ಸೋಮವಾರಪೇಟೆ, ಸೆ. 28: ಸೋಮವಾರಪೇಟೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಆಯೋಜಿಸಿರುವ ಅದ್ಧೂರಿ ಆಯುಧ ಪೂಜೋತ್ಸವಕ್ಕೆ ಸೋಮವಾರಪೇಟೆ ಪಟ್ಟಣ ಸಿಂಗಾರಗೊಂಡಿದೆ.ಆಯುಧ ಪೂಜೆಯನ್ನು ಈ ಭಾಗದ ಜನರು ದಸರಾ ನಾಡಹಬ್ಬದಂತೆಯೇ ಸಂಭ್ರಮದಿಂದ ಆಚರಿಸುತ್ತಿದ್ದು, ಮೋಟಾರ್ ಯೂನಿಯನ್ ವತಿಯಿಂದ ನಡೆಸುವ ಸಾರ್ವಜನಿಕ ಕಾರ್ಯಕ್ರಮಗಳು ಜನಮಾನಸದಲ್ಲಿ ಉಳಿಯುತ್ತದೆ. ವರ್ಷಂಪ್ರತಿ ಅದ್ಧೂರಿಯೊಂದಿಗೆ ವೈವಿಧ್ಯಮಯವಾಗಿ ಪೂಜೋತ್ಸವ ಆಚರಿಸಲ್ಪಡುತ್ತಿದ್ದು, ಪ್ರಸಕ್ತ ವರ್ಷದ ಆಚರಣೆಗೆ ಸೋಮವಾರಪೇಟೆ ಪಟ್ಟಣ ಕಳೆಕಟ್ಟಿದೆ.

ನಗರದ ಎಲ್ಲಾ ಪ್ರತಿಮೆಗಳನ್ನು ಶುಚಿಗೊಳಿಸಿ ತಳಿರು ತೋರಣಗಳಿಂದ ಸಿಂಗರಿಸಲಾಗಿದ್ದು, ನಗರದ ಖಾಸಗಿ ಬಸ್ ನಿಲ್ದಾಣ ಸುತ್ತಮುತ್ತಲಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಮೋಟಾರು ಯೂನಿಯನ್‍ನ ಪದಾಧಿಕಾರಿಗಳು ನಗರವನ್ನು ಅಲಂಕರಿಸಿದ್ದು, ಪೂಜೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.