ಗೋಣಿಕೊಪ್ಪಲು, ಸೆ. 26: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸರಹದ್ದಿನಲ್ಲಿ ಬರುವ ಸುಮಾರು ಒಂಭತ್ತು ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿ ಆಧಾರದಲ್ಲಿ ವನ್ಯಜೀವಿ ಸೂಕ್ಷ್ಮ ಪರಿಸರ ವಲಯ ಎಂದು ಕೇಂದ್ರವು ಘೋಷಣೆ ಮಾಡಿದ್ದು, ಇದಕ್ಕೆ ಸಾರ್ವಜನಿಕ ಸಂಘ ಸಂಸ್ಥೆಯಿಂದ ಅಭಿಪ್ರಾಯ ವ್ಯಕ್ತಪಡಿಸಲು ಒಟ್ಟು 60 ದಿನದ ಗಡುವು ನೀಡಲಾಗಿದ್ದು, ಇಂದು ಅಂತಿಮ ದಿನವಾಗಿದೆ. ಈ ನಿಟ್ಟಿನಲ್ಲಿ ಇಂದು ಕುಟ್ಟದಿಂದ ನಾಲ್ಕೇರಿ, ಕಾನೂರು, ನಿಟ್ಟೂರು, ಬಾಳೆಲೆ, ಕೋಣನಕಟ್ಟೆ ಮಾರ್ಗ ತಿತಿಮತಿ ಮತ್ತಿಗೋಡು ವನ್ಯಜೀವಿ ವಲಯದ ವರೆಗೆ ರಾಜಕೀಯರಹಿತವಾಗಿ ವನ್ಯಜೀವಿ ಸೂಕ್ಷ್ಮ ಪರಿಸರ ವಲಯವನ್ನು ವಿರೋಧಿಸಿ ನೂರಾರು ಮಂದಿ ಪ್ರತಿಭಟನಾಕಾರರು ವಾಹನ ಜಾಥಾದ ಮೂಲಕ ತೆರಳಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಅರಣ್ಯ ಇಲಾಖಾಧಿಕಾರಿ ಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕುಟ್ಟ, ಕಾನೂರು, ಬಾಳೆಲೆ ಕೊಡವ ಸಮಾಜ, ಕಾನೂರು ಅಮ್ಮಕೊಡವ ಸಮಾಜ, ಈ ಭಾಗದ ಗ್ರಾ.ಪಂ.ಜನಪ್ರತಿನಿಧಿಗಳು, ಬಾಳೆಲೆ ವ್ಯವಸಾಯೋತ್ಪನ್ನ ಮಾರಾಟ ಪರಿವರ್ತನಾ ಸಂಘ, ಬಾಳೆಲೆ ವಿದ್ಯಾಸಂಸ್ಥೆ, ಬಾಳೆಲೆ ಪ್ರಾಥಮಿಕ ಪತ್ತಿನ ಸಹಕಾರ ಸಂಘ, ಬಾಳೆಲೆ ಆಟೋಚಾಲಕರ ಸಂಘ, ಕಾನೂರು ಫ್ರೆಂಡ್ಸ್ ಕ್ಲಬ್, ಬುಡ್‍ಕಣಿ ಗ್ರೂಪ್, ಬಸವೇಶ್ವರ ಸಂಘ, ಕಾನೂರು ಸೇವಾ ಸಂಘ, ಕೋತೂರು ಮಾರಮ್ಮ ಸೇವಾ ಸಂಘ, ಗೊರಗೋಡು ಅಯ್ಯಪ್ಪ ಸಂಘ ಒಳಗೊಂಡಂತೆ ವಿವಿಧ ಸಂಘ ಸಂಸ್ಥೆಗಳು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಂತಾದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದು, ಯಾವದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ, ಮಾಧವ ಗಾಡ್ಗಿಳ್ ವರದಿ ಜಾರಿಯಾಗಲು ಬಿಡಲಾರೆವು. ಒಂದೊಮ್ಮೆ ರಾಷ್ಟ್ರೀಯ ಉದ್ಯಾನ ದಿಂದ 1 ಕಿ.ಮೀ.ಅಂತರದವರೆಗೆ ಸೂಕ್ಷ್ಮ ವನ್ಯಜೀವಿ ಪರಿಸರ ವಲಯ ಘೋಷಣೆಯಾದಲ್ಲಿ ಕೊಡವರ ಸಾಂಪ್ರದಾಯಿಕ ಕೋವಿ ಹಕ್ಕನ್ನು ಕಸಿಯಲಾಗುತ್ತದೆ. ಮುಂದೆ ಮತ್ತೆ ವಲಯದ
(ಮೊದಲ ಪುಟದಿಂದ) ವಿಸ್ತೀರ್ಣವನ್ನು 10 ಕಿ.ಮೀ. ದೂರಕ್ಕೆ ವಿಸ್ತರಿಸುವ ಮೂಲಕ ಮತ್ತಷ್ಟು ಕಠಿಣ ಕಾನೂನು ಕ್ರಮ ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಅರಣ್ಯ ಸರಹದ್ದನ್ನೇ ಶೂನ್ಯ ಕಿ.ಮೀ.ಗೆ ಕೇರಳ ಮಾದರಿಯಲ್ಲಿ ಅನುಷ್ಠಾನಗೊಳಿಸಿ, ಆದೇಶ ಹೊರಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರಲ್ಲದೆ, ಇಲ್ಲವೆ ಮುಂದೆ ಮತ್ತಷ್ಟು ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.
