ಕೂಡಿಗೆ, ಸೆ. 26: ಜಿಲ್ಲೆಯ ಗಡಿಭಾಗದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ಗ್ರಾಮದ ಸರಹದ್ದಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಇದರ ಪರೀದಿಯಲ್ಲಿಯೇ ಮದ್ಯದಂಗಡಿಯನ್ನು ತೆರೆಯಲು ಸಿದ್ಧತೆ ನಡೆಯುತ್ತಿದೆ. ಕಾನೂನು ಬಾಹಿರವಾಗಿ ಸ್ಥಾಪನೆ ಮಾಡಲು ಅಬಕಾರಿ ಇಲಾಖೆಯ ಅಧಿಕಾರಿಗಳೇ ಪರವಾನಿಗೆ ನೀಡಲು ಮುಂದಾಗಿರುವದು ಸರಿಯಾದ ಕ್ರಮವಲ್ಲ ಎಂದು ಶಿರಂಗಾಲ ಗ್ರಾಮದ ಮುಖಂಡರುಗಳಾದ ಎಸ್.ಎ. ಶ್ರೀನಿವಾಸ್, ಸಣ್ಣಪ್ಪ ಸೇರಿದಂತೆ 150 ಕ್ಕೂ ಹೆಚ್ಚಿನ ಗ್ರಾಮಸ್ಥರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ 220 ಮೀಟರ್ ವ್ಯಾಪ್ತಿ ಹೆದ್ದಾರಿ ವಿಸ್ತೀರ್ಣದಿಂದ ಸ್ಥಳಾಂತರ ಆದೇಶವಿದ್ದರೂ ನಿಯಮವನ್ನು ಉಲ್ಲಂಘಿಸಿ ಮದ್ಯದಂಗಡಿಯನ್ನು ತೆರೆಯಲು ಮುಂದಾಗಿರುವದು ಸರಿಯಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅಬಕಾರಿ ನಿರೀಕ್ಷಕರಿಗೂ, ಅಬಕಾರಿ ಜಿಲ್ಲಾಧಿಕಾರಿಗಳಿಗೂ ಮತ್ತು ಗ್ರಾಮ ಪಂಚಾಯಿತಿಗೆ ಈಗಾಗಲೇ ದೂರು ಸಲ್ಲಿಸಲಾಗಿದೆ. ಮದ್ಯದಂಗಡಿ ತೆರೆಯದಂತೆ ಗ್ರಾಮಸ್ಥರ ಮನವಿಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವದು. ಅಲ್ಲದೆ ಸಂಬಂಧಪಟ್ಟ ಅಬಕಾರಿ ಇಲಾಖೆಯ ಅಧಿಕಾರಿಗಳ ಕಚೇರಿಯ ಎದುರು ಧರಣಿ ನಡೆಸಲು ಮುಂದಾಗುವದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.