ಮಡಿಕೇರಿ, ಸೆ. 26: ‘ಒಂದು ತಕೊಳ್ಳಿ ಅಂಕಲ್..., ಇನ್ನೊಂದು ಪ್ಲೀಸ್ ಆಂಟಿ..., ಇದು ಚೆನ್ನಾಗಿದೆ ನಮ್ಮೂರಲ್ಲಿ ಬೆಳೆದಿದ್ದು, ಇಲ್ಲಿ ಕಡಿಮೆ ಬೆಲೆ ಸರ್..., ಬೆಳಿಗ್ಗೆಂದ ಸೇಲ್ ಆಗಿಲ್ಲ ಒಂದಾದ್ರು ತಕೊಳ್ಳಿ ಅಂಕಲ್..., ಇಲ್ಲಿ ಬನ್ನಿ..., ಈ ತಿಂಡಿ ಚೆನ್ನಾಗಿದೆ. ಲೆಮನ್ ಜೂಸ್ ಬೇಕಾ...?’ ಸಾಮಾನ್ಯವಾಗಿ ಇಂತಹ ಚೌಕಾಸಿಗಳು ಕೇಳಿ ಬರುವದು ಮಾರುಕಟ್ಟೆಗಳಲ್ಲಿ ಆದರೆ, ಇಂದು ನಗರದ ಗಾಂಧಿ ಮೈದಾನವೇ ಮಾರುಕಟ್ಟೆಯಂತಾಗಿ ಮಾರ್ಪಾಡಾಗಿತ್ತು. ಎಲ್ಲೆಂದರಲ್ಲಿ ಪುಟಾಣಿಗಳಿಂದ ಹಿಡಿದು ಬಾಲಕ-ಬಾಲಕಿಯರ ಓಡಾಟ, ವ್ಯಾಪಾರದ ಭರಾಟೆ ಒಂದೆಡೆಯಾದರೆ ವೇದಿಕೆಯಲ್ಲಿ ದೇವಾನುದೇವತೆಗಳು..., ರಾಜ ರಾಣಿ, ಪ್ರಾಣಿ ಪಕ್ಷಿಗಳ ವೇಷತೊಟ್ಟ ಪುಟಾಣಿಗಳ ಇಂಚರ..., ಮತ್ತೊಂದು ಬದಿಯಲ್ಲಿ ಮಣ್ಣಿನ ಆಕೃತಿ ವಿಜ್ಞಾನದ ಆವಿಷ್ಕಾರದ ಪ್ರದರ್ಶನ, ಇನ್ನೊಂದು ತುದಿಯಲ್ಲಿ ಮಡಿಕೇರಿ ದಸರಾವನ್ನೇ ನೆನಪಿಸುವ ಮಂಟಪಗಳ ಮೆರುಗು..., ಮತ್ತೊಂದೆಡೆ ಆಕರ್ಷಕ ನೃತ್ಯ..., ಅದೋ ಅಲ್ಲಿ ನೋಡಿದರೆ ಹಳ್ಳಿಗಾಡಿನ ಸೊಬಗಿನ ಗೋಲಿ, ಲಗೋರಿ ಆಟ..., ಒಟ್ಟಿನಲ್ಲಿ ಮಡಿಕೇರಿ ಇಂದು ಮಕ್ಕಳದ್ದಾಗಿತ್ತು.

ಮಡಿಕೇರಿ ನಗರ ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಜಾನಪದ ಪರಿಷತ್‍ಗಳ ಸಹಯೋಗ ದೊಂದಿಗೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿಸಲಾಗಿದ್ದ 6ನೇ ವರ್ಷದ ಮಕ್ಕಳ ದಸರಾ ಅಭೂತಪೂರ್ವ ಯಶಸ್ಸು ಕಂಡಿತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಪುಟಾಣಿ ಮಕ್ಕಳು ಹಾಗೂ ಪೋಷಕರಿಂದ ವಿಶಾಲವಾದ ಸಭಾಂಗಣ ತುಂಬಿ ಹೋಗಿತ್ತು. ಮಕ್ಕಳ ಸಂತೆ, ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳು ಪುಟಿದೆದ್ದು, ಸಂಭ್ರಮಿಸಿದರು.

