ಗೋಣಿಕೊಪ್ಪಲು, ಸೆ. 27: ಇಲ್ಲಿನ ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಇತ್ತೀಚೆಗೆ ಓಝೋನ್ ದಿನವನ್ನು ಆಚರಿಸಲಾಯಿತು. ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೃಷ್ಣ ಚೈತನ್ಯ ಮಾತನಾಡಿ, ಓಝೋನ್ ಪದರವು ದಿನದಿಂದ ದಿನಕ್ಕೆ ಹಾನಿಗೊಳಗಾಗುತ್ತಿದ್ದು, ಇದಕ್ಕೆ ನಾವು ಬಳಸುತ್ತಿರುವ ರೆಫ್ರಿಜರೇಟರ್ ಹಾಗೂ ಡಿಯೋಡ್ರೆಂಟ್‍ಗಳು ಕಾರಣವಾಗಿದೆ. ಇಂದು ಮನುಷ್ಯನು ಆಧುನಿಕತೆಗೆ ಮಾರುಹೋಗಿ ಪರಿಸರವನ್ನು ಹಾಳುಗೆಡವುತ್ತಿದ್ದಾನೆ. ಇನ್ನು ಮುಂದಾದರೂ ನಾವು ಪರಿಸರಸ್ನೇಹಿ ವಸ್ತುಗಳನ್ನು ಬಳಸುವ ಮೂಲಕ ಪರಿಸರದ ತಾಪಮಾನವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬೇಕೆಂದರು.

ಮತ್ತೋರ್ವ ಅತಿಥಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನದ ಆಪ್ತ ಸಮಾಲೋಚಕಿ ಕೆ.ಟಿ. ಕೌಶಲ್ಯ ಮಾತನಾಡಿ, ನಾವು ಇಂದಿನ ದಿನಗಳಲ್ಲಿ ಪರಿಸರ ನಾಶಕ್ಕೆ ಕಾರಣವಾಗುತ್ತಿರುವ ರಾಸಾಯನಿಕಗಳ ಬಳಕೆಯನ್ನು ತ್ಯಜಿಸುವ ಮೂಲಕ ಆರೋಗ್ಯಕರವಾದ ಪರಿಸರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಯುವಜನತೆ ಕಾರ್ಯೋನ್ಮುಖ ರಾಗಬೇಕು ಎಂದರು. ಈ ಸಂದರ್ಭ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿಗಳಾದ ಎಂ.ಎನ್. ವನಿತ್ ಕುಮಾರ್ ಮತ್ತು ಎನ್.ಪಿ. ರೀತಾ ಉಪಸ್ಥಿತರಿದ್ದರು.