ಗುಡ್ಡೆಹೊಸೂರು, ಸೆ. 27: ನಂಜರಾಯಪಟ್ಟಣ ವ್ಯವಸಾಯ ಸೇವಾ ಕೃಷಿ ಪತ್ತಿನ ಸಹಕಾರ ಸÀಂಘದ ಗುಡ್ಡೆಹೊಸೂರು ಶಾಖೆಯಲ್ಲಿ ರೂ. 70 ಲಕ್ಷ ವಂಚನೆ ಪ್ರಕರಣ ಕುರಿತು ಮಹಾಸಭೆಯಲ್ಲಿ ಪ್ರತಿಧ್ವನಿಸುವದರೊಂದಿಗೆ ಭಾರೀ ಕೋಲಾಹಲಕ್ಕೆ ಕಾರಣವಾಯಿತು.ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದಾಗಿರುವ ನಂಜರಾಯಪಟ್ಟಣ ಸಹಕಾರ ಸಂಘದ ಎರಡು ಉಪಶಾಖೆಗಳು ವಾಲ್ನೂರು ಹಾಗೂ ಗುಡ್ಡೆಹೊಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗುಡ್ಡೆಹೊಸೂರು ಶಾಖೆಯಲ್ಲಿ ಗೊಬ್ಬರ ಇತ್ಯಾದಿ ದೈನಂದಿನ ವ್ಯವಹಾರ ನೋಡಿಕೊಳ್ಳುತ್ತಿದ್ದ ಗುಮಾಸ್ತ ಲುಸುಪತಿ ಎಂಬವರು ರೂ. 70 ಲಕ್ಷ ದುರುಪಯೋಗವೆಸಗಿ ಕಳೆದ ಮೂರು ತಿಂಗಳಿನಿಂದ ಕರ್ತವ್ಯಕ್ಕೂ ಬಾರದೆ ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ಇತ್ತೀಚೆಗೆ ನಿವೃತ್ತಿ ಹೊಂದಿರುವ ಸಂಘದ ವ್ಯವಸ್ಥಾಪಕರೊಬ್ಬರ ಸಹಿತ ನಾಪತ್ತೆಯಾಗಿರುವ ವ್ಯಕ್ತಿ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಆಡಳಿತ ಮಂಡಳಿ ದೂರು ಸಲ್ಲಿಸಿದೆ.

ಅಲ್ಲದೆ ರಂಗಸಮುದ್ರ ನಿವಾಸಿಯಾಗಿರುವ ಗುಮಾಸ್ತ ಲುಸುಪತಿ ತಲೆಮರೆಸಿಕೊಂಡು ಮುಂಬೈನಲ್ಲಿ ಇರುವ ಕುರಿತಾಗಿಯೂ ಸುಳಿವು ಪಡೆದಿರುವ ಪೊಲೀಸರು ಈಗಾಗಲೇ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದು, ಆತನ ಸ್ನೇಹಿತರು ಹಾಗೂ ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಿರುವದಾಗಿ ತಿಳಿದುಬಂದಿದೆ.

(ಮೊದಲ ಪುಟದಿಂದ) ಈ ನಡುವೆ ತಾ. 25ರಂದು ನಡೆದ ಸಂಘದ ಮಹಾಸಭೆಯಲ್ಲಿ ಗುಡ್ಡೆಹೊಸೂರು ಶಾಖೆಯಲ್ಲಿ ಹಣ ದುರುಪಯೋಗ ಸಂಬಂಧ ಆಡಳಿತ ಮಂಡಳಿ ಪ್ರಮುಖರು ಹಾಗೂ ಸದಸ್ಯರ ನಡುವೆ ಆರೋಪ- ಪ್ರತ್ಯಾರೋಪಗಳೊಂದಿಗೆ ಮಾರಾಮಾರಿಯ ಹಂತಕ್ಕೆ ಕೋಲಾಹಲವುಂಟಾಗಿತ್ತು.

ಈ ಹಂತದಲ್ಲಿ ಅಧ್ಯಕ್ಷ ಜಿ.ಎಂ. ಮಣಿಕುಮಾರ್ ಸಭೆಯಲ್ಲಿ ಸ್ಪಷ್ಟನೆ ನೀಡಿ, ಈಗಾಗಲೇ ನೌಕರ ಲುಸುಪತಿ ವಿರುದ್ಧ ಪೊಲೀಸ್ ಪುಕಾರು ನೀಡಲಾಗಿದ್ದು, ತಲೆಮರೆಸಿ ಕೊಂಡಿರುವ ಈತ ವಂಚನೆ ಹಣವನ್ನು ಸಂಘಕ್ಕೆ ಪಾವತಿಸದಿದ್ದಲ್ಲಿ; ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ಕ್ರಮ ಜರುಗಿಸಲಾಗುವದು ಎಂದು ಭರವಸೆ ನೀಡಿದರು.

ಅಲ್ಲದೆ ನಿವೃತ್ತ ವ್ಯವಸ್ಥಾಪಕ ಗಣಪತಿ ಎಂಬವರ ವಿರುದ್ಧ ಕೂಡ ಪ್ರಕರಣ ದಾಖಲಿಸುವ ಮುಖಾಂತರ ತನಿಖೆ ನಡೆಯುತ್ತಿದೆ ಎಂದು ಸಭೆಗೆ ವಿವರಿಸಿದರು. ಇದರೊಂದಿಗೆ ವ್ಯವಸ್ಥಾಪಕರ ನಿವೃತ್ತಿ ವೇತನ ತಡೆಹಿಡಿಯಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಕೋಲಾಹಲ ನಡುವೆಯೇ ಸದಸ್ಯರಿಗೆ ಡೆವಿಡೆಂಡ್ ನೀಡುವದು, ಸದಸ್ಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ಇತ್ಯಾದಿ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಈ ಸಂಬಂಧ ಚರ್ಚೆಯಲ್ಲಿ ಮುರುಳಿ ಮಾದಯ್ಯ, ನಂದಕುಮಾರ್, ಶಿವಕುಮಾರ್, ಆರ್.ಕೆ. ಚಂದ್ರ, ಬೆಳ್ಯಪ್ಪ, ಪಿ.ಹರಿ, ಪ್ರಭಾ, ನಾರಾಯಣ ಭಟ್, ಚಿದಾನಂದ, ಲಕ್ಷ್ಮಣ, ಸಂದೀಪ್ ಮೊದಲಾದವರು ಪಾಲ್ಗೊಂಡಿದ್ದರು. ಉಪಾಧ್ಯಕ್ಷೆ ಸೀತಮ್ಮ ಹಾಗೂ ಇತರರು ಹಾಜರಿದ್ದರು.

-ವರದಿ: ಗಣೇಶ್ ಕುಡೆಕಲ್