ನಾಪೋಕ್ಲು, ಸೆ. 26: ದೇಶದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶ ದೊರೆತು ಸ್ವಾಭಿಮಾನದಿಂದ ಸ್ವಾವಲಂಬಿಗಳಾಗಿ ಜೀವಿಸುವದರ ಮೂಲಕ 2022ಕ್ಕೆ ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವದೇ ಕೇಂದ್ರ ಸರಕಾರದ ಮತ್ತು ಪ್ರಧಾನಿ ನರೇಂದ್ರ ಮೋದಿ ಆಶಯವಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಚೆಯ್ಯಂಡಾಣೆಯ ಲಕ್ಷ್ಮಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಮೂಲ ಫಲಾನುಭವಿಗಳಿಗೆ ಉಚಿತವಾಗಿ ಬಿಪಿಎಲ್ ಅಡುಗೆ ಅನಿಲ ಸಂಪರ್ಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಜನಗಣತಿ ಆಧಾರದಲ್ಲಿ 28 ಸಾವಿರ ಬಿಪಿಎಲ್ ಪಡಿತರ ಕಾರ್ಡುದಾರರು ಇದ್ದರೂ ಕೇವಲ 5 ಸಾವಿರ ಫಲಾನುಭವಿಗಳಿಗೆ ಉಜ್ವಲ ಯೋಜನೆಯ ಸವಲತ್ತು ದೊರೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜಿ.ಪಂ. ಮಾಜಿ ಸದಸ್ಯ ಮನು ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಗೆ ಮುಕ್ತ ದೇಶವನ್ನಾಗಿಸಲು ಮೋದಿ ಕನಸಿನಂತೆ ಪ್ರತಿಯೊಬ್ಬ ವ್ಯಕ್ತಿಯೂ ಮುಖ್ಯವಾಹಿನಿಗೆ ಬರಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು ಮಾತನಾಡಿದರು.

ತಾ.ಪಂ. ಉಪಾಧ್ಯಕ್ಷ ಬೊಳಿಯಡಿರ ಸಂತು ಸುಬ್ರಮಣಿ, ಆರ್‍ಎಂಸಿ ಉಪಾಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ, ಚೆಯ್ಯಂಡಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೇಬಿ ಶಿವಪ್ಪ, ಉಪಾಧ್ಯಕ್ಷ ರವಿ ಸೋಮಣ್ಣ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಫಲಾನುಭವಿಗಲಿಗೆ ಸ್ಟವ್ ಮತ್ತು ಗ್ಯಾಸ್ ಕಿಟ್‍ಗಳನ್ನು ವಿತರಿಸಲಾಯಿತು. ಅನಿಲ ವಿತರಕ ಚೀಯಕ್‍ಪೂವಂಡ ಪ್ರಕಾಶ್, ಜನಪ್ರತಿನಿಧಿಗಳ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು. ಶಾಂತಿ ಪ್ರಾರ್ಥಿಸಿದರೆ, ಗ್ರಾಮ ಪಂಚಾಯಿತಿ ಸದಸ್ಯ ಕೋಡೀರ ಪ್ರಸನ್ನ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.