ಮಡಿಕೇರಿ, ಸೆ. 27: ವಿವಾಹ ಸಂದರ್ಭ ರೂ. 70 ಸಾವಿರ ನಗದು ಸೇರಿದಂತೆ 60 ಗ್ರಾಂ. ಚಿನ್ನಾಭರಣ ಸಹಿತ ವರೋಪಚಾರ ಪಡೆದ ಬಳಿಕವೂ, ಮತ್ತಷ್ಟು ಬೇಡಿಕೆಯೊಂದಿಗೆ ಸತಿಗೆ ಹಿಂಸಿಸಿ ಆಕೆಯ ಸಾವಿಗೆ ಕಾರಣನಾದ ಆರೋಪಿ ಪತಿಗೆ ಇಲ್ಲಿನ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅರಕಲಗೂಡು ತಾಲೂಕು ಕೊಣನೂರು ಹಿರೇಹಳ್ಳಿ ನಿವಾಸಿ ರಾಚಪ್ಪ ಎಂಬವರ ಪುತ್ರಿ ಮಾಧುರಿ ಎಂಬಾಕೆಯನ್ನು 7.2.2011ರಂದು ಆರೋಪಿ ನಾಪೋಕ್ಲು ಇಂದಿರಾನಗರದ ಜಿ. ಮಂಜುನಾಥ ಎಂಬಾತ ವಿವಾಹವಾಗಿದ್ದ.

ಮದುವೆಯಾದ ಕೇವಲ ಮೂರೇ ತಿಂಗಳಲ್ಲಿ ವರದಕ್ಷಿಣೆಗೆ ಮತ್ತೆ ಮತ್ತೆ ಪೀಡಿಸಿದ ಪರಿಣಾಮ, ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಾಧುರಿ ತಾ. 9.5. 2011ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಈ ಬಗ್ಗೆ ಪೊಲೀಸರು ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಆರೋಪಿ ಮಂಜುನಾಥ ಪತ್ನಿಯ ಸಾವಿಗೆ ಕಾರಣನೆಂದು ವಿಚಾರಣೆಯಲ್ಲಿ ದೃಢಪಟ್ಟ ಮೇರೆಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಈ ಪ್ರಕರಣದ ವಿಚಾರಣೆಯನ್ನು 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪವನೇಶ್ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅದರಂತೆ ಮದುವೆಯಾದ ಹೆಂಗಸಿಗೆ ದೌರ್ಜನ್ಯ ಎಸಗಿದ ಅಪರಾಧಕ್ಕಾಗಿ 3 ವರ್ಷಗಳ ಕಠಿಣ ಸಜೆ ಮತ್ತು ರೂ. 2000/- ದಂಡವನ್ನು, ವರದಕ್ಷಿಣೆ ಸಲುವಾಗಿ ಈ ಕೃತ್ಯ ನಡೆದಿರುವದರಿಂದ ಸದರಿ ಅಪರಾಧಕ್ಕಾಗಿ 7 ವರ್ಷಗಳ ಕಠಿಣ ಸಜೆ ಮತ್ತು ರೂ. 5000/- ದಂಡವನ್ನು ಹಾಗೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಅಪರಾಧಕ್ಕಾಗಿ 6 ವರ್ಷಗಳ ಕಠಿಣ ಸಜೆ ಮತ್ತು ರೂ. 3000/- ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ. ನಂತರ ವಸೂಲಾತಿಯಾಗುವ ದಂಡದ ಹಣದಲ್ಲಿ ರೂ. 7500/-ನ್ನು ಮೃತಳ ತಂದೆ ರಾಚಪ್ಪ ಅವರಿಗೆ ಮೃತಳ ಮಗುವಿನ ಪೋಷಣೆಗಾಗಿ ಪರಿಹಾರದ ರೂಪದಲ್ಲಿ ನೀಡಲು ಆದೇಶದಲ್ಲಿ ತಿಳಿಸಲಾಗಿದೆ.

ಈ ಪ್ರಕರಣದ ವಿಚಾರಣೆಯನ್ನು ಸರಕಾರಿ ಅಭಿಯೋಜಕಿ ಎ. ಕೃಷ್ಣವೇಣಿ ವಾದ ಮಂಡಿಸಿದ್ದರು.