ಸೋಮವಾರಪೇಟೆ, ಸೆ.25 : ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಟ್ಟಡವನ್ನು ಅಧ್ಯಕ್ಷರು ಪಕ್ಷದ ಕಾರ್ಯಕ್ರಮಗಳಿಗೆ ಬಳಸಿಕೊಂಡಿದ್ದಾರೆ. ಈ ಬಗ್ಗೆ ಅಧ್ಯಕ್ಷರ ಸದಸ್ಯತ್ವ ರದ್ದತಿಗೆ ಕೋರಿ ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖಾ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವದು ಎಂದು ಪ.ಪಂ. ಕಾಂಗ್ರೆಸ್ ಸದಸ್ಯರುಗಳು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಯೋಜನಾಧಿಕಾರಿಗಳ ವಿರುದ್ಧ ಮಾಡಿದ ಆರೋಪ ಸುಳ್ಳೆಂದು, ಸದಸ್ಯ ಆದಂ ಪ.ಪಂ. ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮಾಡಿದ ಆರೋಪಕ್ಕೆ ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಆದಂ ಪ್ರತಿಕ್ರಿಯೆ ನೀಡಿದರು.

ಯೋಜನಾ ನಿರ್ದೇಶಕರ ವಿರುದ್ಧ ತಾನು ಮಾಡಿದ ಆರೋಪಕ್ಕೆ ಸಭೆಯಲ್ಲಿಯೇ ಸ್ಪಷ್ಟನೆ ಕೇಳಬಹುದಿತ್ತು ಎಂದ ಆದಂ, ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರಿಗೆ ಸಾಮಾನ್ಯ ಸಭೆಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ವಿರೋಧ ಪಕ್ಷದಲ್ಲಿದ್ದಾಗಲೂ ಸಹ ಇವರು ಅಧ್ಯಕ್ಷರುಗಳಿಗೆ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಇದೀಗ ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಮಹಿಳಾ ಸಿಬ್ಬಂದಿಗಳ ಮೇಲೆ ಯಾವದೇ ದೌರ್ಜನ್ಯ ಎಸಗಿಲ್ಲ. ಒಂದು ವೇಳೆ ಎಸಗಿದ್ದರೆ ಅವರುಗಳೇ ದೂರು ನೀಡಬಹುದಿತ್ತು ಎಂದು ಪ್ರತಿಕ್ರಿಯೆ ನೀಡಿದರು. ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಶೀಲಾ ಡಿಸೋಜ, ಮೀನಾಕುಮಾರಿ, ನಾಮನಿರ್ದೇಶಿತ ಸದಸ್ಯ ಇಂದ್ರೇಶ್ ಉಪಸ್ಥಿತರಿದ್ದರು.