ಗೋಣಿಕೊಪ್ಪಲು, ಸೆ. 26: ಗೋಣಿಕೊಪ್ಪಲು ಮಹಿಳಾ ದಸರಾ ವಿಭಿನ್ನವಾಗಿ ಮೂಡಿಬಂದಿತು. ಭಾನುವಾರ ರಾತ್ರಿ 11 ಗಂಟೆಯವರೆಗೂ ಮಹಿಳಾ ದಸರಾ ಕಾರ್ಯಕ್ರಮ ಮುಂದುವರೆಯಿತು. ಮಹಿಳೆಯರ ಛದ್ಮವೇಷ ಸ್ಪರ್ಧೆ ಆಕರ್ಷಕವಾಗಿದ್ದು ಕಣ್ಮನ ಸೆಳೆಯಿತು.
ಸಾಮೂಹಿಕ ನೃತ್ಯ ವೈಶಿಷ್ಟ್ಯತೆ ಯೊಂದಿಗೆ ಕೊಡಗಿನ ಮೂಲನಿವಾಸಿ ಸಂಪ್ರದಾಯ ಉಡುಗೆ ತೊಡುಗೆ ಯೊಂದಿಗೆ ಕಾವೇರಿ ಕಲಾ ವೇದಿಕೆಯಲ್ಲಿ ಮಹಿಳೆಯರು ರಂಗು ಚೆಲ್ಲಿದರು. ಮಿಸೆಸ್ ಕೂರ್ಗ್ ಸ್ಪರ್ಧೆ ರಾತ್ರಿ 9 ಗಂಟೆ ಸುಮಾರಿಗೆ ಆರಂಭವಾಯಿತು. ಸುಮಾರು 15ಕ್ಕೂ ಅಧಿಕ ವಿವಾಹಿತ ಸುಂದರಿಯರ ಸ್ಪರ್ಧೆಯನ್ನು ಸಂಘಟಕರು ನಿರೀಕ್ಷಿಸಿದ್ದರಾದರೂ ಕೇವಲ 6 ಮಹಿಳೆಯರು ವೇದಿಕೆಯಲ್ಲಿ ‘ಕ್ಯಾಟ್ ವಾಕ್’ ಮಾಡಿದರು. ಹಾಡಿದರು, ಕುಣಿದರು, ಪ್ರಶ್ನೆಗೆ ಉತ್ತಮವಾಗಿ ಉತ್ತರಿಸಲು ಪ್ರಯತ್ನಿಸಿದರು. ಅಂತಿಮವಾಗಿ ಶಿಕ್ಷಕಿ ಮಾಳೇಟಿರ ರಶ್ಮಿ ಉತ್ತಪ್ಪ ಅವರನ್ನು ‘ಮಿಸೆಸ್ ಕೂರ್ಗ್’ ಎಂದು ಘೋಷಣೆ ಮಾಡಲಾಯಿತು.
ಚಿನ್ನ-ಬೆಳ್ಳಿ ವರ್ತಕರ ಉಡುಗೊರೆಯೊಂದಿಗೆ ಮಹಿಳಾ ದಸರಾ ಅಧ್ಯಕ್ಷೆ ಪ್ರವಿ ಮೊಣ್ಣಪ್ಪ ನಗದು ಬಹುಮಾನವನ್ನು ಮಿಸೆಸ್ ಕೂರ್ಗ್ ವಿಜೇತೆಗೆ ನೀಡಿದರು. ಮಹಿಳಾ ದಸರಾ ಮಿಸೆಸ್ ಕೂರ್ಗ್ ತೀರ್ಪುಗಾರರಾಗಿ ಶೀಲಾ ಬೋಪಣ್ಣ ಕಾರ್ಯ ನಿರ್ವಹಿಸಿದರು. ಗೀತಾ ನಾಯ್ಡು, ಓಮನಾ, ರೇಖಾ ಗಣೇಶ್, ರತಿ ಅಚ್ಚಪ್ಪ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 6 ಮಂದಿ ಸ್ಪರ್ಧಾಳುವಲ್ಲಿ ಪುತ್ತಾಮನೆ ವಿದ್ಯಾ ಜಗದೀಶ್ ಹಾಗೂ ದಂತವೈದ್ಯೆ ರಮ್ಯ ಅರವಿಂದ್ ಅವರೂ ಗಮನ ಸೆಳೆದರು. ಅಂತಿಮವಾಗಿ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.
ಮಹಿಳಾ ದಸರಾ ಸಂಘಟಕರಿಗೆ ಅದೃಷ್ಟದ ಮಹಿಳೆ ಪಂದ್ಯವನ್ನು ಆಯೋಜಿಸಲಾಗಿತ್ತು. ಸುಮಾರು 12ಕ್ಕೂ ಅಧಿಕ ಸಮಿತಿ ಸದಸ್ಯರಲ್ಲಿ ಅಧ್ಯಕ್ಷೆ ಪ್ರವಿ ಮೊಣ್ಣಪ್ಪ ಅವರು ಅದೃಷ್ಟದ ಮಹಿಳೆ ಬಹುಮಾನ ಗೆದ್ದುಕೊಂಡರು.
ಅತೀ ಕಡಿಮೆ ಕಾಲಾವಕಾಶದಲ್ಲಿ ವಿವಿಧ ಪ್ರಾಯೋಜಕರನ್ನು ಕಲೆಹಾಕಿ ಉತ್ತಮ ಮಹಿಳಾ ದಸರಾ ಆಯೋಜನೆ ಗಾಗಿ ಪ್ರವಿಮೊಣ್ಣಪ್ಪ, ಕಾರ್ಯದರ್ಶಿ ಎಂ. ಮಂಜುಳಾ, ಖಜಾಂಚಿ ಪ್ರಭಾವತಿ ಮತ್ತು ಸದಸ್ಯರು ಎಲ್ಲರ ಮೆಚ್ಚುಗೆಗಳಿಸಿದರು.
ಒಟ್ಟು 16 ವಿಭಾಗದಲ್ಲಿ ಮಹಿಳೆಯರಿಗೆ ಸ್ಪರ್ಧೆ ಏರ್ಪಡಿಸ ಲಾಗಿದ್ದು ತಲಾ ಮೂವರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಯಿತು.
ರಾತ್ರಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಮಾಜಿ ಕೊಡವ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಕಾವೇರಿ ಕಲಾ ವೇದಿಕೆಗೆ ಭೇಟಿ ನೀಡಿ ಮಹಿಳಾ ದಸರಾಗೆ ಶುಭ ಹಾರೈಸಿ ತೆರಳಿದರು.
- ಟಿ.ಎಲ್. ಶ್ರೀನಿವಾಸ್