ಕೂಡಿಗೆ, ಸೆ. 25: ಜಿಲ್ಲೆಯ ಪ್ರಮುಖ ಹಾರಂಗಿ ಅಣೆಕಟ್ಟೆಯಿಂದ ಕೊಡಗು ಸೇರಿದಂತೆ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಆರು ತಾಲೂಕುಗಳಲ್ಲಿ ಬೇಸಾಯಕ್ಕೆ ಅನುಕೂಲವಾಗುವಂತೆ ನಾಲೆಗಳ ಮೂಲಕ ಅಣೆಕಟ್ಟೆಯಿಂದ ನೀರನ್ನು ಬಿಡಲಾಗಿತ್ತು. ಕಳೆದ 2 ತಿಂಗಳ ಹಿಂದೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆ ಬಾರದೆ ಕಳೆದ ಸಾಲಿಗಿಂತಲು ಒಂದು ತಿಂಗಳು ತಡವಾಗಿ ಈ ಬಾರಿ ನಾಲೆಯ ಮೂಲಕ ಕೆರೆ-ಕಟ್ಟೆಗಳು ಮತ್ತು ಕುಡಿಯುವ ನೀರಿಗಾಗಿ ನಾಲೆಗೆ ಹರಿಬಿಡಲಾಗಿತ್ತು. ಸಾವಿರಾರು ರೈತರುಗಳು ಗದ್ದೆಗಳಲ್ಲಿ ನಾಟಿ, ಅರೆಬೇಸಾಯ ಮಾಡಿದ್ದಾರೆ. ಈ ನಡುವೆ ಜಲಾನಯನ ಪ್ರದೇಶಗಳಲ್ಲಿ ಅತಿಯಾಗಿ ಮಳೆಬಿದ್ದು, ಅಣೆಕಟ್ಟೆ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ನಾಲೆಗಳಿಗೆ ಈಗಾಗಲೇ ಸರಕಾರದ ಆದೇಶ ಹಾಗೂ ನೀರಾವರಿ ಇಲಾಖೆಯ ನಿಯಮಾನುಸಾರ 2000 ಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನಾಲೆಗಳಿಗೆ ಹರಿಸಲಾಗಿತ್ತು. ಕಳೆದ ರಾತ್ರಿಯಿಂದ ಸರಕಾರದ ಆದೇಶ ಎಂಬಂತೆ ಅಣೆಕಟ್ಟೆ ತುಂಬಿದ್ದರೂ, ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿದ್ದರೂ, ನಾಲೆಗೆ ಹರಿಸಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ.

ಇಂದಿನಿಂದ ಕೇವಲ ಸೋರಿಕೆ ನೀರು ಮಾತ್ರ ನಾಲೆಯ ತಳಭಾಗದಲ್ಲಿ ಹರಿಯುತ್ತಿದೆ. ಈ ನೀರು ರೈತರುಗಳಿಗೆ ತಲುಪಲು ಸಾಧ್ಯವೇ ಇಲ್ಲದಾಗಿದೆ ಎಂದು ಕೊಡಗಿನ ಗಡಿಭಾಗದ ರೈತರುಗಳ ಅಭಿಪ್ರಾಯ. ಅಲ್ಲದೆ, ಗಡಿಭಾಗದ ರೈತರುಗಳ ಬೆಳೆಗಾದರೂ ಹೆಚ್ಚು ನೀರನ್ನು ಹರಿಸುವದರ ಮೂಲಕ ಬೆಳೆಗಳನ್ನು ಬೆಳೆಯಲು ಅನುವು ಮಾಡಿಕೊಡಬೇಕೆಂಬದು ಶಿರಂಗಾಲ, ತೊರೆನೂರು, ಹೆಬ್ಬಾಲೆ ಭಾಗದ ರೈತರುಗಳ ಬೇಡಿಕೆಯಾಗಿದೆ. ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣವಿದ್ದರು ನೀರನ್ನು ನಾಲೆಗೆ ಹರಿಸದೆ ಸ್ಥಗಿತಗೊಳಿಸಿರುವದಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಕಳೆದ ತಿಂಗಳಿನಿಂದ ಅತಿಯಾಗಿ ಮಳೆ ಬಿದ್ದರು ಸರಕಾರ ಮತ್ತು ಇಲಾಖೆಯವರು ನಾಲೆಯಲ್ಲಿ ನೀರನ್ನು ಸ್ಥಗಿತಗೊಳಿಸಿರುವದು ಸರಿಯಾದ ಕ್ರಮವಲ್ಲ, ಈಗಾಗಲೇ ಬೇಸಾಯ ಮಾಡಿರುವ ರೈತರುಗಳಿಗೆ ಅನ್ಯಾಯವಾಗಿದೆ ಎಂದು ಅರಕಲಗೂಡು, ಪಿರಿಯಾಪಟ್ಟಣ, ಹುಣಸೂರು ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘದ ಆಡಳಿತರ ಮಂಡಳಿಯವರು ತಿಳಿಸಿದ್ದಾರೆ.

ಇಲಾಖೆಯ ಮೇಲಿನ ಆದೇಶದನುಗುಣವಾಗಿ ನಾಲೆಗೆ ಕುಡಿಯುವ ನೀರಿಗಾಗಿ ನೀರನ್ನು ಹರಿಸಲಾಗಿತ್ತು. ಇದೀಗ ಹತ್ತು ದಿನಗಳವರೆಗೆ ನಾಲೆಯ ನೀರನ್ನು ಸ್ಥಗಿತಗೊಳಿಸಿ, ಇನ್ನು ಮುಂದಿನ ಹತ್ತು ದಿನಗಳಲ್ಲಿ ನೀರನ್ನು ಹರಿಸಲಾಗುವದು. ಅಣೆಕಟ್ಟೆಯಲ್ಲಿ 7.499 ಟಿಎಂಸಿ ನೀರಿನ ಸಾಮಥ್ರ್ಯವಿದ್ದು, ಇಂದು ಹಾರಂಗಿ ಅಣೆಕಟ್ಟೆಯಿಂದ ನದಿಗೆ 1000 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಒಳಹರಿವು 1905 ಕ್ಯೂಸೆಕ್ ಇದೆ ಎಂದು ಇಲಾಖೆಯ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

-ಕೆ.ಕೆ.ನಾಗರಾಜಶೆಟ್ಟಿ