ವೀರಾಜಪೇಟೆ, ಸೆ. 26: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ವಕ್ಫ್ ಬೋರ್ಡ್ನಲ್ಲಿ ನೋಂದಣಿಯಾದ ಸುಮಾರು ಅರ್ಧ ಶತಮಾನಕ್ಕೂ ಹಿಂದಿನ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಕೊಡಗು ಉಪ ವಿಭಾಗಾಧಿಕಾರಿಯಿಂದ ವರದಿ ಬಂದ ತಕ್ಷಣ ಅಂತಿಮವಾಗಿ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿತು.ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಸೀದಿ ನಿರ್ಮಾಣ ಸಂಬಂಧದ ಚರ್ಚೆ ವಿಕೋಪಕ್ಕೆ ತೆರಳಿತು. ಹಿರಿಯ ಸದಸ್ಯ ಎಸ್.ಎಚ್. ಮೈನುದ್ದೀನ್ ಮಾತನಾಡಿ ಮಸೀದಿಯ ಸ್ವಾಧೀನದಲ್ಲಿರುವ ಸುಮಾರು 1 ಎಕರೆ 85 ಸೆಂಟುಗಳಷ್ಟು ಜಾಗಕ್ಕೆ 50 ವರ್ಷಗಳ ಹಿಂದೆಯಿಂದಲೂ ನಿರಂತರ ತೆರಿಗೆ ಪಾವತಿಸಲಾಗುತ್ತಿದೆ. ಜಮಾಬಂದಿಯು ಮಸೀದಿಯ ಹೆಸರಿನಲ್ಲಿದೆ. ಮಸೀದಿ ನಿರ್ಮಾಣಕ್ಕೆ ಈ ಹಿಂದೆಯೇ ಅನುಮತಿಯನ್ನು ನೀಡಲಾಗಿದೆ. ಜಾಗದ ಸರ್ವೆ ನಂಬರಿನ
(ಮೊದಲ ಪುಟದಿಂದ) ಗೊಂದಲದಿಂದಾಗಿ ಪಟ್ಟಣ ಪಂಚಾಯಿತಿ ನಿರ್ಮಾಣದ ಮರು ಅನುಮತಿಗೆ ವಿಳಂಬ ಮಾಡುತ್ತಿದೆ. ಆರು ತಿಂಗಳುಗಳಿಂದಲೂ ಸತಾಯಿಸುತ್ತಿದೆ. ಮುಂದಿನ 10 ದಿನಗಳೊಳಗೆ ಅನುಮತಿ ನೀಡಲು ಗಡುವು ನೀಡುವದಾಗಿ ಹೇಳಿದರು.
ಮೈನುದ್ದೀನ್ ಅವರ ಈ ನಿಲುವಿಗೆ ಮತೀನ್, ಮಹಮ್ಮದ್ ರಾಫಿ, ಪಟ್ಟಡ ರಂಜಿ ಪೂಣಚ್ಚ, ರಾಜೇಶ್ ಧ್ವನಿಗೂಡಿಸಿದಾಗ ಸದ್ಯದಲ್ಲಿಯೇ ಮಡಿಕೇರಿಯಲ್ಲಿ ಆಯ್ದ ಸದಸ್ಯರುಗಳು ಸೇರಿ ಉಪ ವಿಭಾಗಾಧಿಕಾರಿಯನ್ನು ಭೇಟಿ ಮಾಡಿ ಈ ಸಂಬಂಧದಲ್ಲಿ ಚರ್ಚಿಸಿ ವರದಿಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳುವದಾಗಿ ಅಧ್ಯಕ್ಷ ಜೀವನ್ ಪ್ರತಿಕ್ರಿಯಿಸಿದರು. ಮಸೀದಿ ನಿರ್ಮಾಣದ ಸಂಬಂಧದಲ್ಲಿ ಸುಮಾರು 35 ನಿಮಿಷಗಳವರೆಗೆ ಕಾವೇರಿದ ಚರ್ಚೆ ನಡೆಯಿತು. ಇದಕ್ಕೆ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಅವರು ಮಸೀದಿಗೆ ಸೇರಿದ ಜಾಗ ಮುಸಲ್ಮಾನರ ಸ್ಮಶಾನಕ್ಕೆ ಸಂಬಂಧಿಸಿದ್ದು ಆದರೆ ಸರ್ವೆ ನಂಬರಿನಲ್ಲಿ ಗೊಂದಲವಿರುವದಾಗಿ ಮಾಹಿತಿ ನೀಡಿ ವೀರಾಜಪೇಟೆ ಪಟ್ಟಣದ ಮಾಸ್ಟರ್ ಪ್ಲಾನ್ನಲ್ಲಿ ಜಾಗ ಬಗ್ಗೆ ಪರಿಶೀಲಿಸಬೇಕು. ಮಲೆತಿರಿಕೆ ಬೆಟ್ಟದಲ್ಲಿ ಮಸೀದಿ ನಿರ್ಮಾಣಕ್ಕೆ ಚೆಂಬೆಬೆಳ್ಳೂರು, ಐಮಂಗಲ, ಮಗ್ಗುಲ ಸುತ್ತಮುತ್ತಲ ಪ್ರದೇಶದ ನಿವಾಸಿಗಳ ಆಕ್ಷೇಪಣೆ ಇರುವದಾಗಿಯೂ ತಿಳಿಸಿದರು.
