ಮಡಿಕೇರಿ, ಸೆ. 28: ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬಕ್ಕೆ ಮುನ್ನುಡಿ ಬರೆದಿದ್ದ, ಮಡಿಕೇರಿ ರಾಜಪರಂಪರೆಯ ಅರಮನೆ ಹಾಗೂ ರಾಜ ಕುಟುಂಬದ ಗದ್ದುಗೆಗಳು ಪ್ರಸಕ್ತ ಕಳಾಹೀನಗೊಂಡು ಜಿಲ್ಲಾ ಆಡಳಿತ ಮತ್ತು ತೋಟಗಾರಿಕಾ ಇಲಾಖೆಯ ನಿರ್ಲಕ್ಷ್ಯ ಗೋಚರಿಸತೊಡಗಿದೆ. ಜಿಲ್ಲಾ ಪಂಚಾಯತ್ ಆಡಳಿತ ಸಹಿತ ಬಹುತೇಕ ಕಚೇರಿಗಳು ಕಾರ್ಯನಿರ್ವಹಿಸುತ್ತಿರುವ ಕೋಟೆ (ಅರಮನೆ) ಸುಣ್ಣ ಬಣ್ಣ ಹಾಗೂ ನಿರ್ವಹಣೆಯಿಲ್ಲದೆ ಭಾಗಶಃ ಕುಸಿಯುವ ಹಂತದಲ್ಲಿದೆ. ಇನ್ನು ಐತಿಹಾಸಿಕ ರಾಜರ ಗದ್ದುಗೆ ಕೇವಲ ಐದು ವರ್ಷ ಹಿಂದೆ

(ಮೊದಲ ಪುಟದಿಂದ) ಲಕ್ಷಾಂತರ ರೂಪಾಯಿ ವೆಚ್ಚದಿಂದ ನಗರ ಅಭಿವೃದ್ಧಿ ಪ್ರಾಧಿಕಾರ ಸುರಕ್ಷಾ ಬೇಲಿಯೊಂದಿಗೆ ಕಾಯಕಲ್ಪ ನೀಡಿದ್ದರೂ ಕೂಡ ತೋಟಗಾರಿಕಾ ಇಲಾಖೆ ನಿರ್ವಹಣೆ ಮಾಡದೆ ದಸರಾ ಸಂದರ್ಭ ಕಡೆಗಣಿಸಲ್ಪಟ್ಟಿರುವದು ಎದ್ದು ಕಾಣುತ್ತಿದೆ.

2011-12ನೇ ಸಾಲಿನಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪಿ. ಶಜಿಲ್ ಕೃಷ್ಣನ್ ನೇತೃತ್ವದ ಆಡಳಿತ ಮಂಡಳಿ, ಅಂದಿನ ಸರಕಾರದ ಸಹಕಾರ ಪಡೆದು ರೂ. 66.85 ಲಕ್ಷ ವೆಚ್ಚದಲ್ಲಿ ಸಂಪೂರ್ಣ ‘ಚೈನ್ ಲಿಂಕ್ ಕಾಂಪೌಂಡ್ ಬೇಲಿ’ ನಿರ್ಮಾ ಣದೊಂದಿಗೆ ಅಭಿವೃದ್ಧಿಗೊಳಿಸಿತ್ತು. ಅಲ್ಲದೆ ಅಲ್ಲಿ ಸುಸಜ್ಜಿತ ತಾವರೆ ಪುಷ್ಪದ ಕೊಳ, ಚಿಣ್ಣರಿಗೆ ಆಟವಾಡಲು ಉದ್ಯಾನ, ಪ್ರಾವಸಿಗರಿಗೆ ಸಂಚಾರ ಮಾರ್ಗ, ವಾಯು ವಿಹಾರಕ್ಕೆ ಪೂರಕ ಕಲ್ಲು ಬೆಂಚುಗಳು, ಸಂಜೆಗತ್ತಲೆ ನಡುವೆ ಬೆಳಕು ವ್ಯವಸ್ಥೆ ಇತ್ಯಾದಿ ಅನುಕೂಲತೆ ಕಲ್ಪಿಸಲಾಗಿತ್ತು.

