಷ್ಟಿ, ನಿಮ್ಮೆಲ್ಲರ ಮೇಲಿದೆ ಎಲ್ಲರ ದೃಷ್ಟಿ, ಕೇಳಿ ಮಾಡಬಹುದ ಪುಷ್ಪಾವೃಷ್ಟಿ’ ಇದು ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ಸೋಮವಾರ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು

(ಮೊದಲ ಪುಟದಿಂದ) ಚುಟುಕು ಕವನ ಬರೆಯುವ ಮೂಲಕ ಚಾಲನೆ ನೀಡಿದರು.

ಇಂದಿನ ಅವಸರದ ಹಾಗೂ ಯಾಂತ್ರಿಕ ಬದುಕಿನಲ್ಲಿ ಕವಿ, ಸಾಹಿತಿಯಾಗುವದು ಕಷ್ಟ ಸಾಧ್ಯ. ಈ ಒತ್ತಡ ಮತ್ತು ಶರವೇಗದ ಬದುಕಿನಲ್ಲಿಯೂ ಕವಿ, ಕವನ ಬರೆಯುವದರಲ್ಲಿ ತೊಡಗಿಸಿಕೊಳ್ಳುವದು ಸಮಾಜದ ಒಳಿತು-ಕೆಡುಕುಗಳ ಬಗ್ಗೆ ಬೆಳಕು ಚೆಲ್ಲುವದಕ್ಕೆ ಸಹಕಾರಿ. ಕವಿ, ಸಾಹಿತಿಯಾಗಲು ಆತ್ಮಾವಲೋಕನ ಮಾಡಿಕೊಳ್ಳುವ ಗುಣವಿರಬೇಕು ಎಂದು ಅಭಿಪ್ರಾಯಪಟ್ಟರು.

ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಬಹುಭಾಷಾ ಕವಿಗೋಷ್ಠಿಯಲ್ಲಿ ಎಲ್ಲಾ ಬಾಷೆಗಳಲ್ಲಿ ಕವನ ವಾಚಿಸಲು ಅವಕಾಶ ನೀಡಲಾಗಿದೆ. ಜೊತೆಗೆ ಹೊಸಬರಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಕವಿಗೋಷ್ಠಿ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಆಚಾರ-ವಿಚಾರ, ಕಲೆ, ಸಂಸ್ಕøತಿ, ಹಾಗೂ ಪ್ರತಿನಿತ್ಯದ ಆಗುಹೋಗುಗಳನ್ನು ಕಥೆ, ಕವನಗಳ ಮೂಲಕ ಕಟ್ಟಿ ಕೊಡಬಹುದಾಗಿದೆ. ಬಡತನ, ಶ್ರೀಮಂತಿಕೆ ನಡುವೆ ಮುಗ್ಧತೆಯ ನ್ಶೆಜ ಚಿತ್ರಣ ಬರೆಯುವದೇ ಕವನವಾಗಿದೆ ಎಂದು ಅಭಿಪ್ರಾಯಪಟ್ಟರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ದಸರಾ ಸಮಿತಿ ಕಾರ್ಯಧ್ಯಕ್ಷರಾದ ಮಹೇಶ್ ಜೈನಿ, ಪತ್ರಿಕಾ ಭವನ ಮ್ಯಾನೇಜಿಂಗ್ ಟ್ರಸ್ಟಿ ಮನುಶೆಣೈ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಚುಮ್ಮಿದೇವಯ್ಯ, ಖಜಾಂಜಿ ಸಂಗೀತಾ ಪ್ರಸನ್ನ, ಪೌರಾಯುಕ್ತರಾದ ಬಿ.ಶುಭಾ ಇತರರು ಇದ್ದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಸಮಾರೋಪ ಸಮಾರಂಭದಲ್ಲಿ ಮಾತನಾಡಿ 39 ಮಂದಿ ಕವನ ವಾಚಿಸಿದ್ದಾರೆ, ಅವುಗಳಲ್ಲಿ ಕನ್ನಡ, ಕೊಡವ, ಅರೆಭಾಷೆ, ತುಳು, ತೆಲುಗು, ಇಂಗ್ಲೀಷ್ ಭಾಷೆಗಳಲ್ಲಿ ಕವನ ಮಂಡಿಸಿದರು, ಆದರೆ ಬ್ಯಾರಿ ಮತ್ತು ಕೊಂಕಣಿ ಭಾಷೆಯಿಂದ ಯಾರು ಕವನ ವಾಚಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಹುಭಾಷಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನಗಳನ್ನು ಪುಸ್ತಕ ರೂಪದಲ್ಲಿ ಹೊರತರುವಂತಾಗಬೇಕು ಎಂದು ಸಲಹೆ ಮಾಡಿದರು. ಹಿಂದೆ ಕವಿಗಳಿಗೆ ಅವಕಾಶ ಸಿಗುತ್ತಿರಲಿಲ್ಲ. ಈಗ ಸಾಕಷ್ಟು ಅವಕಾಶ ಸಿಗುತ್ತಿವೆ. ಕವಿಗೋಷ್ಠಿಗಳಿಗೆ ಜನರು ಬರುವಂತೆ ಮಾಡಬೇಕೆಂದರು.