ಸಂತೆ ವೈಭವ

ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸಂತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಬೆಳಿಗ್ಗೆ 9.30 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ

(ಮೊದಲ ಪುಟದಿಂದ) ಎಂದು ಸೂಚಿಸಲಾಗಿದ್ದರೂ 8 ಗಂಟೆ ವೇಳೆಗೆ ಮಕ್ಕಳು ಸಾಮಗ್ರಿಗಳೊಂದಿಗೆ ಸಂತೆಗೆ ಹಾಜರಾಗಿದ್ದರು. ತಮ್ಮ ಮನೆ, ತೋಟಗಳಲ್ಲಿ ಬೆಳೆದ ಹಣ್ಣು ತರಕಾರಿಗಳು, ಸೊಪ್ಪು, ಕಹಿಹುಳಿ, ಚಕ್ಕೋತ, ಲಿಂಬೆ, ಚರ್ಮೆ ಸೊಪ್ಪು, ಬಾಳೆಕಾಯಿ, ಅದರ ದಿಂಡು, ಅದರ ಪೂಂಬೆ, ಕೆಸ, ಅಂಜೂರ, ವಿಶೇಷವಾಗಿ ಔಷಧೀಯ ಗುಣವುಳ್ಳ ಕಲ್ಲುಬಾಳೆ..., ಹೀಗೆ ಪಟ್ಟಿ ಮಾಡುತ್ತಾ ಹೋದರೆ ಯಾವ ಮಾರುಕಟ್ಟೆಗಳಲ್ಲೂ ದೊರಕದಂತಹ ವಿಶೇಷವಾದ ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದರು. ಇನ್ನೊಂದೆಡೆ ದಿನಸಿ ಸಾಮಗ್ರಿಗಳು, ತಿಂಡಿ, ತಿನಿಸುಗಳು, ಮಜ್ಜಿಗೆ, ಜ್ಯೂಸ್, ಚುರುಮುರಿ, ಸ್ಯಾಂಡ್‍ವಿಚ್, ಬಜ್ಜಿ ಮುಂತಾದವುಗಳನ್ನು ಮಕ್ಕಳೇ ತಯಾರಿಸಿ ಮಾರಾಟ ಮಾಡುತ್ತಿದ್ದದು ಕಂಡು ಬಂದಿತು.

ಆರಂಭದಲ್ಲಿ ವ್ಯಾಪಾರವಾಗದೇ ಇದ್ದಾಗ ಸಪ್ಪೆ ಮೋರೆಯಲ್ಲಿದ್ದ ಮಕ್ಕಳ ಜೇಬಿಗೆ ಕಾಸು ಇಳಿಯುತ್ತಲೇ ಅವರ ಸಂಭ್ರಮೋಲ್ಲಾಸ ಹೇಳತೀರದ್ದಾಗಿತ್ತು. ಆಗಾಗ್ಗೆ ನೋಟುಗಳನ್ನು ಎಣಿಸುತ್ತಾ ವ್ಯಾಪಾರದ ಹುಮ್ಮಸ್ಸನ್ನು ಹೆಚ್ಚಿಸಿಕೊಂಡರು. ಸಂತೆಯಲ್ಲಿ ತರಕಾರಿ ಹಾಗೂ ದಿನಸಿ, ತಿಂಡಿ - ತಿನಿಸುಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಡಿಮೆ ಬೆಲೆಯಲ್ಲಿ ಸಿಕ್ಕಿದ ವಸ್ತುಗಳನ್ನು ಕೊಂಡುಕೊಂಡ ಗ್ರಾಹಕರು ಮಕ್ಕಳ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದರು. ಸಂತೆಯಲ್ಲಿದ್ದ ಉತ್ತಮ ತಳಿಯ ಶ್ವಾನಗಳೆರಡು ಗಮನ ಸೆಳೆದವು. ರೂ. 5 ಕೊಟ್ಟು ಶ್ವಾನದೊಂದಿಗೆ ‘ಸೆಲ್ಫಿ’ ತೆಗೆಸಿಕೊಳ್ಳುವ ವ್ಯವಸ್ಥೆ ಅಲ್ಲಿತ್ತು...!