ಮಡಿಕೇರಿ ರಾಜಪರಂಪರೆಯ ಲಿಂಗರಾಜ ದಂಪತಿ ಗದ್ದುಗೆ, ರಾಜಗುರು ರುದ್ರಮುನಿಗಳ ಗದ್ದುಗೆ, ವೀರರಾಜ ಗದ್ದುಗೆ ಇತ್ಯಾದಿ ಯೊಂದಿಗೆ, ಅಂದಿನ ಕೊಡಗಿನ ದಿವಾನರಾಗಿದ್ದ ಬಿದ್ದಂಡ ಬೋಪಣ್ಣ ಹಾಗೂ ಸೋಮಯ್ಯ ಸ್ಮಾರಕಗಳ ಸಹಿತ ಐದು ಎಕರೆ ಪ್ರದೇಶದಲ್ಲಿ ಉದ್ಯಾನವನ ಸಜ್ಜುಗೊಂಡಿತ್ತು.

ರೂ. 40 ಲಕ್ಷ ವೆಚ್ಚ: ಮಡಿಕೇರಿ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಐದು ಹಂತದ ಯೋಜನೆ ಸಲುವಾಗಿ, ಆದ್ಯತೆ ಮೇರೆಗೆ ಚೈನ್ ಲಿಂಕ್ ಕಾಂಪೌಂಡ್ ಹಾಗೂ ಸಾರ್ವಜನಿಕ ಉಪಯೋಗಕ್ಕಾಗಿಯೇ ಉದ್ಯಾನವನ ನಿವೇಶನ ಅಭಿವೃದ್ಧಿಯನ್ನು ರೂಪುಗೊಳಿಸಲು ರೂ. 40 ಲಕ್ಷದ ಕಾಮಗಾರಿ ಕೈಗೊಳ್ಳಲಾಗಿತ್ತು.

ಉಳಿಕೆ ಹಣ ರೂ. 26.85 ಲಕ್ಷ ವೆಚ್ಚದಲ್ಲಿ ದೀಪಾಲಂಕಾರ, ಪುಷ್ಪೋದ್ಯಾನ, ಹುಲ್ಲಿನ ನೆಲ ಹಾಸು, ‘ಇಂಟರ್‍ಲಾಕ್’ ವ್ಯವಸ್ಥೆ, ಗಿಡಗಳಿಗೆ ನೀರು ಹಾಯಿಸಲು ತುಂತುರು ನೀರಾವರಿ ವ್ಯವಸ್ಥೆ, ನೀರು ಶೇಖರಾಣ ಟ್ಯಾಂಕ್ ಮುಂತಾದ ಕಾಮಗಾರಿ ಕೈಗೊಂಡು ಒಂದು ವರ್ಷ ನಿರ್ವಹಣೆ ಬಳಿಕ ತೋಟಗಾರಿಕ ಇಲಾಖೆಯ ಸುಪರ್ದಿಗೆ ಬಿಟ್ಟುಕೊಡಲಾಗಿದೆ.

ಪ್ರಸಕ್ತ ಎಲ್ಲ ರೀತಿ ನಿರ್ಲಕ್ಷ್ಯದೊಂದಿಗೆ ಸಂಜೆ ವೇಳೆ ಗದ್ದುಗೆ ವೀಕ್ಷಣೆಗೆ ತೆರಳುವ ಪ್ರವಾಸಿಗರು ಹಾಗೂ ವಾಯು ವಿಹಾರಕ್ಕೆ ಅತ್ತ ಬರುವ ಸ್ಥಳೀಯರು ಬೆಳಕಿನ ವ್ಯವಸ್ಥೆಯಿಲ್ಲದೆ ಕತ್ತಲೆಯಲ್ಲಿ ತಿರುಗಾಡುವಂತಾಗಿದೆ.

ಕರ್ನಾಟಕ ಪ್ರಾಚ್ಯವಸ್ತು ಇಲಾಖೆಯ ಅಧೀನದಲ್ಲಿರುವ ಗದ್ದುಗೆಯಲ್ಲಿ ಧಾರ್ಮಿಕ ಇಲಾಖೆಯಿಂದ ಸುಮಾರು ಐದು ವರ್ಷಗಳಿಂದ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೀಪವಿಡುತ್ತಿದ್ದ ಸಂಪ್ರಾದಯ ಕೂಡ ನಿಂತು ಹೋಗಿದೆ ಎಂದು ಸ್ಥಳೀಯರು ‘ಶಕ್ತಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೋಟಗಾರಿಕಾ ಇಲಾಖೆಯಿಂದ ಅಪರೂಪಕ್ಕೊಮ್ಮೆ ಮೂವರು ನೌಕರರು ಕಾಡು ಕಡಿಯುವ ಕೆಲಸಕ್ಕೆ ನಿಯೋಜನೆಗೊಂಡರೂ, ಯಾವದೋ ಒಂದು ಮೂಲೆ ಕಡಿದು ಹೋಗಿ ಇನ್ನೊಂದೆಡೆ ಕೆಲಸ ಕೈಗೊಳ್ಳುವಷ್ಟರಲ್ಲಿ ಮತ್ತೆ ಕಾಡು ಬೆಳೆದಿರುವಂತಾಗಿದೆ ಎಂದು ದಿನಗೂಲಿಗಳೇ ಅಸಹಾಯಕತೆ ತೋಡಿಕೊಂಡಿದ್ದಾರೆ.

