ಮಡಿಕೇರಿ, ಸೆ. 27: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿ.ಸಿ.ಸಿ) ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಅಪೆಕ್ಸ್ ಬ್ಯಾಂಕಿನಿಂದ ನೀಡಲಾಗುತ್ತಿರುವ ಪ್ರಶಸ್ತಿಗೆ ಭಾಜನವಾಗಿದೆ. ತಾ. 23 ರಂದು ನಡೆದ ಅಪೆಕ್ಸ್ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ 2015-16ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ‘ಎ’ ವರ್ಗೀಕರಣವನ್ನು ಪರಿಗಣಿಸಿ ದ್ವಿತೀಯ ಬಹುಮಾನ ಪಡೆದಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯೊಂದಿಗೆ ರೂ. 2 ಲಕ್ಷ ಬಹುಮಾನ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.

2015-16ನೇ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಮತ್ತು ಹಾಲಿ ಬ್ಯಾಂಕಿನ ಅಧ್ಯಕ್ಷರಾಗಿರುವ ಬಿ.ಡಿ. ಮಂಜುನಾಥ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಶಿವಕುಮಾರ ಅವರಿಗೆ ಪ್ರಶಂಸನಾ ಪುರಸ್ಕಾರವು ಲಭಿಸಿದೆ.

ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಶಿಕ್ಷಣ ನಿಧಿಗೆ 7.40 ಲಕ್ಷ ರೂ.ವನ್ನು ಸಿಇಒ ಯೋಗೇಂದ್ರ ನಾಯಕ್ ಅವರಿಗೆ ಇದೇ ಸಂದರ್ಭ ನೀಡಿದರು.

ಡಿಸಿಸಿ ಉಪಾಧ್ಯಕ್ಷ ಹರೀಶ್ ಪೂವಯ್ಯ, ನಿರ್ದೇಶರಾದ ಬಾಂಡ್ ಗಣಪತಿ, ರಘು ನಾಣಯ್ಯ, ಸುಗು ತಿಮ್ಮಯ್ಯ, ಕುಮಾರಪ್ಪ, ಸಂಪತ್, ರಮೇಶ್, ರಘು ಸೋಮಯ್ಯ, ಸತೀಶ್ ಇತರರು ಇದ್ದರು.