ಪ್ರತಿಕ್ರಿಯಿಸಿದ ಮೈನುದ್ದೀನ್ ಅವರು ಮಲೆತಿರಿಕೆ ಬೆಟ್ಟದಲ್ಲಿರುವ ಮಸೀದಿಗೆ ಸೇರಿದ ಜಾಗ ಇತರ ಗ್ರಾಮಗಳಿಗೆ ಸಂಬಂಧವಿಲ್ಲ. ಇದರಿಂದ ಆಕ್ಷೇಪಣೆಗೆ ಮಾನ್ಯತೆ ಬರುವದಿಲ್ಲ. ಈ ಜಾಗ ಇಲ್ಲಿನ ಪಟ್ಟಣ ಪಂಚಾಯಿತಿಗೆ ಸೇರಿರುವದರಿಂದ ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡಲು ಯಾವದೇ ಅಭ್ಯಂತರವಿ ರುವದಿಲ್ಲ ಎಂದು ಸಭೆ ಮುಂದೆ ವಾದಿಸಿದರು. ಮಾಜಿ ಅಧ್ಯಕ್ಷ ಸಚಿನ್ ಕುಟ್ಟಯ್ಯ ಮಾತನಾಡಿ, ಜಾಗದ ಸರ್ವೆ ನಂಬರ್ ಇತರ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು.
ಆರ್ಜಿ ಗ್ರಾಮದಲ್ಲಿರುವ ಕಸ ವಿಲೇವಾರಿ ಕೇಂದ್ರದಲ್ಲಿ ವ್ಯವಸ್ಥಿತವಾಗಿ ಕಸ ವಿಲೇವಾರಿ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಶೇಕಡವಾರು ಅನುದಾನದೊಂದಿಗೆ ಒಟ್ಟು ಮೂರೂವರೆ ಕೋಟಿ ವೆಚ್ಚದಲ್ಲಿ ಕಸ ವಿಲೇವಾರಿ ಕೇಂದ್ರವನ್ನು ವೈಜ್ಞಾನಿಕ ವಾಗಿ ಪರಿವರ್ತನೆ ಮಾಡಲು ಈಗಿನಿಂದಲೇ ಕಾಮಗಾರಿ ಆರಂಭಿಸ ಲಾಗುವದು. ಹಂತ ಹಂತವಾಗಿ ಕಾಮಗಾರಿಯನ್ನು ಕೈಗೊಂಡು ಗ್ರಾಮಸ್ಥರಿಗೆ ತೊಂದರೆ ಆಗದಂತೆ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವದು ಎಂದು ಇ.ಸಿ. ಜೀವನ್ ಸಭೆಗೆ ತಿಳಿಸಿದರು.
ಸದಸ್ಯೆ ಶೀಬಾ ಪೃಥ್ವಿನಾಥ್ ಮಾತನಾಡಿ, ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೀಮಿತಗೊಂಡಂತೆ ಟೌನ್ ಪ್ಲಾನಿಂಗ್ ರದ್ದು ಪಡಿಸುವದು. ರಾಜ್ಯ ಕಂದಾಯ ಇಲಾಖೆ ಪಟ್ಟಣ ಪಂಚಾಯಿತಿ ಮಟ್ಟದಲ್ಲಿ ಹೊಸದಾಗಿ ಕಟ್ಟಡ ಕಟ್ಟಲು ಭೂ ಪರಿವರ್ತನೆ ಕಡ್ಡಾಯಗೊಳಿಸಿರುವದನ್ನು ರದ್ದುಪಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸುವಂತೆ ಕಳೆದ ಸಭೆಯಲ್ಲಿ ವಿನಂತಿಸಿದರೂ ಈ ತನಕ ಪಂಚಾಯಿತಿ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಭಾ ತ್ಯಾಗಕ್ಕೆ ಮುಂದಾದರು. ಆದರೆ ಅಧ್ಯಕ್ಷರು ಸೇರಿದಂತೆ ಕೆಲವು ಸದಸ್ಯರುಗಳು ಶೀಬಾರ ಮನವೊಲಿಸಿ ಸಭಾ ತ್ಯಾಗವನ್ನು ರದ್ದುಗೊಳಿಸಿದರು.
ಸದಸ್ಯ ರಾಜೇಶ್ ಮಾತನಾಡಿ, ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ನಾಮಫಲಕಗಳಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ ನಂತರ ಕೊಡವ ಭಾಷೆಗೆ ಆದ್ಯತೆ ನೀಡಲು ಆಡಳಿತ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದಾಗ ಸಭೆ ನಿರ್ಣಯವನ್ನು ಅಂಗೀಕರಿಸಿತು.
ಪಟ್ಟಡ ರಂಜಿ ಪೂಣಚ್ಚ ಮಾತನಾಡಿ ಪ್ರತಿ ತಿಂಗಳು ಮಾಸಿಕ ಸಭೆ ಕರೆದು ಸದಸ್ಯರಿಗೆ ಡೀಸೆಲ್ ವೆಚ್ಚದ ಲೆಕ್ಕವನ್ನು ನೀಡಬೇಕು. ಮಹಮ್ಮದ್ ರಾಫಿ ಮಾತನಾಡಿ ಯಾವದೇ ಸಾಮಗ್ರಿ ಖರೀದಿಸಿದರೂ ಲೆಕ್ಕವನ್ನು ಸಭೆಯ ಮುಂದೆ ಇಡಬೇಕು ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷ ಪಾಂಡಂಡ ರಚನ್ ಮೇದಪ್ಪ, ಅಭಿಯಂತರ ಎನ್.ಪಿ ಹೇಮ್ ಕುಮಾರ್, ಯೋಜನಾಧಿಕಾರಿ ಶೈಲಜಾ, ರೆವಿನ್ಯೂ ಇನ್ಸ್ಪೆಕ್ಟರ್ ಸೋಮೇಶ್ ಇತರ ಸಿಬ್ಬಂದಿಗಳು ಹಾಜರಿದ್ದರು.