ಇನ್ನು ಉದ್ಯಾನವನದೊಳಗೆ ಚಿಣ್ಣರಿಗೆ ಮುದ ನೀಡಲು ಅಳವಡಿಸಿದ್ದ ಆಟಿಕೆ ಯಂತ್ರಗಳು ಕಿತ್ತುಕೊಂಡು ಬಿದ್ದಿರುವ ದೃಶ್ಯ ಎದುರಾಗಿದೆ.

ಅಪೂರ್ಣ ವ್ಯವಸ್ಥೆ: ಮಡಿಕೇರಿ ರಾಜಾಸೀಟ್‍ಗಿಂತಲೂ ಆಕರ್ಷಣೀಯ ಪ್ರವಾಸಿ ತಾಣವಾಗಿ ರುವ ಗದ್ದುಗೆ ಉದ್ಯಾನವನ ವೀಕ್ಷಣೆಗೆ ಕನಿಷ್ಟ ಸೌಲಭ್ಯ ಕಲ್ಪಿಸದೆ, ಇಲಾಖೆಯ ಕಡೆಗಣನೆಗೆ ಪ್ರವಾಸಿ ಮಹಿಳೆಯರು ‘ಶಕ್ತಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಕನಿಷ್ಟ ಶೌಚಾಲಯ ನಿರ್ಮಿಸದಿರುವ ಕುರಿತು ಜರೆದರು.

ಗದ್ದುಗೆ ಪ್ರವೇಶದ್ವಾರದಲ್ಲೇ ಹಿಂದಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಕಾಳಜಿಯಿಂದ ಕಚೇರಿ ಯೊಂದನ್ನು ನಿರ್ಮಿಸಿರುವದು ಗೋಚರಿಸಲಿದ್ದು, ಅದು ಬೀಗ ಜಡಿಯಲ್ಪಟ್ಟಿದೆ. ಇನ್ನೊಂದೆಡೆ ಲಕ್ಷಾಂತರ ರೂಪಾಯಿ ವೆಚ್ಚದ ಶೌಚಾಲಯ ಇತ್ಯಾದಿ ನಿರ್ಮಿಸಿದ್ದರೂ ನಿರ್ವಹಣೆಯಿಲ್ಲದೆ ಬೀಗ ಜಡಿಯಲ್ಪಟ್ಟು ಕಾಡು ಪಾಲಾಗಿರುವ ದೃಶ್ಯ ಎದುರಾಗಲಿದೆ.

ಇತ್ತ ಇನ್ನಾದರೂ ನಗರ ಪ್ರವಾಸೋದ್ಯಮ ಹಾಗೂ ಪ್ರವಾಸಿಗಳತ್ತ ಕಾಳಜಿಯಿಂದ ಸಂಬಂಧಪಟ್ಟವರು ಗಮನ ಹರಿಸಿ ಮೂಲಭೂತ ಸೌಲಭ್ಯ ಕಲ್ಪಿಸಿದರೆ ಬೊಕ್ಕಸಕ್ಕೆ ಆದಾಯದೊಂದಿಗೆ, ಆ ಮೂಲಕ ಐತಿಹಾಸಿಕ ಗದ್ದುಗೆಯ ನಿರ್ವಹಣೆಯೂ ಸುಲಭ ಸಾಧ್ಯವಾದೀತು. ಇತ್ತ ಕಾರ್ಯಕ್ಷಮತೆ ಯೊಂದಿಗೆ ಕಾಳಜಿ ಅಗತ್ಯವಷ್ಟೇ.

-ಶ್ರೀಸುತ, ಚಿತ್ರಗಳು: ಟಿ.ಜಿ. ಸತೀಶ್