ಜಾನಪದ ಆಟ

ಜಾನಪದ ಪರಿಷತ್‍ನ ಸಹಯೋಗದೊಂದಿಗೆ ಏರ್ಪಡಿಸಿದ್ದ ಜಾನಪದ ಆಟದಲ್ಲಿ ಮಕ್ಕಳು ಗೋಲಿ, ಲಗೋರಿ, ಚೌಕಬಾರ, ಬಳೆಯಾಟ, ಬುಗುರಿ, ಕುಂಟಬಿಲ್ಲೆ ಆಟವಾಡಿ ಹಳ್ಳಿಗಾಡಿನ ಸೊಗಡನ್ನು ನೆನಪಿಸಿದರು. ಮಕ್ಕಳ ಆಟ ನೋಡುತ್ತಿದ್ದ ಹಿರಿಯರಿಗೆ ತಾವು ಹಿಂದೆ ಆಡಿದ ಆಟಗಳು ಕಣ್ಮುಂದೆ ತೇಲೆ ಬಂದರೆ ಮತ್ತೊಮ್ಮೆ ಮಕ್ಕಳಾಗಿ ಆಟವಾಡಬೇಕೆಂಬ ಆಸೆ ಮಾಡಿದಂತೂ ನಿಜ; ಕೆಲವರು ಅದನ್ನು ಹೇಳಿಕೊಂಡರು ಕೂಡ...

ಛದ್ಮವೇಷ: ಪುಟಾಣಿ ಮಕ್ಕಳಿಗಾಗಿ ಏರ್ಪಡಿಸಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಅತ್ಯಧಿಕ ಮಕ್ಕಳು ಪಾಲ್ಗೊಂಡಿದ್ದರು. ದೇವ-ದಾನವರು, ರಾಜ-ಮಹರಾಜರು, ವೀರ ನಾರಿಯರು, ದರ್ಶನಿಕರು, ಪ್ರಾಣಿ - ಪಕ್ಷಿಗಳು ಶಿಲಾಬಾಲಿಕೆಯರ ವೇಷÀ ತೊಟ್ಟ ಪುಟಾಣಿಗಳ ಕಲಾಸಂಭ್ರಮ ವೇದಿಕೆಗೆ ಇನ್ನಷ್ಟು ಮೆರುಗು ನೀಡಿತು.

ಮಾಡಲಿಂಗ್: ಆಸಕ್ತ ಕ್ರಿಯಾಶೀಲ ಮಕ್ಕಳಿಗಾಗಿ ಏರ್ಪಡಿಸಿದ್ದ ಕ್ಲೇ ಮಾಡಲಿಂಗ್, ಸೈನ್ಸ್ ಮಾಡಲಿಂಗ್ ಸ್ಪರ್ಧೆಯಲ್ಲಿ ಮಕ್ಕಳ ಕೈಚಳಕದಿ ವಿವಿಧ ಕಲಾಕೃತಿಗಳು, ವೈಜ್ಞಾನಿಕ ಆವಿಷ್ಕಾರಗಳು ಮೂಡಿ ಬಂದವು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದರು.

ದಸರಾ ವೈಭವ

ಮಕ್ಕಳಿಗೆ ಮಂಟಪ ಸ್ಪರ್ಧೆ ಯಲ್ಲಂತೂ ಒಂದಕ್ಕಿಂತ ಮತ್ತೊಂದು ಎಂಬಂತೆ ಮಕ್ಕಳ ಚಿಂತನೆ, ಕ್ರಿಯಾಶೀಲತೆಯಲ್ಲಿ ಮೂಡಿಬಂದ ಮಂಟಪಗಳು ನೋಡುಗರನ್ನೇ ನಿಬ್ಬೆರಗಾಗುವಂತೆ ಮಾಡಿತು. ಚಲನ ವಲನಗಳನ್ನೊಳಗೊಂಡ ಮಂಟಪಗಳಲ್ಲಿ ಸುರಾಸುರರ ಕಾಳಗ, ಅದಕ್ಕೆ ತಕ್ಕಂತೆ ಕಥೆ, ಧ್ವನಿ ವ್ಯವಸ್ಥೆ, ಬೆಳಕು, ಬೆಂಕಿಯುಂಡೆಗಳ, ಸಿಡಿಮದ್ದುಗಳ ಪ್ರದರ್ಶನ ಅಚ್ಚರಿ ಮೂಡಿಸಿತಲ್ಲದೆ, ಎಲ್ಲರ ಮೆಚ್ಚಗೆಗೂ ಪಾತ್ರವಾದವು. ಮಡಿಕೇರಿ ದಸರಾ ಉತ್ಸವವನ್ನೇ ನೆನಪಿಸುವಂತಿತ್ತು.

