ಕುಶಾಲನಗರ, ಸೆ. 25 : 11 ನೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಉಳಿಕೆಯಾದ ರೂ 5.3 ಲಕ್ಷ ಹಣವನ್ನು ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದ ಗ್ಯಾಲರಿ ನಿರ್ಮಾಣಕ್ಕೆ ಕೊಡುಗೆ ನೀಡಲಾಯಿತು. ಈ ಸಂಬಂಧ ಸಮ್ಮೇಳನದ ಹಣಕಾಸು ಸಮಿತಿಯ ಸಂಚಾಲಕರಾದ ಎಸ್.ಎನ್.ನರಸಿಂಹಮೂರ್ತಿ ಮತ್ತು ಸಮಿತಿ ಸದಸ್ಯರುಗಳು ಗ್ಯಾಲರಿ ನಿರ್ಮಾಣ ಕಾಮಗಾರಿಗೆ ಸೋಮವಾರ ಬೆಳಿಗ್ಗೆ ಭೂಮಿಪೂಜೆ ನೆರವೇರಿಸಿದರು. ಸಮ್ಮೇಳನ ಸಂದರ್ಭ 17 ಲಕ್ಷ ರೂ ಸಂಗ್ರಹವಾಗಿದ್ದು ಉಳಿಕೆ ಹಣವನ್ನು ಸ್ಥಳೀಯ ಅಭಿವೃದ್ಧಿ ಕಾಮಗಾರಿಗೆ ಬಳಸುವಂತೆ ಈ ಹಿಂದೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಸಮ್ಮೇಳನದ ಗೌರವಾಧ್ಯಕ್ಷರಾಗಿದ್ದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಸೂಚನೆ ಮೇರೆಗೆ ಉಳಿಕೆ ಹಣವನ್ನು ಶಾಲಾ ಮೈದಾನದ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಸಮಿತಿಯ ಸದಸ್ಯರಾದ ಎಂ.ವಿ.ನಾರಾಯಣ ತಿಳಿಸಿದ್ದಾರೆ.ಈ ಸಂದರ್ಭ ಹಣಕಾಸು ಸಮಿತಿಯ ಸದಸ್ಯರುಗಳಾದ ಎಂ.ಎನ್.ಕುಮಾರಪ್ಪ, ವಿ.ಪಿ.ಶಶಿಧರ್, ಜಿ.ಎಲ್.ನಾಗರಾಜ್ ಮತ್ತಿತರರು ಇದ್ದರು.