ಸೋಮವಾರಪೇಟೆ, ಸೆ.25 : ಬಿಜೆಪಿಯವರು ನಡೆಸಿದ ವಿಸ್ತಾರಕ್ ಯೋಜನೆಯನ್ನು ನಾವುಗಳು ನಕಲು ಮಾಡಿಲ್ಲ. ಅವರ ಯೋಜನೆಗೂ ಮುನ್ನವೇ ನಾವು ಈ ಬಗ್ಗೆ ಚಿಂತನೆ ನಡೆಸಿದ್ದೆವು. ಪ್ರತಿ ಬೂತ್ನಲ್ಲಿಯೂ ಬೂತ್ ಕಮಿಟಿ ರಚಿಸಿದ ನಂತರ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳು ಸೂಚಿಸಿದ್ದರು. ಅದರಂತೆ ಈಗ ಚಾಲನೆ ನೀಡಿದ್ದೇವೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ರಾಜ್ಯದಾದ್ಯಂತ ಬೂತ್ಮಟ್ಟ ದಲ್ಲಿ ಕಾಂಗ್ರೆಸ್ ಸಂಘಟಿಸುವ ಉದ್ದೇಶದಿಂದ ಪ್ರತಿ ಮನೆಗೂ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ ತಲುಪಿಸಲಾಗುತ್ತದೆ ಎಂದು ಪಕ್ಷದ ಜಿಲ್ಲಾ ಉಸ್ತುವಾರಿ ಮಮತ ಗಟ್ಟಿ ತಿಳಿಸಿದರು.
ಗೋಷ್ಠಿಯಲ್ಲಿದ್ದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕಾಂಗ್ರೆಸ್ ಕಾರ್ಯಕ್ರಮಗಳು ಸಾಕಷ್ಟಿದೆ. ಜನತೆಯೂ ಕಾಂಗ್ರೆಸ್ನ ಬೆನ್ನಿಗೆ ನಿಂತಿದ್ದು, ಬಿಜೆಪಿಯವರ ಕಾಂಗ್ರೆಸ್ ಮುಕ್ತ ಕೊಡಗು ಕನಸಾಗಿಯೇ ಉಳಿಯಲಿದೆ ಎಂದರು. ಸಿದ್ದರಾಮಯ್ಯ ಅವರು ಕೊಡಗಿಗೆ ನಾಲ್ಕು ವರ್ಷವೂ ಸಹ ವಿಶೇಷ ಪ್ಯಾಕೇಜ್ ಯೋಜನೆಯಡಿ ತಲಾ 50 ಕೋಟಿ ಅನುದಾನ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಚಂದ್ರಮೌಳಿ ಮಾತನಾಡಿ, ಕಾಂಗ್ರೆಸ್ನ ಯಾವೊಬ್ಬರೂ ಅಧಿಕಾರ ದಲ್ಲಿದ್ದಾಗ ಜೈಲಿಗೆ ಹೋಗಿಲ್ಲ. ಚುನಾವಣೆ ಸಂದರ್ಭ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ. ಅಭಿಯಾನದ ಮೂಲಕ ಜನತೆಯ ಇನ್ನಷ್ಟು ಬೇಕು ಬೇಡಿಕೆಗಳ ಬಗ್ಗೆಯೂ ತಿಳಿದುಕೊಳ್ಳುತ್ತೇವೆ ಎಂದರು.
ಕೆಪಿಸಿಸಿ ಪ್ರಮುಖರು ಪ್ರತಿ ಕ್ಷೇತ್ರದಿಂದಲೂ ವರದಿ ತರಿಸಿಕೊಳ್ಳುತ್ತಿ ದ್ದಾರೆ. ಅಭ್ಯರ್ಥಿ ಆಯ್ಕೆಯನ್ನು ವರಿಷ್ಠರೇ ನೋಡಿಕೊಳ್ಳುತ್ತಾರೆ. ಕೊಡಗು ಜಿಲ್ಲಾಧ್ಯಕ್ಷ ಶಿವುಮಾದಪ್ಪ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ ಎಂದು ಪಕ್ಷದ ಉಸ್ತುವಾರಿ ಮಮತ ಗಟ್ಟಿ ಹೇಳಿದರು.
ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಚುನಾವಣೆಗೂ 3 ತಿಂಗಳ ಮೊದಲೇ ಅಭ್ಯರ್ಥಿಯನ್ನು ಘೋಷಿಸುವಂತೆ ವರಿಷ್ಠರಲ್ಲಿ ಮನವಿ ಮಾಡಲಾಗಿದೆ. ಮೊದಲೇ ಅಭ್ಯರ್ಥಿ ಘೋಷಣೆ ಮಾಡಿದರೆ ಪ್ರಚಾರಕ್ಕೂ ಅನುಕೂಲವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸುವ ಕಾರ್ಯವನ್ನಷ್ಟೇ ಮಾಡುತ್ತಿದ್ದೇವೆ. ಆ ಮೂಲಕ ಕಾಂಗ್ರೆಸ್ ಪರ ಜಾಗೃತಿ ಮೂಡಿಸುತ್ತಿದ್ದೇವೆ. ಕಾಂಗ್ರೆಸ್ನಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಮುಖ್ಯವಲ್ಲ. ಈ ಸಿದ್ದಾಂತದ ಅಡಿ ಪಕ್ಷ ಸಂಘಟಿಸುತ್ತಿದ್ದೇವೆ ಎಂದರು. ಗೋಷ್ಠಿಯಲ್ಲಿ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಅವರುಗಳು ಉಪಸ್ಥಿತರಿದ್ದರು.