ಮಡಿಕೇರಿ, ಸೆ. 27: ಕರ್ನಾಟಕ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ವಿಪುಲ್ ಕುಮಾರ್ ಅವರು, ಇಂದು ಜಿಲ್ಲೆಗೆ ಖುದ್ದು ಭೇಟಿ ನೀಡಿ ನಾಡಹಬ್ಬ ದಸರಾ ಆಚರಣೆ ಸಂಬಂಧ, ಮುಂಜಾಗ್ರತಾ ಕ್ರಮಗಳ ಕುರಿತು ನಗರದಲ್ಲಿ ಪ್ರಮುಖ ಕಡೆ ಪರಿಶೀಲನೆ ನಡೆಸಿದರು.ಮಡಿಕೇರಿಯಲ್ಲಿ ದಸರಾ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವ ಗಾಂಧಿ ಮೈದಾನ, ರಾಜಾಸೀಟ್, ಬನ್ನಿಮಂಟಪ ಸುತ್ತಮುತ್ತಲಿನ ಪರಿಸರ ಹಾಗೂ ಕುಂದೂರು ಮೊಟ್ಟೆ, ಚೌಟಿ ಮಾರಿಯಮ್ಮ ದೇವಾಲಯ, ಪೇಟೆ ರಾಮಮಂದಿರ ಸಹಿತ ದಶಮಂಟಪಗಳು ಸಂಚರಿಸುವ ಮಾರ್ಗಗಳನ್ನು ಪರಿವೀಕ್ಷಣೆ ನಡೆಸಿದರು.ದಕ್ಷಿಣ ಕೊಡಗಿನ ಗೋಣಿ ಕೊಪ್ಪಲುವಿನಲ್ಲಿ ನಡೆಯಲಿರುವ ದಸರಾ ನಾಡಹಬ್ಬ ಸಹಿತ, ತಾ. 29 ರಂದು ವಿವಿಧೆಡೆಗಳಲ್ಲಿ ಜರುಗಲಿರುವ ಆಯುಧ ಪೂಜಾ ಸಮಾರಂಭಗಳ ಭದ್ರತೆಯ ಕುರಿತಾಗಿಯೂ ಕೂಡ ಅವರು, ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರೊಡನೆ ಮಾತುಕತೆ ನಡೆಸಿದರು.

ಅಲ್ಲದೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳ ಸಹಿತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಹಾಗೂ

(ಮೊದಲ ಪುಟದಿಂದ) ಸಿಬ್ಬಂದಿಗಳ ನಿಯೋಜನೆ ಕುರಿತಾಗಿಯೂ ಸುದೀರ್ಘ ಚರ್ಚಿಸಿದರು. ಜಿಲ್ಲೆಯ ಮೂರು ತಾಲೂಕುಗಳ ಪೊಲೀಸ್ ಉಪ ಅಧೀಕ್ಷಕರು ಎಲ್ಲಾ ಪೊಲೀಸ್ ವೃತ್ತ ನಿರೀಕ್ಷಕರುಗಳೊಂದಿಗೆ ಭದ್ರತಾ ಕ್ರಮಗಳ ಕುರಿತು ಮಾಹಿತಿ ಪಡೆದು ಕೊಂಡ ಐಜಿ ವಿಪುಲ್‍ಕುಮಾರ್; ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ಈಗಾಗಲೇ ಪೊಲೀಸ್ ಇಲಾಖೆಯಿಂದ ಜಿಲ್ಲೆಯ ದಸರಾ ಸಂದರ್ಭ ಕೈಗೊಂಡಿರುವ ಪೂರ್ವ ತಯಾರಿ ಬಗ್ಗೆ ಎಸ್‍ಪಿ ರಾಜೇಂದ್ರ ಪ್ರಸಾದ್ ಅವರು ಐಜಿ ಅವರಿಗೆ ವಿವರ ಮಾಹಿತಿ ನೀಡಿದರಲ್ಲದೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಪೂರ್ವ ಸಿದ್ಧತೆಯ ರೂಪುರೇಷೆ ಕೈಗೊಂಡಿರುವ ಬಗ್ಗೆ ಗಮನಕ್ಕೆ ತಂದರು. ಸೂಕ್ಷ್ಮ ಸ್ಥಳಗಳಲ್ಲಿ ಖುದ್ದು ವೀಕ್ಷಣೆ ಬಳಿಕ ಐಜಿ ಅವರು ಮೈಸೂರಿಗೆ ಪಯಣಿಸಿದರು.