ಈ ಸಂದರ್ಭ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಈ ಬಾರಿಯ ಕವನ ವಾಚನದ ಪುಸ್ತಕ ಹೊರತರಲು ಇಲಾಖೆಯಿಂದ ಸಹಕಾರ ನೀಡಲಾಗುವದು ಎಂದರು.

ಜಾನಪದ ಅಕಾಡೆಮಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎನ್.ನಾಸೀರ್, ಸಮಿತಿ ಸದಸ್ಯರಾದ ಕುಡೆಕಲ್ ಸಂತೋಷ್, ಕೆ.ಎ.ಆದಿತ್ಯ, ಕೆ.ಬಿ.ಮಂಜುನಾಥ್, ಗೋಪಾಲ್ ಸೋಮಯ್ಯ, ವಿಘ್ನೇಶ್ ಎಂ.ಭೂತನಕಾಡು, ಉದಿಯಂಡ ಜಯಂತಿ ಮಂದಣ್ಣ, ಕಿಶೋರ್ ರೈ, ಸುವರ್ಣ ಮಂಜು ಇತರರು ಇದ್ದರು.

ಬಹುಭಾಷಾ ಕವಿಗೋಷ್ಠಿಯಲ್ಲಿ ಮೂವೆರ ರೇಖಾ ಪ್ರಕಾಶ್, ಸುದರ್ಶನ ಕೆ.ಪಿ.,ಎಸ್.ಎ.ಅನಘ, ಅಪರ್ಣ, ಹರೀಶ್ ರೈ, ಮುಲ್ಲೇಂಗಡ ರೇವತಿ ಪೂವಯ್ಯ, ಕಾಯಪಂಡ ಬಿ.ಟಾಟಾ ಚಂಗಪ್ಪ, ಕೃತಜ್ಞಾ ಬೆಸೂರು, ಅಲ್ಲಾರಂಡ ವಿಠಲ ನಂಜಪ್ಪ, ನಂಬಿಯಪಂಡ ರಂಜು ನಾಣಯ್ಯ, ಕಡ್ಲೇರ ಆಶಾಪ್ರಭು, ಎ.ವಿ. ಮಂಜುನಾಥ್, ಮಳುವಂಡ ನಳಿನಿ ಬಿಂದು, ಬಿ.ಆರ್. ರಾಮಚಂದ್ರರಾವ್, ಯು.ಆರ್.ಅಕ್ರಂ, ಸುನಿತಾ ವಿಶ್ವನಾಥ್, ನರಿಯೂರು ಎಲ್ ದಯಾನಂದ, ಸಬಲಂ ಬೋಜಣ್ಣ ರೆಡ್ಡಿ, ಎಂ.ಇ. ಮನೋಜ್, ಕಸ್ತೂರಿ ಗೋವಿಂದಮ್ಮಯ್ಯ, ಕಡ್ಲೇರ ಜಯಲಕ್ಷ್ಮಿ, ದೀಪಿಕಾ ಕೆ.ಎಸ್, ವಿ.ಎನ್. ರಂಜಿತಾ ಕಾರ್ಯಪ್ಪ, ಮೋಹನ್ ಕುಮಾರ್, ಜಿ.ನೀಲಪ್ಪ, ವೈಲೇಶ್ ಪಿ.ಎಸ್, ಎಸ್.ಕೆ.ಈಶ್ವರಿ, ಬಿ.ಗಣೇಶ್ ಪೈ, ರಾಚು ಶ್ಯಾಂ, ಶೈಲಜ ದಿನೇಶ್ ಬಾರಿಕೆ, ಕಿಗ್ಗಾಲು ಎಸ್ ಗಿರೀಶ್, ಸುಕುಮಾರು ತೊರೆನೂರು, ಎಂ.ಕೆ. ನಳಿನಾಕ್ಷಿ ಸಿಂಚನ ವಿ.ಡಿ, ಇಂಚರ ಎಂ.ಎಸ್, ಚೆರಿಯಮನೆ ಪ್ರೀತಂ, ಶ್ರಾವಣಿ ಎಂ.ಯು. ಅವರುಗಳು ಕವನ ವಾಚಿಸಿದರು.