ಕುಟ್ಟ ಕೊಡವ ಸಮಾಜ ಆವರಣದಿಂದ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಹೊರಟ ವಾಹನ ಜಾಥಾ ಮತ್ತಿಗೋಡನ್ನು 12 ಗಂಟೆ ಸುಮಾರಿಗೆ ತಲುಪಿತು. ಕುಟ್ಟ, ನಾಲ್ಕೇರಿ, ಬಾಡಗ, ಕಾನೂರು, ನಿಟ್ಟೂರು, ಬಾಳೆಲೆ, ಕೋಣನಕಟ್ಟೆ, ತಿತಿಮತಿ ಮಾರ್ಗ ಸುಮಾರು 50 ಕಿ.ಮೀ.ಅಧಿಕ ದೂರವನ್ನು ಕ್ರಮಿಸುವ ಮೂಲಕ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಆನೆಚೌಕೂರು ವನ್ಯಜೀವಿ ವಲಯಕ್ಕೆ ಒಳಪಡುವ ಮತ್ತಿಗೋಡು ಸಾಕಾನೆ ಶಿಬಿರದ ಮುಂದೆ ಅಂತ್ಯವಾಯಿತು.
ಹುಣಸೂರು ವನ್ಯಜೀವಿ ಉಪ ವಿಭಾಗ, ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಆರ್. ಪ್ರಸನ್ನಕುಮಾರ್ ಅವರಿಗೆ ಕೊಡವ ಸಮಾಜ, ವಿವಿಧ ರಾಜಕೀಯ ಪಕ್ಷ ಹಾಗೂ ಸಂಘ ಸಂಸ್ಥೆಗಳ ಮೂಲಕ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭ ಮಾತನಾಡಿದ ಎಸಿಎಫ್ ಪ್ರಸನ್ನಕುಮಾರ್ ಅವರು ವನ್ಯಜೀವಿ ಸೂಕ್ಷ್ಮ ಪರಿಸರ ವಲಯ ವಿರೋಧಿಸಿ ನೀಡಲಾದ ಮನವಿ ಪತ್ರವನ್ನು ರಾಜ್ಯ ಅರಣ್ಯಪಡೆ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕಿಶನ್ ಸಿಂಗ್ ಸುಗಾರ ಅವರಿಗೆ ರವಾನಿಸಿ, ನಂತರ ಕೇಂದ್ರಕ್ಕೆ ರವಾನಿಸಲಾಗುವದು ಎಂದು ಹೇಳಿದರು. ಇದೇ ಸಂದರ್ಭ ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು ಅವರು ಉಪಸ್ಥಿತರಿದ್ದು, ಈ ಭಾಗದ ಜನತೆಯ ಮನವಿಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವದು ಎಂದು ಹೇಳಿದರು.
ನೂರಾರು ಮಂದಿ ಪ್ರತಿಭಟನಾಕಾರರು ಕಾರು, ಜೀಪು, ಆಟೋ ಇತ್ಯಾದಿ ವಾಹನಗಳ ಮೂಲಕ ಮತ್ತಿಗೋಡು ವನ್ಯಜೀವಿ ವಲಯದ ಅರಣ್ಯ ಕಚೇರಿಗೆ ಆಗಮಿಸಿದರಲ್ಲದೆ ಕೇಂದ್ರದ ದಮನಕಾರಿ ನೀತಿ ಬಗ್ಗೆ ಧಿಕ್ಕಾರ ಕೂಗಿದರು.
