ಮಡಿಕೇರಿ, ಸೆ. 25: ನಲವತ್ತು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ಆರೋಗ್ಯವನ್ನು ತಪ್ಪದೇ ಪರೀಕ್ಷಿಸಿಕೊಳ್ಳಬೇಕು ಎಂದು ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ವಿ. ಚಿದಾನಂದ ಕಿವಿಮಾತು ಹೇಳಿದರು.
ಕೊಂಡಂಗೇರಿ ಶಿಫಾಕೇಂದ್ರ, ಸುಳ್ಯದ ಕೆ.ವಿ.ಜಿ. ಆಸ್ಪತ್ರೆ ಹಾಗೂ ಕೆ.ವಿ.ಜಿ ದಂತ ವೈದ್ಯಕೀಯ ಆಸ್ಪತ್ರೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಉಚಿತ ಆರೋಗ್ಯ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ 35ರಿಂದ40 ವರ್ಷಕ್ಕೆ ಮಧುಮೇಹ, ರಕ್ತದೊತ್ತಡಗಳಂತಹ ತೊಂದರೆಗಳು ಸಾಮಾನ್ಯರನ್ನು ಕಾಡುತ್ತಿವೆ. 60ವರ್ಷ ಮೇಲ್ಪಟ್ಟವರಿಗೆ ದೃಷ್ಟಿಹೀನತೆ ಕೂಡ ಬಾಧಿಸುವದಿದೆ. ಹೀಗಾಗಿ ಪ್ರತಿಯೊಬ್ಬರೂ ಆರು ತಿಂಗಳಿಗೊಮ್ಮೆ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳುವದು ಒಳಿತು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭ ಮಾತನಾಡಿದ ಶಿಫಾ ಕೇಂದ್ರದ ಮುಖ್ಯಸ್ಥ ಸಿ.ಬಿ. ಮೊಹಮದ್ ಹಸ್ರತ್ ಬಾಬಾ ಅವರು ಪ್ರತಿ ಆರು ತಿಂಗಳಿಗೊಮ್ಮೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿವಿಧ ತಜ್ಞ ವೈದ್ಯರುಗಳನ್ನು ಆಹ್ವಾನಿಸಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸುವದಾಗಿ ಹೇಳಿದರು. ಸುಳ್ಯದ ದಂತ ಮಹಾವಿದ್ಯಾಲಯದ ಡಾ. ಹೇಮಂತ್‍ಬಟ್ಟೂರ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಶೇಖರ್, ಜಯಂತ್ ಹಾಗೂ ಉಮೇಶ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಹದಿಮೂರು ವೈದ್ಯರುಗಳು ರೋಗಿಗಳನ್ನು ಪರೀಕ್ಷಿಸಿದರು. ಪತ್ರಕರ್ತ ಎಂ.ಇ. ಮಹಮದ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರೆ, ಶಿಫಾಕೇಂದ್ರದ ಇಸ್ಮಾಈಲ್ ಮುಸ್ಲಿಯಾರ್ ವಂದಿಸಿದರು.
ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ವಿಭಾಗ, ಕಿವಿ, ಮೂಗು, ಗಂಟಲು, ನೇತ್ರ, ಚರ್ಮ ಮೂಳೆ, ದಂತ ವಿಭಾಗಗಳಲ್ಲದೆ ಮಕ್ಕಳ ರೋಗ, ಸ್ತ್ರೀ ರೋಗ, ಶಸ್ತ್ರ ಚಿಕಿತ್ಸಾ ವಿಭಾಗಗಳ ತಜ್ಞ ವೈದ್ಯರುಗಳೂ ಶಿಬಿರದಲ್ಲಿ ಪಾಲ್ಗೊಂಡು ರೋಗಿಗಳನ್ನು ಪರಿಶೀಲಿಸಿ ಸಲಹೆ ಹಾಗೂ ಚಿಕಿತ್ಸೆಯನ್ನು ಕಲ್ಪಿಸಿದರು. ಹಲ್ಲು ಕೀಳುವದು, ಸ್ವಚ್ಛಗೊಳಿಸುವಿಕೆ, ಹಲ್ಲಿಗೆ ಸಿಮೆಂಟ್ ಹಾಕುವಿಕೆ ಇತ್ಯಾದಿ ಚಿಕಿತ್ಸೆಗಳನ್ನು ಇದೇ ಸಂದರ್ಭ ಕಲ್ಪಿಸಲಾಯಿತು. ಶಿಬಿರದಲ್ಲಿ ಇನ್ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ಚಿಕಿತ್ಸೆ ಮತ್ತು ಸಲಹೆಗಳನ್ನು ಪಡೆದುಕೊಂಡರು.