ಕುಶಾಲನಗರ, ಸೆ. 28: ಕುಶಾಲನಗರ ಪಟ್ಟಣದ ತಾವರೆಕೆರೆ ಬಳಿ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾಯರ ಪ್ರತಿಮೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಜಿ. ಮಂಜುನಾಥ್ ಗುಂಡೂರಾವ್ ಭರವಸೆ ನೀಡಿದ್ದಾರೆ.
ಗುಂಡೂರಾಯರ 82ನೇ ಹುಟ್ಟುಹಬ್ಬದ ಸಂದರ್ಭ ಸ್ಥಳೀಯ ಕಾವೇರಿ ಸುದ್ದಿ ಸೆಂಟರ್ ಸಂಸ್ಥೆ ಆಶ್ರಯದಲ್ಲಿ ನಡೆದ ರಾಯರ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಂಜುನಾಥ್, ತಾವರೆಕೆರೆಯ ಅಭಿವೃದ್ಧಿಗೆ ಸರಕಾರದಿಂದ ರೂ. 1 ಕೋಟಿ ಅನುದಾನ ಕೋರಲಾಗಿದ್ದು ಕುಡಾ ಮೂಲಕ ರೂ. 50 ಲಕ್ಷ ವೆಚ್ಚ ಮಾಡುವದರೊಂದಿಗೆ ಉತ್ತಮ ಪ್ರವಾಸಿ ತಾಣವಾಗಿ ರೂಪಿಸ ಲಾಗುವದು. ಈ ಸ್ಥಳದಲ್ಲಿ ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾಯರ ಪ್ರತಿಮೆ ನಿರ್ಮಾಣ ಮಾಡಲು ಯೋಜನೆ ರೂಪಿಸ ಲಾಗುವದು ಎಂದರು.
ಸರಕಾರಿ ಜಾಗದಲ್ಲಿ ವ್ಯಕ್ತಿಗಳ ಪ್ರತಿಮೆ ನಿರ್ಮಾಣಕ್ಕೆ ನಿರ್ಭಂದ ಇರುವ ಹಿನ್ನೆಲೆ ಸರಕಾರದ ವಿಶೇಷ ಅನುಮತಿ ಕೋರಲಾಗುವದು ಎಂದು ತಿಳಿಸಿದ್ದಾರೆ. ಕುಶಾಲನಗರ ನಿರೀಕ್ಷಣಾ ಭವನದ ಆವರಣದಲ್ಲಿ ರಾಯರ ಒಡನಾಡಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹಿರಿಯರಾದ ಎಂ.ಹೆಚ್. ನಜೀರ್ ಅಹಮ್ಮದ್, ವಿ.ಎನ್. ಪ್ರಭಾಕರ್, ಎಂ.ಹೆಚ್. ಫಜಲುಲ್ಲಾ, ವಿ.ಎನ್. ವಸಂತಕುಮಾರ್ ತಮ್ಮ ಅಂದಿನ ನೆನಪುಗಳನ್ನು ಮೆಲುಕು ಹಾಕಿದರು.
ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಯರು ಯಾವದೇ ಸ್ವಾರ್ಥ ಕಾರ್ಯದಲ್ಲಿ ತೊಡಗದೆ ನಾಡಿನ ಏಳಿಗೆಗಾಗಿ ಶ್ರಮಿಸಿದ ಬಗ್ಗೆ ಸ್ಮರಿಸಿದರು. ಬಿಜೆಪಿ ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ ಮಾತನಾಡಿ, ಕುಶಾಲ ನಗರದ ಪಟ್ಟಣದ ರಸ್ತೆಯೊಂದಕ್ಕೆ ರಾಯರ ಹೆಸರು ನಾಮಕರಣ ಮಾಡುವಂತೆ ಮನವಿ ಮಾಡಿದರು. ಪಂಚಾಯಿತಿ ಸದಸ್ಯ ಪ್ರಮೋದ್ ಮುತ್ತಪ್ಪ ಈ ಸಂಬಂಧ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವದು ಎಂದರು. ಪ್ರಮುಖರಾದ ಡಿ.ಆರ್. ಸೋಮಶೇಖರ್ ಇದ್ದರು. ಕಾರ್ಯಕ್ರಮಕ್ಕೂ ಮುನ್ನಾ ನಿರೀಕ್ಷಣಾ ಮಂದಿರದ ಆವರಣದಲ್ಲಿ ಗಣ್ಯರು ಗಿಡವೊಂದನ್ನು ನೆಡುವ ಮೂಲಕ ರಾಯರ ಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾವೇರಿ ಸುದ್ದಿ ಸೆಂಟರ್ ಸಂಸ್ಥೆಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಪ್ರಮುಖ ಕೆ.ಎಸ್. ಮೂರ್ತಿ ವಂದಿಸಿದರು.