ಗೋಣಿಕೊಪ್ಪಲು, ಸೆ. 27 : ಚುಮು ಚುಮು ಚಳಿ, ತುಂತುರು ಮಳೆಯ ನಡುವೆ ಜಾದು ಲೋಕ ಸೃಷ್ಟಿ, ಕಾಲಿಗೆ ಗೆಜ್ಜೆ ಕಟ್ಟಿ ಮನತಣಿಸಿದ ಭರತನಾಟ್ಯ, ಮುದನೀಡಿದ ಜನಪದ ಗೀತೆಗಳ ಮಾಲಿಕೆ,

ಇಲ್ಲಿನ ಪ್ರೌಢಶಾಲಾ ಮೈದಾನದ ಕಾವೇರಿ ಕಲಾ ವೇದಿಕೆಯಲ್ಲಿ ನಡೆಯುತ್ತಿರುವ ಗೋಣಿಕೊಪ್ಪ ದಸರಾ ಜನೋತ್ಸವದ 5 ದಿನ ಪ್ರಖ್ಯಾತ ಜಾದುಗಾರ ಕುದ್ರೋಳಿ ಗಣೇಶ್ ನೇತೃತ್ವದ ವಿಸ್ಮಯ ತಂಡ ನಡೆಸಿಕೊಟ್ಟು ಜಾದು ಪ್ರದರ್ಶನ ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಕಸಸುರ ಎಂಬ ವಿಶೇಷ ಜಾದು ಪ್ರದರ್ಶ ಸಾಮಾಜಿಕ ಕಳಕಳಿ ಮೂಡಿಸಿತು. ಕಸದಿಂದ ಹುಟ್ಟುವ ಕಸಸುರದಿಂದ ಸಮಾಜಕ್ಕೆ ಆಗುವ ಸಮಸ್ಯೆಯ ಬಗ್ಗೆ ಜಾದು ಬೆಳಕು ಚೆಲ್ಲಿತು.

ಇದಕ್ಕೂ ಮೊದಲು ಪೊನ್ನಂಪೇಟೆಯ ಕಾವೇರಿ ಕಲಾ ಬಳಗ ಹಾಗೂ ವೀರಾಜಪೇಟೆಯ ಜಗನ್ಮೋಹಮನ ನಾಟ್ಯಾಲಯ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆಯಿತು. ಗಿರೀಶ್, ಶೋಭಾ, ಶ್ರೀನಿವಾಸ್, ವೀಣಾ, ನಾಗರಾಜ್ ಇವರುಗಳು ಹಾಡಿ ರಂಜಿಸಿದರು. ಕಲಾಶ್ರೀ ಕಾರ್ತಿಕ್ ಶಣೈ, ನಮಿತಾ, ಗಾನವಿ, ನಿಖಿತಾರಿಂದ ಅಕರ್ಷಕ ಭರತನಾಟ್ಯ ಪ್ರದರ್ಶನಗೊಂಡಿತು.

ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಡಿವೈಎಸ್‍ಪಿ ನಾಗಪ್ಪ, ಮೈಸೂರು ದಸರಾದ ರೀತಿಯಲ್ಲಿ ಕೊಡಗಿನಲ್ಲೂ ದಸರಾ ಆಚರಿಸುತ್ತಿರುವದು ಶ್ಲಾಘನೀಯ ಎಂದರು.

ಗೋಣಿಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಸಭಾ ಕಾರ್ಯಕ್ರಮದ ಸಮುದಾಯದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಿ ಅರ್ಥಪೂರ್ಣಗೊಳಿಸಬೇಕು. ಈ ಬಾರಿ ಮಹಿಳಾ, ಮಕ್ಕಳ, ಯುವ ದಸರಾ ಆಚರಣೆ ಮೂಲಕ ವೈಶಿಷ್ಟ್ಯ ಮೂಡಿಸಿದೆ ಎಂದರು.

ಪೂಜೆ ಮಾನವನ ಸಮಸ್ಯೆಗೆ ಪರಿಹಾರವಾಗಿದ್ದು ಇದು ಸಕರಾತ್ಮಕ ಚಿಂತನೆ ಮೂಡಿಸುತ್ತದೆ. ದಾರ್ಮಿಕ ಭಾವನೆಗಳು ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸುವಿನ್ ಗಣಪತಿ ಹೇಳಿದರು.

ಈ ಸಂದರ್ಭ ತಹಶೀಲ್ದಾರ್ ಗೋವಿಂದರಾಜ್, ಜಿ.ಪಂ ಸದಸ್ಯ ಬಾನಂಡ ಪೃಥ್ಯು, ಆರ್‍ಎಂಸಿ ಸದಸ್ಯ ಕಿಲನ್, ಕಾವೇರಿ ದಸರಾ ಸಮಿತಿ ಖಜಾಂಜಿ ದ್ಯಾನ್ ಸುಬ್ಬಯ್ಯ, ಕಾವೇರಿ ಸಂಘದ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್, ನಾಯರ್ ಸೊಸೈಟಿ ಅಧ್ಯಕ್ಷ ಸಂಜೀವ್, ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಕಂದಾಯ ಪರಿವೀಕ್ಷಕ ರಾಧಕೃಷ್ಣ ಪಾಲ್ಗೊಂಡಿದ್ದರು.