ಅರಣ್ಯ ಕಚೇರಿ ಮುಂಭಾಗವೇ ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ಪ್ರಾಸ್ತಾವಿಕವಾಗಿ ಬಾಳೆಲೆ ಕೊಡವ ಸಮಾಜದಲ್ಲಿ ನಡೆದ ಸಭೆಯ ನಂತರ ಸರ್ಕಾರಕ್ಕೆ ವರದಿ ಅನುಷ್ಠಾನ ವಿರೋಧಿಸಿ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಸರವಾದಿಗಳ ಸಹಕಾರವೂ ಕೋರಲಾಗಿದ್ದು ಕೊಡಗು ವನ್ಯಜೀವಿ ಸಂರಕ್ಷಣಾ ಸಂಘದ ಮೂಲಕ ಪ್ರತ್ಯೇಕ ಮನವಿಯನ್ನು ರಾಜ್ಯ ಹಾಗೂ ಕೇಂದ್ರಕೆ ಕಳುಹಿಸಿಕೊಡಲಾಗಿದೆ. ಮುಂದೆ 1 ಕಿ.ಮೀ. ಅಂತರವನ್ನು 10 ಕಿ.ಮೀ.ಗೆ ವಿಸ್ತರಿಸುವ ಸಾಧ್ಯತೆ ಇದ್ದು ಜಿಲ್ಲೆಯ ಎಲ್ಲ ಗ್ರಾಮದ ಜನತೆ, ಕೃಷಿಕರು ಎಚ್ಚೆತ್ತುಕೊಳ್ಳಬೇಕಾಗಿದೆ. ಕಾರ್ಮಿಕರಿಗೂ ಇದರಿಂದ ತೊಂದರೆಯಾಗಲಿದೆ ಎಂದರು.
ಕೊಡಗಿನ ಶಾಸಕರು, ವಿಧಾನ ಸಭಾ ಸದಸ್ಯರು ಹಾಗೂ ಸಂಸದರ ಮೂಲಕವೂ ನವದೆಹಲಿಗೆ ನಿಯೋಗ ತೆರಳಿ ಬಫರ್ ಝೋನ್ ಅಗತ್ಯ ಕೊಡಗಿಗೆ ಇಲ್ಲ. ಕೇರಳ ಮಾದರಿಯಲ್ಲಿ ಶೂನ್ಯ ಕಿ.ಮೀ.ಗೆ ಕೊಡಗಿನಲ್ಲಿಯೂ ಸೂಕ್ಷ್ಮ ವನ್ಯಜೀವಿ ಪರಿಸರ ವಲಯವನ್ನು ನಿಗಧಿಗೊಳಿಸಲು ಮನವಿ ಮಾಡಲಾಗುವದು ಎಂದರು.
ಕೊಡಗು ಜಿಲ್ಲಾ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ಯಮುನಾ ಚಂಗಪ್ಪ ಮಾತನಾಡಿ, ಕೊಡಗು ಭೌಗೋಳಿಕವಾಗಿ ಸಣ್ಣ ಪ್ರದೇಶವಾಗಿದ್ದು, ಕೊಡಗಿನ ಕಾಫಿ ತೋಟಗಳಲ್ಲಿ ಕಾಣಸಿಗುವ ಮರಗಳು ಅರಣ್ಯದಲ್ಲಿ ಕಾಣಿಸುತ್ತಿಲ್ಲ. ಅರಣ್ಯ ಇಲಾಖೆಯ ಕೆಲವು ವ್ಯಕ್ತಿಗಳಿಂದಲೇ ಅಭಯಾರಣ್ಯದಲ್ಲಿರುವ ಮರ ಕಳ್ಳತನವಾಗುತ್ತಿದೆ. ಈ ನಿಟ್ಟಿನಲ್ಲಿ ಸೂಕ್ಷ್ಮ ವನ್ಯಜೀವಿ ವಲಯವನ್ನು ಘೋಷಣೆ ಮಾಡಿದ್ದಲ್ಲಿ ಕೊಡಗಿನ ಕೃಷಿಕರು ಮುಂದೆ ತಮ್ಮ ಅಸ್ತಿತ್ವವನ್ನೆ ಕಳೆದುಕೊಳ್ಳಬೇಕಾದೀತು ಎಂದು ಅಭಿಪ್ರಾಯಪಟ್ಟರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಈಗಿರುವ ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯೇ ಉತ್ತಮವಾಗಿದ್ದು, ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಮತ್ತಷ್ಟು ಒತ್ತಡವನ್ನು ಇಲ್ಲಿಯ ಕೃಷಿಕರ, ಸಾರ್ವಜನಿಕ ಜೀವನದ ಮೇಲೆ ಏರುವದು ಸರಿಯಲ್ಲ ಎಂದು ಹೇಳಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವಿಸ್ತೀರ್ಣ ಈ ಹಿಂದೆ ಕೇವಲ 143 ಚ.ಕಿ.ಮೀ. ಇತ್ತು. ಇದೀಗ 643 ಚದರ ಕಿ.ಮೀ. ವಿಸ್ತಾರಗೊಂಡಿದೆ. ಅರಣ್ಯದ ಆದಿವಾಸಿಗಳಿಗೆ ಅರಣ್ಯ ಹಕ್ಕು ನಿಯಮವಿದ್ದಾಗ್ಯೂ ಅಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಇದೀಗ ಸೂಕ್ಷ್ಮ ವನ್ಯಜೀವಿ ವಲಯ ಹೆಸರಿನಲ್ಲಿ ಕಾನೂನು ಅಳವಡಿಸುತ್ತಿರುವದು ಅಕ್ಷಮ್ಯ ಎಂದು ಹೇಳಿದರು.
