ಮಡಿಕೇರಿ ಸೆ.25 : ವಿಯೇಟ್ನಾಂನಿಂದ ಭಾರತಕ್ಕೆ ಕರಿಮೆಣಸು ಆಮದಾಗುವದನ್ನು ತಡೆಯಲು ಕೇಂದ್ರ ಸರಕಾರಕ್ಕೆ ಎಲ್ಲಾ ಅವಕಾಶಗಳಿದ್ದರೂ, ಆಮದುದಾರ ರನ್ನು ರಕ್ಷಿಸುವ ಉದ್ದೇಶದಿಂದ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತಕ್ಕೆ ವಿದೇಶಿ ಕರಿಮೆಣಸು ಆಮದಾಗುತ್ತಿರು ವದರಿಂದ ಕೊಡಗು ಸೇರಿದಂತೆ ರಾಜ್ಯದಲ್ಲಿ ಉತ್ಪಾದಿಸುವ ಕರಿಮೆಣಸಿನ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಯಾಗಿದ್ದು, ಇದರಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಯೇಟ್ನಾಂ ನಿಂದ ಆಮದಾಗುವ ಕರಿಮೆಣಸು ಗುಣಮಟ್ಟದಲ್ಲೂ ಕಳಪೆಯಾಗಿದ್ದು, ಈ ಮೆಣಸನ್ನು ಇಲ್ಲಿನ ಮೆಣಸಿನೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವದರಿಂದ ಕೆ.ಜಿ. ಒಂದಕ್ಕೆ ಸುಮಾರು 800ರೂ.ಗಳಷ್ಟಿದ್ದ ಕೊಡಗಿನ ಕರಿಮೆಣಸಿನ ಬೆಲೆ ಇಂದು 350- 400ರೂ.ಗಳಿಗೆ ಇಳಿಕೆಯಾಗಿದೆ. ಕಾಫಿ ಧಾರಣೆ ಕುಸಿತದಿಂದ ಕಂಗಾಲಾಗಿದ್ದ ಬೆಳೆಗಾರರಿಗೆ ಆಸರೆಯಾಗಿದ್ದ ಕರಿಮೆಣಸಿದ ಬೆಲೆಯೂ ಇಳಿಕೆ ಕಂಡಿರುವದರಿಂದ ಬೆಳೆಗಾರರು ಅತಂತ್ರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ಆರೋಪಿಸಿದರು.
ಗ್ಯಾಟ್ ಒಪ್ಪಂದದಿಂದಾಗಿ ದೇಶಕ್ಕೆ ಕರಿಮೆಣಸು ಆಮದಾಗುತ್ತಿದ್ದು, ಇದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ ಆಮದಾಗುವ ಉತ್ಪನ್ನಗಳಿಗೆ ‘ಆ್ಯಂಟಿ ಡಂಪಿಂಗ್ ಡ್ಯೂಟಿ’ ಅಳವಡಿಸಿ ಅದನ್ನು ನಿಯಂತ್ರಿಸಲು ಕೇಂದ್ರ ಸರಕಾರಕ್ಕೆ ಅವಕಾಶವಿದ್ದರೂ, ಕೇಂದ್ರ ಸರಕಾರ ಈ ಕ್ರಮಕ್ಕೆ ಮುಂದಾಗುತ್ತಿಲ್ಲ. ದೇಶಕ್ಕೆ ಅತಿ ಹೆಚ್ಚು ಕರಿಮೆಣಸನ್ನು ಆಮದು ಮಾಡುವ ಸಂಸ್ಥೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಂಬಂಧಿಕರಿಗೆ ಸೇರಿದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಂತಹ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಗಂಭೀರ ಆರೋಪ ಮಾಡಿದರು.
ಭಾರತೀಯ ಸೇನೆಯ ಅಧಿಕಾರಿ ಗಳಿಗೆ ಪಡಿತರ ವಿತರಣೆ ಸ್ಥಗಿತಗೊಳಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬ್ರಿಜೇಶ್ ಕಾಳಪ್ಪ, ಸೈನ್ಯದ ತುಕಡಿಗಳಲ್ಲಿರುವ ಸೈನಿಕರಿಗೆ ಪಡಿತರ ವಿತರಿಸಿ ಅಧಿಕಾರಿಗಳಿಗೆ ಅದನ್ನು ಸ್ಥಗಿತಗೊಳಿಸಿರುವದರಿಂದ ಸೈನಿಕರು ಹಾಗೂ ಅಧಿಕಾರಿಗಳ ನಡುವೆ ಕಂದಕ ಸೃಷ್ಟಿಯಾಗಿದೆ ಎಂದು ಟೀಕಿಸಿದರು. ಕೇಂದ್ರ ಸರಕಾರ ಈ ತಾರತಮ್ಯ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ರಕ್ಷಣಾ ಸಚಿವ ರಾಗಿರುವ ನಿರ್ಮಲಾ ಸೀತಾರಾಮನ್ ಅವರು ದೇಶದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಸೈನಿಕರು ಸ್ವಚ್ಛತಾ ಕಾರ್ಯ ನಡೆಸುವಂತೆ ಕರೆ ನೀಡಿರುವದಕ್ಕೂ ಬ್ರಿಜೇಶ್ ವಿರೋಧ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಮುಖ ಬಿ.ಎಸ್.ತಮ್ಮಯ್ಯ ಮಾತನಾಡಿ, ಗೋಣಿಕೊಪ್ಪಲು ಎಪಿಎಂಸಿಯ ಆಡಳಿತ ಮಂಡಳಿ ವಶದಲ್ಲಿದ್ದ ಗೋದಾಮಿನಲ್ಲಿ ಕಳಪೆ ಕರಿಮೆಣಸು ಪುಡಿ ಪತ್ತೆಯಾಗಿರುವದನ್ನು ಗಮನಿಸಿದರೆ ಈ ಅಕ್ರಮಗಳ ಬಗ್ಗೆ ಆಡಳಿತ ಮಂಡಳಿಗೆ ಸ್ಪಷ್ಟ ಮಾಹಿತಿ ಇದೆ ಎನ್ನುವದು ಸಾಬೀತಾಗುತ್ತದೆ ಎಂದು ಆರೋಪಿಸಿದರು. ಸುದ್ದಿ ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮುಖಂಡ ಶಾಫಿ ಕೊಟ್ಟಮುಡಿ ಮತ್ತಿತರರು ಹಾಜರಿದ್ದರು.