ಒಟ್ಟಿನಲ್ಲಿ ಮಕ್ಕಳಿಗಾಗಿಯೇ ಆಯೋಜಿತವಾಗಿದ್ದ ಮಕ್ಕಳ ದಸರಾದಲ್ಲಿ ಮಕ್ಕಳೇ ಪಾಲ್ಗೊಂಡು ಸಂಭ್ರಮಿಸಿದರು. ಶಾಲೆಗಳಿಗೆ ರಜೆ ನೀಡಿದ್ದರಿಂದ ಮಕ್ಕಳಿಗೆ ಪಾಲ್ಗೊಳ್ಳಲು ಅವಕಾಶವಾಯಿತು.

ಉದ್ಘಾಟನೆ: 6ನೇ ವರ್ಷದ ಮಕ್ಕಳ ದಸರಾ ಸಂಭ್ರಮದ ಸಭಾ ಕಾರ್ಯಕ್ರಮಕ್ಕೆ ಛದ್ಮವೇಶಧಾರಿ ಪುಟಾಣಿ ಮಕ್ಕಳು ಮತ್ತು ಗಣ್ಯರು ಚಾಲನೆ ನೀಡಿದರು.

ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು, ಮಕ್ಕಳು ದಸರಾ ನೋಡುವ ಸಂಭ್ರಮ ವಿಶೇಷವಾಗಿದೆ. ಮಕ್ಕಳಿಂದ ಸಂತೆ ಮಾರುಕಟ್ಟೆ ವಿವಿಧ ಛದ್ಮವೇಶಗಳು ಹಾಗೂ ಮಕ್ಕಳಿಂದಲೇ ತಯಾರಿಸಿದ ದಸರಾ ಮಂಟಪಗಳು ಮಕ್ಕಳಲ್ಲಿರುವ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು.

ಜಾನಪದ ಅಕಾಡೆಮಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ ಮಕ್ಕಳು ಜಾನಪದ ಕ್ರೀಡೆ, ನೃತ್ಯ, ಸಂಗೀತ ಕ್ಷೇತ್ರಗಳಲ್ಲಿ ತೊಡಗಿಸಿ ಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.

ರೋಟರಿ ಮಿಸ್ಟಿಹಿಲ್ ಗೌರವ ಕಾರ್ಯದರ್ಶಿ ಸಂದೀಪ್ ಮಾತನಾಡಿ, ರೈತರು ಮತ್ತು ಗ್ರಾಹಕರಿಗೆ ಸಂತೆ ಹೆಚ್ಚು ಪ್ರಯೋಜನ ಕಾರಿ. ಆ ನಿಟ್ಟಿನಲ್ಲಿ ಮಕ್ಕಳ ಸಂತೆ ವಿಶೇಷವಾಗಿದೆ ಎಂದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನಿ ಕಾರ್ಯದರ್ಶಿ ಚುಮ್ಮಿ ದೇವಯ್ಯ ಮಾತನಾಡಿದರು. ದಸರಾ ಸಮಿತಿ ಖಜಾಂಚಿ ಸಂಗೀತ ಪ್ರಸನ್ನ, ನಗರಸಭೆ ಸದಸ್ಯರಾದ ಲಕ್ಷ್ಮಿ, ಲೀಲಾ ಶೇಷಮ್ಮ, ಅನಿತಾ ಪೂವಯ್ಯ, ನಮಿತಾ ರೈ, ಪೌರಾಯುಕ್ತೆ ಬಿ. ಶುಭಾ, ರೋಟರಿ ಮಿಸ್ಟಿ ಹಿಲ್ಸ್‍ನ ತಿಲಕ್, ಅಂಬೆಕಲ್ ನವೀನ್,, ಇತರರು ಇದ್ದರು. ಸ್ನೇಹ ಪ್ರಾರ್ಥಿಸಿದರೆ, ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಎಚ್.ಟಿ. ಅನಿಲ್ ನಿರೂಪಿಸಿ, ವಂದಿಸಿದರು.

- ಕುಡೆಕಲ್ ಸಂತೋಷ್