ಕುಟ್ಟ ಕೊಡವ ಸಮಾಜ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಮಾತನಾಡಿ, ಇದೀಗ ವನ್ಯಪ್ರಾಣಿಗಳು ಕೃಷಿಕರ ತೋಟ ಮನೆಗಳ ಸಮೀಪ ಸುಳಿದು ನಾಯಿ, ಹಂದಿ, ಜಾನುವಾರುಗಳನ್ನು ಹೊತ್ತೊಯ್ಯುತ್ತಿದೆ. ಇನ್ನು ಸೂಕ್ಷ್ಮ ಪರಿಸರ ತಾಣ ಘೋಷಣೆಯಾದಲ್ಲಿ ಮನೆಯೊಳಗೆ ನುಸುಳಿ ಮನುಷ್ಯನನ್ನೆ ಹೊತ್ತೊಯ್ಯುವ ಕಾಲ ದೂರವಿಲ್ಲ. ಇದೀಗ ನಮ್ಮೆಲ್ಲರ ಅಳಿವು ಉಳಿವಿನ ಪ್ರಶ್ನೆ ಎದುರಾಗಿದ್ದು, ಬಫರ್ ಝೋನ್ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವುಮಾದಪ್ಪ ಮಾತನಾಡಿ, ಕೊಡಗು ಜಿಲ್ಲೆಗೆ ಮಾರಕವಾದ ಯಾವದೇ ಅಧಿಸೂಚನೆ ವಿರುದ್ಧ ಪಕ್ಷಾತೀತವಾಗಿ ಹೋರಾಟ ಮಾಡಲಾಗುವದು ಎಂದರು.
ಬಾಳೆಲೆ ಕೊಡವ ಸಮಾಜ ಅಧ್ಯಕ್ಷ ಮಲಚೀರ ಬೋಸ್, ತಿತಿಮತಿ ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ ಮಾತನಾಡಿದರು. ವಾಹನ ಜಾಥಾ ಉಸ್ತುವಾರಿಯನ್ನು ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಹಾಗೂ ಆದೇಂಗಡ ವಿನು ಉತ್ತಪ್ಪ ವಹಿಸಿದ್ದರು. ಕಾನೂರಿನ ಅಳಮೇಂಗಡ ವಿವೇಕ್, ಕಾಡ್ಯಮಾಡ ಬೋಪಣ್ಣ, ಕುಂಞಮಾಡ ರಮೇಶ್, ಕೇಚಮಾಡ ದಿನೇಶ್, ಕಿರಣ್, ಎಸ್.ಎಂ. ಬಸಪ್ಪ, 9 ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ನ ಟಾಟು ಮೊಣ್ಣಪ್ಪ, ಬಾಳೆಲೆಯ ಅಳಮೇಂಗಡ ಬೋಸ್ ಮಂದಣ್ಣ, ಶರೀನ್ ಮುತ್ತಣ್ಣ, ಅರಮಣಮಾಡ ಸತೀಶ್ ದೇವಯ್ಯ, ಚಕ್ಕೇರ ಸೂರ್ಯ, ಕುಟ್ಟ ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಬಾಡಗದ ಪ್ರಚನ್ ಮುತ್ತಪ್ಪ, ಬಾಳೆಲೆ ಕೊಡವ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಆದೇಂಗಡ ಚಂದ್ರಶೇಖರ್, ಅಡ್ದೇಂಗಡ ಅರುಣ್, ಪೆÇೀಡಮಾಡ ಸುಖೇಶ್ ಭೀಮಯ್ಯ, ಚಿಮ್ಮಣಮಾಡ ಕೃಷ್ಣ ಗಣಪತಿ, ಅಳಮೇಂಗಡ ಸುರೇಶ್, ರಂಜನ್ ಮುಂತಾದವರು ಉಪಸ್ಥಿತರಿದ್ದರು. ತಿತಿಮತಿಯ ಶಿವಕುಮಾರ್ ಇದ್ದರು.
ವರದಿ: ಟಿ.ಎಲ್.ಶ್ರೀನಿವಾಸ್