ಗೋಣಿಕೊಪ್ಪಲು, ಸೆ. 27: ಇಂದು ಬೆಳಿಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೂ ಗೋಣಿಕೊಪ್ಪಲು ಕಾವೇರಿ ಕಲಾವೇದಿಕೆಯಲ್ಲಿ ಕೊಡಗಿನ ಕವಿಗಳ ವಿಭಿನ್ನ ಶೈಲಿಯ ಕವನವಾಚನ ಮನಸ್ಸಿಗೆ ಮುದನೀಡಿತು. ಈ ಬಾರಿ ಪುಟಾಣಿ, ಬಾಲಕವಿಗಳು ಕನ್ನಡ, ಆಂಗ್ಲ ಹಾಗೂ ಹಿಂದಿಯಲ್ಲಿ ಮುದ್ದು ಮುದ್ದಾಗಿ ಕವನ ವಾಚಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಕವಿಗೋಷ್ಠಿನೇ ಹಾಗೆ. ಇಲ್ಲಿ ಕವಿಗಳ ಅಭಿಮಾನಿಗಳು ಯಾರೂ ಇರುವದಿಲ್ಲ. ಕವಿಗಳೇ ಇಲ್ಲಿ ವಾಚಕರು, ಪ್ರೇಕ್ಷಕರು ಎಲ್ಲವೂ! ಸುಮಾರು 55 ಮಂದಿ ಕವನ ವಾಚನ ಮಾಡಿರುವದು ಈ ಬಾರಿಯ ವೈಶಿಷ್ಟ್ಯ. 30ಕ್ಕೂ ಅಧಿಕ ಮಹಿಳಾ ಕವಿಯಿತ್ರಿಯರು. 15ಕ್ಕೂ ಅಧಿಕ ಪುರುಷ ಕವಿಗಳು, 7ಕ್ಕೂ ಅಧಿಕ ಬಾಲಕವಿಗಳು ತಮ್ಮದೇ ಆದ ಧಾಟಿಯಲ್ಲಿ ಕವನ ವಾಚನ ಮಾಡಿದರು.

2ನೇ ತರಗತಿಯಿಂದ ಕಾಲೇಜು ಯುವಕ ಯುವತಿವರೆಗೂ ಶಾಲಾ ಕಾಲೇಜು ವಿದ್ಯಾರ್ಥಿಗಳೂ ಉತ್ಸಾಹ ದಿಂದಲೇ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಆಕರ್ಷಣೆಯನ್ನು ಹೆಚ್ಚಿಸಿದರು. ಭಾಗವಹಿಸಿದ ಎಲ್ಲರಿಗೂ ಸಂಘಟಕರು ಕವನ ವಾಚಿಸಲು ಅವಕಾಶ ಮಾಡಿಕೊಟ್ಟರು. ಪುಟ್ಟ ಹುಡುಗಿ ಕವನ ಹಿಂದಿಯಲ್ಲಿ ಕವನ ವಾಚಿಸಿ ಮೆಚ್ಚುಗೆಗಳಿಸಿದರು.

(ಮೊದಲ ಪುಟದಿಂದ) ಮಮತ, ಚಾಲ್ರ್ಸ್ ಡಿಸೋಜ ವಿಭಿನ್ನತೆ ಮೆರೆದರೆ, ಹಳೆಗನ್ನಡದ ಕವನ ವಾಚನ ಮೂಲಕ ಕೌಶಲ್ಯ ಗಮನ ಸೆಳೆದರು.

ಉಳಿದಂತೆ ಜಲ ಕಾಳಪ್ಪ, ತಿಮ್ಮಯ್ಯ, ಜಯಪ್ರಕಾಶ್,ರೇವತಿ, ಹೇಮಲತಾ ಪೂರ್ಣ ಪ್ರಕಾಶ್, ಕಸ್ತೂರಿ ಗೋವಿಂದಮಯ್ಯ, ಸುನಿತಾ, ಕಾಯಪಂಡ ಟಾಟಾ ಚಿಣ್ಣಪ್ಪ, ಕಾಂಚನ, ವಾತ್ಸಲ್ಯ, ಕೀರ್ತನ, ಹರೀಶ್ ಸರಳಾಯ ಕವನ ಮೆಚ್ಚುಗೆಗೆ ಪಾತ್ರವಾಯಿತು. ವಿ.ಟಿ.ಶ್ರೀನಿವಾಸ್ ಅವರ ಹಾಸ್ಯ ಚುಟುಕುಗಳು ನಗೆ ಅಲೆ ಎಬ್ಬಿಸಿದವು. ಪತ್ರಕರ್ತರಾದ ಮುಧೋಶ್ ಪೂವಯ್ಯ, ಚಮ್ಮಟೀರ ಪ್ರವೀಣ್, ಜಗದೀಶ್ ಜೋಡುಬೀಟಿ, ವೀರಾಜಪೇಟೆಯ ರಂಜಿತಾ, ಪೆÇನ್ನಂಪೇಟೆಯ ರೇಖಾ ಶ್ರೀಧರ್ ಅವರು ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಗಮನಸೆಳೆದರು.

ಕಣಿವೆ ಸಾಹಿತಿ, ಪತ್ರಕರ್ತ ಭಾರದ್ವಜ ಆನಂದತೀರ್ಥ್ ಅವರು ಸುಮಾರು 55 ಕವನಗಳನ್ನು ಆಲಿಸಿ ಕೆಲವನ್ನು ವಿಮರ್ಶೆಗೆ ಒಳಪಡಿಸಿದರು. ಕವನಗಳು ಅವರವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಿಂಬಿಸುವದಕ್ಕೇ ಸೀಮಿತವಾಗದೆ, ನಮ್ಮೊಳಗೆ ಇರುವ ಪ್ರತಿಭೆಗೆ ಸ್ವರೂಪ ನೀಡಿದರೆ ಜನರನ್ನು ತಲುಪಲು ಸಾಧ್ಯ ಎಂದು ಹೇಳಿದರು.

ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮುಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನೆರವೇರಿತು.

ಉದ್ಘಾಟನೆ: ಹರದಾಸ ಅಪ್ಪಚ್ಚಕವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು ಕವಿಗೋಷ್ಠಿಗೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಮಾತನಾಡಿದರು. ಇದೇ ಸಂದರ್ಭ ಕಣಿವೆ ಭಾರದ್ವಜ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಗಣಪತಿ ಉಪಸ್ಥಿತರಿದ್ದರು. ಸ್ವಾಗತ ಚಮ್ಮಟೀರ ಪ್ರವೀಣ್, ವಂದನಾರ್ಪಣೆ ಜಗದೀಶ್ ಜೋಡುಬೀಟಿ, ನಿರೂಪಣೆ ಚಮ್ಮಟೀರ ಪ್ರವೀಣ್, ಜಗದೀಶ್, ರೇಖಾ ಶ್ರೀಧರ್, ನಳಿನಾಕ್ಷಿ ನಿರ್ವಹಿಸಿದರು. -ವರದಿ: ಟಿ.ಎಲ್. ಶ್ರೀನಿವಾಸ್