ಚೆಟ್ಟಳ್ಳಿ, ಸೆ. 27: ಚೆಟ್ಟಳ್ಳಿ ಗ್ರಾಮ ಸಭೆಯು ನಿಗದಿತ ಸಮಯಕ್ಕೆ ಸರಿಯಾಗಿ ಗ್ರಾಮಸ್ಥರು ಮತ್ತು ಇತರೆ ಅಧಿಕಾರಿಗಳು ಹಾಜರಾದರೆ, ಜವಾಬ್ದಾರಿಯುತ ನೋಡಲ್ ಅಧಿಕಾರಿ ಹಾಗೂ ಪಂಚಾಯಿತಿಯ ಒಂದೇ ವಾರ್ಡಿನ ಎರಡು ಸದಸ್ಯರ ಗೈರಿನಿಂದ ಸಭೆಯು ರದ್ದುಗೊಂಡಿತು.

ಗ್ರಾಮಸಭೆಯಲ್ಲಿ ಮೊದಲಿಗೆ ಹಲವು ಅಧಿಕಾರಿಗಳ ಗೈರು ಎದ್ದು ಕಾಣತೊಡಗಿತು. ಕೆಲವೇ ನಿಮಿಷಗಳಲ್ಲಿ ಕೆಲವು ಅಧಿಕಾರಿಗಳು ಬಂದರೆ ಇಪ್ಪತೇಳು ಇಲಾಖೆಯಲ್ಲಿ ಏಳು ಇಲಾಖೆಯ ಪ್ರತಿನಿಧಿಗಳು ಮಾತ್ರ ಭಾಗವಹಿಸಿದ್ದರು. ಜವಾಬ್ದಾರಿಯುತ ನೋಡಲ್ ಅಧಿಕಾರಿಯೇ ಕಾಣದಾಗ ಸಭೆಯಲ್ಲಿ ಗೊಂದಲದ ವಾತಾವರಣ ಗೋಚರಿಸಿತು.

ನೋಡಲ್ ಅಧಿಕಾರಿಯ ಗೈರಿನ ಬಗ್ಗೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷÀ ಸಿ.ಈ. ತೀರ್ಥಕುಮಾರ್ ಪ್ರಶ್ನಿಸಿದಾಗ , ನೋಡಲ್ ಅಧಿಕಾರಿ ಹಾಗೂ ಚೆಟ್ಟಳ್ಳಿಯ ಪಶು ವೈದ್ಯ ಸಂಜೀವ್ ಸಿಂದೆ ಈ ಮೊದಲೇ ಅರಿವಿಕೆ ಕೊಟ್ಟು ತರಬೇತಿಗೆ ತೆರಳಿರುವದಾಗಿ ತಿಳಿಸಿದರು. ಇದನ್ನು ಕೇಳಿದ ಸಾರ್ವಜನಿಕರು ಆಕ್ರೋಶಗೊಂಡು ಪಂಚಾಯಿತಿ ಸದಸ್ಯರನ್ನು ವಿಚಾರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ ಇಓ ಅವರನ್ನು ದೂರವಾಣಿ ಮುಖಂತರ ವಿಚಾರಿಸಲಾಗಿ, ಅಧಿಕಾರಿ ಚಂದ್ರಶೇಖರ್ ಗ್ರಾಮ ಸಭೆಯನ್ನು ಎರಡು ದಿನ ಮುಂದೂಡುವಂತೆ ಸೂಚಿಸಿದರು. ಈ ಮಾತನ್ನು ಕೇಳಿದ ಸದಸ್ಯರು ಅವರನ್ನು ತರಾಟೆಗೆ ತೆಗೆದುಕೊಂಡ ನಂತರ ಅಲ್ಲಿಯೇ ಯಾರನ್ನಾದರೂ ನೋಡಲ್ ಅಧಿಕಾರಿಯಾಗಿ ಮಾಡುವಂತೆ ಪಂಚಾಯಿತಿ ಅಧ್ಯಕ್ಷರಿಗೆ ಈ.ಓ ರವರು ಹಾರಿಕೆಯ ಉತ್ತರ ನೀಡಿದರು. ಇದನ್ನು ಅರಿತ ಗ್ರಾಮಸ್ಥರು ಇಓ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿ ಶಾಪ ಹಾಕಿಕೊಂಡು ಸಭೆಯಿಂದ ಹೊರನಡೆದರು .

ಗ್ರಾಮಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಪಿ.ವಿ. ವತ್ಸಲಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಚೆಟ್ಟಳ್ಳಿ ವಲಯ ಕಾಂಗ್ರೆಸ್ಸಿನ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ, ಸದಸ್ಯರಾದ ಮಹಮ್ಮದ್ ರಫಿ, ಮಧುಸೂದನ್, ಕಂಠಿ ಕಾರ್ಯಪ್ಪ , ಮೇರಿ ಅಂಬೂದಾಸ್, ಮಾಲಾಶ್ರೀ, ಧನು ಲೋಕೇಶ್, ರವಿ, ಮತ್ತಿತರರು ಹಾಜರಿದ್ದರು. ಪಂಚಾಯಿತಿ ಪಿ.ಡಿ.ಓ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.