ಮಡಿಕೇರಿ, ಸೆ. 28: ‘ದುಷ್ಟ ಶಿಕ್ಷಕಿ ಶಿಷ್ಟ ರಕ್ಷಣೆ’ಯ ಸಂಕೇತವಾಗಿರುವ ಐತಿಹಾಸಿಕ ಹಿನ್ನೆಲೆಯುಳ್ಳ ವಿಜಯದಶಮಿ ಹಾಗೂ ಆಯುಧಾ ಪೂಜೆಯ ಸಂಭ್ರಮ ನಾಡಿನಾದ್ಯಂತ ಮನೆ ಮಾಡಿದೆ. ಮಂಜಿನ ನಗರಿಯೆಂದೇ ಖ್ಯಾತಿವೆತ್ತಿರುವ ಮಡಿಕೇರಿ ಮಳೆಯ ಭೀತಿಯ ನಡುವೆಯೂ ನವ ವಧುವಿನಂತೆ ಸಿಂಗಾರಗೊಂಡಿದೆ. ಜಗದ್ವಿಖ್ಯಾತ ಮೈಸೂರು ದಸರಾದಂತೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಡಿಕೇರಿ ದಸರಾ ವಿಜೃಂಭಣೆ ಆಚರಣೆಗೆ ಮಡಿಕೇರಿ ದಸರಾ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ತಾ. 29 ರಂದು (ಇಂದು) ಆಯುಧಾ ಪೂಜೆ ಆಚರಣೆಯೊಂದಿಗೆ ತಾ. 30 ರಂದು ಅದ್ಧೂರಿಯ ವಿಜಯದಶಮಿ ಆಚರಣೆಯಾಗಲಿದೆ.
ಮಡಿಕೇರಿ ನಾಡಹಬ್ಬ ದಸರಾ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈಗಾಗಲೇ ತಾ. 21 ರಿಂದಲೇ ನಾಡಿನ ಸುಭಿಕ್ಷೆಗಾಗಿ ನಾಲ್ಕು ಶಕ್ತಿ ದೇವತೆಗಳ ಕರಗ ಪೂಜೆಯೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದ್ದು, ತಾ. 22 ರಿಂದ ಗಾಂಧಿಯ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಾಂಸ್ಕøತಿಕ ವೈವಿಧ್ಯಗಳು ಜನೋತ್ಸವಕ್ಕೆ ವಿಶೇಷ ಮೆರುಗು ತಂದುಕೊಟ್ಟಿದೆ. ಮಕ್ಕಳ ದಸರಾ, ಮಹಿಳಾ ದಸರಾ, ಕ್ರೀಡಾಕೂಟ, ಕವಿಗೋಷ್ಠಿಯೊಂದಿಗೆ ಸರ್ವರಿಗೂ ದಸರಾದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಇನ್ನೆರಡು ದಿನಗಳ ಕಾಲ ಕೂಡ ಸಾಂಸ್ಕøತಿಕ ಸಂಜೆ ಮೇಳೈಸಲಿದೆ.
ರಂಗಿನ ಮೆರುಗು : ಆಯುಧಾ ಪೂಜೆ ಅಂಗವಾಗಿ ಕಟ್ಟಡ, ವಾಹನ, ಹೂದೋಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು
(ಮೊದಲ ಪುಟದಿಂದ) ಏರ್ಪಡಿಸಿದ್ದು, ಮಂಜಿನ ನಗರಿ ಮಿರ ಮಿರ ಮಿನುಗುತ್ತಿದೆ. ದೇವಾಲಯಗಳು, ಕಟ್ಟಡಗಳು, ವಿದ್ಯುತ್ ದೀಪಾಲಂಕಾರ ದಿಂದ ಕಂಗೊಳಿಸು ತ್ತಿವೆ. ರಾಜ ಮಾರ್ಗಗಳ ಇಕ್ಕೆಲಗಳಲ್ಲೂ ವಿದ್ಯುತ್ ಬೆಳಕಿನ ಚಿತ್ತಾರ ಹರಡಿದ್ದು, ಮಡಿಕೇರಿ ಸುರ ಲೋಕದಂತೆ ಭಾಸವಾಗುತ್ತಿದೆ.
ದಶಮಂಟಪದ ಶೋಭೆ
ಮಡಿಕೇರಿ ದಸರಾಗೆ ಪ್ರಮುಖ ಆಕರ್ಷಣೆಯೆಂದರೆ ದಶಮಂಟಪ ಗಳು ದೇವ - ದಾನವರ ಚಲನ - ವಲನಗಳಿರುವ ಕಲಾಕೃತಿಗಳ ನ್ನೊಳಗೊಂಡ ಉತ್ಸವ ಮಂಟಪಗಳು ದಸರಾದಂದು ರಾಜಬೀದಿಯಲ್ಲಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ. ಮಂಟಪಗಳ ತಯಾರಿ ಕಾರ್ಯ ಮಳೆ ನಡುವೆಯೂ ಭರದಿಂದ ಸಾಗುತ್ತಿದ್ದು, ಮಂಟಪ ಸಮಿತಿಯವರು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಟ್ರ್ಯಾಕ್ಟರ್‍ಗಳಲ್ಲಿ ಉತ್ಸವ ಮೂರ್ತಿಗಳ ಅಳವಡಿಕೆ ಕಾರ್ಯ ಸಾಗುತ್ತಿದ್ದು, ನವರಾತ್ರಿಯಂದು ಪರಿಪೂರ್ಣ, ವರ್ಣರಂಜಿತ ಮಂಟಪಗಳು ತಯಾರಾಗಲಿವೆ.
ದಸರಾ ಸಂತೆ
ದಸರಾ ಬಂತೆಂದರೆ ಸಾಕು ರಾಜ್ಯ, ನೆರೆರಾಜ್ಯಗಳಿಂದ ವ್ಯಾಪಾರಿ ಗಳು ನಗರಕ್ಕೆ ಲಗ್ಗೆಯಿಡುತ್ತಾರೆ. ರಸ್ತೆ ಬದಿಗಳಲ್ಲಿ ಅಂಗಡಿ - ಮಳಿಗೆಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ. ಮಕ್ಕಳ ಆಟಿಕೆಗಳಿಂದ ಹಿಡಿದು, ಹೂಕುಂಡಗಳು, ವಿವಿಧ ಸಾಮಗ್ರಿಗಳು, ಬಟ್ಟೆ - ಬರೆ, ಐಸ್‍ಕ್ರೀಂ, ತಿಂಡಿ - ತಿನಿಸುಗಳು ಮಾರಾಟ ಮೊನ್ನೆಯಿಂದಲೇ ಬಲು ಜೋರಾಗಿ ಸಾಗಿದೆ. ನಾಡ ಹಬ್ಬದ ವೈಭವವನ್ನು ಕಣ್ತುಂಬಿಕೊಳ್ಳಲು ನಾಡಿನ ಜನತೆ ಉತ್ಸುಕರಾಗಿದ್ದು, ಮಳೆರಾಯ ಅಗಾಗ್ಗೆ ಕೊಂಚ ಬೀತಿ ಹುಟ್ಟಿಸುತ್ತಿದ್ದಾನಾದರೂ ನಾವು ಎಲ್ಲದಕ್ಕೂ ಸಿದ್ದವೆಂಬಂತೆ ದಸರಾ ಸಮಿತಿ, ಜನತೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
- ಕುಡೆಕಲ್ ಸಂತೋಷ್