ಗೋಣಿಕೊಪ್ಪಲು, ಸೆ. 28: ಮಾಜಿ ಸೈನಿಕರನ್ನು ಮತ್ತು ಅರೆಕಾಲಿಕ ಸೈನಿಕರನ್ನು ಒಂದುಗೂಡಿಸುವ ಮತ್ತು ಸರ್ಕಾರದಿಂದ ಬರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮಾಜಿ ಸೈನಿಕರ ಸಂಘ ಉತ್ತಮ ಸೇವೆ ಮಾಡುತ್ತಿದೆ ಎಂದು ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿರುವ ಸದಸ್ಯರ ಸಮಸ್ಯೆ ಪರಿಹರಿಸಲು ಸಂಘ ಕಾರ್ಯೋನ್ಮುಖವಾಗಿದೆ. ಇದರಂತೆ ಅ. 1 ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯುವ ಸಂಘದ ಮಹಾಸಭೆಗೆ ಸದಸ್ಯರು ಆಗಮಿಸುವ ಮೂಲಕ ಕುಂದು ಕೊರತೆಗಳ ಬಗ್ಗೆ ಚರ್ಚಿಸಬೇಕಾಗಿದೆ.

ಯೋಧರು ಸೇನೆಯಲ್ಲಿ ವೀರಮರಣ ಹೊಂದಿದ್ದರೆ ಅವರ ಕುಟುಂಬದವರಿಗೆ ಬರಬೇಕಾದ ಪಿಂಚಣಿ ಸೌಲಭ್ಯ ನೀಡಲು ಸಂಘವು ಹಲವು ವರ್ಷಗಳಿಂದ ಶ್ರಮಿಸುತ್ತಿದೆ. ಇದರಂತೆ ದಾಖಲಾತಿ ಸರಿಪಡಿಸಲು ಸಹಕರಿಸುವದು, ಸೈನಿಕ ಶಾಲೆಗೆ ಮತ್ತು ಸೈನ್ಯಕ್ಕೆ ಸೇರುವವರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಪಿಂಚಣಿದಾರರ ಕುಂದುಕೊರತೆಯನ್ನು ಸರಿಪಡಿಸುವದು ನಡೆಯುತ್ತಿದೆ ಎಂದರು.

ಸಂಘದಲ್ಲಿ 291 ಸದಸ್ಯರಿದ್ದು, ಮರಣನಿಧಿ ಹೊಂದಿರುವ ಸದಸ್ಯರು ನಿಧನವಾದಗ ಅವರ ಕುಟುಂಬಕ್ಕೆ 10,000 ನೀಡಲಾಗುತ್ತಿದೆ. ಮರಣನಿಧಿಯಲ್ಲಿ 5,14 ಲಕ್ಷ ಹಣವನ್ನು ಕಾಯ್ದಿರಿಸಲಾಗಿದೆ. ರೂ. 1.51 ಲಕ್ಷ ಪಾಲು ಹಣ ಸಂಘದಲ್ಲಿ ಹೊಂದಲಾಗಿದೆ ಎಂದರು.

ಸರ್ಕಾರದ ಯೋಜನೆಯಂತೆ ಸೈನಿಕರನ್ನು ಪ್ರೋತ್ಸಾಹಿಸಲು ಕಲ್ಯಾಣ ನಿಧಿಗೆ ಹಣ ಸಂಗ್ರಹಿಸಿ ಕಳುಹಿಸಲಾಗುತ್ತಿದೆ. ಯೋಧರ ಅಭಿಮಾನಿಗಳು ದಿವಸಕ್ಕೆ ಒಂದು ರೂಪಾಯಿಯಂತೆ ಸದಸ್ಯರಿಂದ ಸಂಗ್ರಹಿಸಿ ಪ್ರಧಾನಮಂತ್ರಿ ಕಲ್ಯಾಣನಿಧಿ ಖಾತೆಗೆ ಜಮಾ ಮಾಡಲಾಗುತ್ತಿದೆ. ವೀರ ಮರಣ ಹೊಂದಿದ ಯೋಧರ ಕುಟುಂಬಕ್ಕೆ ಇಂತಹ ನಮ್ಮ ಕಾಣಿಕೆಗಳು ಸಹಕಾರಿಯಾಗಲಿದೆ. ಈ ವರ್ಷದಲ್ಲಿ 5,685 ಸಾವಿರ ಹಣವನ್ನು ಯೋಧರ ಕಲ್ಯಾಣ ನಿಧಿಗೆ ಸಂಘದಿಂದ ಜಮಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಚೆಕ್ಕೇರ ಎಂ ರಮೇಶ್, ನಿರ್ದೇಶಕರುಗಳಾದ ಬಯವಂಡ ಬಿ. ಜನಕ, ನಿರ್ದೇಶಕ ಬಾಚಮಾಡ ಎಂ ಬೆಳ್ಳಿಯಪ್ಪ, ಬಿ ಎಸ್ ಚಂದ್ರಶೇಖರ್, ಆಂತರಿಕ ಲೆಕ್ಕ ಪರಿಶೋಧಕ ಚೋಡುಮಾಡ ಎ ಮಾದಪ್ಪ ಇದ್ದರು.