ಗೋಣಿಕೊಪ್ಪಲು, ಸೆ. 28: ಬಿಡುವು ನೀಡಿದ್ದ ವರುಣ ಇದೀಗ ಮತ್ತೆ ಕಾಣಿಸಿಕೊಂಡಿದ್ದಾನೆ. ಇಂದು ಬಿಸಿಲು-ಮಳೆಯ ಚೆಲ್ಲಾಟ ಲಕ್ಷಣಗಳು ಕಂಡುಬಂದಿತು. ಈವರೆಗೂ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ಕಾವೇರಿ ಕಲಾ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವರುಣನಿಂದ ಅಷ್ಟೇನೂ ಅಡ್ಡಿಯಾಗ ದಿದ್ದರೂ, ತಲೆಯ ಮೇಲಿನ ದಟ್ಟ ಕಾರ್ಮೋಡ ದಶಮಂಟಪ ಅಧ್ಯಕ್ಷರಿಗೆ ಕಳವಳ ಮೂಡಿಸಿದೆ.
ಒಂದೆಡೆ ವರುಣನ ಭಯವಿದ್ದರೂ, ಈ ಬಾರಿಯ ದಸರಾ ಆಕರ್ಷಣೆ ಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ಆಗಮನ ಗೋಣಿಕೊಪ್ಪಲು ಮುಖ್ಯರಸ್ತೆಯ ಮೇಲೆ ‘ಟ್ರಾಫಿಕ್ ಜಾಮ್’ಗೆ ಕಾರಣವಾಗಿದೆ. ಈ ಬಾರಿ ಮೈಸೂರು, ಬೆಂಗಳೂರು ಅಲ್ಲದೆ ಕೇರಳದ ಪ್ರವಾಸಿಗರ ಸಂಖ್ಯೆಯೂ ಅತ್ಯಧಿಕವಾಗಿ ಗೋಣಿಕೊಪ್ಪಲು ದಸರಾ ವೀಕ್ಷಣೆಗೆ ಜನಸಾಂದ್ರತೆ ಹೆಚ್ಚಾಗುವ ಸಾಧ್ಯತೆ ಕಂಡುಬಂದಿದೆ. ಮಡಿಕೇರಿ, ಕುಶಾಲನಗರದಲ್ಲಿ ವಸತಿ ನಿಲಯ ಸಿಗದ ಪ್ರವಾಸಿಗರು ಗೋಣಿಕೊಪ್ಪಲು
(ಮೊದಲ ಪುಟದಿಂದ) ಸುತ್ತ ಮುತ್ತ ಲಾಡ್ಜ್, ಹೋಮ್ ಸ್ಟೇ ಇತ್ಯಾದಿಗಳಿಗೆ ಮೊರೆ ಹೋಗುತ್ತಿದ್ದು ಒಂದು ಅಂದಾಜಿನ ಪ್ರಕಾರ ದಕ್ಷಿಣ ಕೊಡಗಿನ ವಸತಿ ಗೃಹಗಳೂ ತಾ.30 ರವರೆಗೆ ಫುಲ್ ಆಗಿರುವ ವರದಿ ಬಂದಿದೆ.
ಗೋಣಿಕೊಪ್ಪಲು ದಸರಾಗೆ 48 ಗಂಟೆ ಕಾಲಾವಧಿ ಇದ್ದರೂ ಇಂದಿನಿಂದಲೇ ಇಲ್ಲಿನ ರಸ್ತೆಯಲ್ಲೆಲ್ಲಾ ವಾಹನ ದಟ್ಟಣೆ ಅಧಿಕವಾಗತೊಡಗಿದೆ. ಗಂಟೆಗಟ್ಟಲೆ ವಾಹನ ಸಂಚಾರ ಅಸ್ತವ್ಯಸ್ತವಾಗತೊಡಗಿದೆ. ಮಳೆಯಲ್ಲಿಯೂ ದಸರಾ ವೀಕ್ಷಣೆಗೆ ಪ್ರವಾಸಿಗರು ಕೊಡಗಿನ ಮೇಲೆ ಲಗ್ಗೆ ಹಾಕುತ್ತಿದ್ದು, ಇಲ್ಲಿನ ದಶ ಮಂಟಪ ಪದಾಧಿಕಾರಿಗಳು ತಾ.30ರ ಸ್ತಬ್ಧ ಚಿತ್ರ ಪ್ರದರ್ಶನ ಹಾಗೂ ರಾತ್ರಿಯ ಶೋಭಾ ಯಾತ್ರೆಗೆ ಬಿಡುವು ಮಾಡಿಕೊಡುವಂತೆ ವರುಣನಿಗೆ ಕೈಮುಗಿಯತೊಡಗಿದ್ದಾರೆ.
ಇದರ ನಡುವೆ ದೊಡ್ಡ ಕಾಂಪ್ಲೆಕ್ಸ್ ಕಟ್ಟಡ ಹಾಗೂ ಅಂಗಡಿ ಮಳಿಗೆ ವಿದ್ಯುತ್ ಅಲಂಕಾರ ಸ್ಪರ್ಧೆಗೆ ಪ್ರತ್ಯೇಕ ಮೂರು ಬಹುಮಾನ ಘೋಷಣೆ ಮಾಡಲಾಗಿದ್ದು, ವರ್ತಕರೂ ತಮ್ಮ ಅಂಗಡಿ ಮುಂಗಟ್ಟುಗಳ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಇಂದು ಮಧ್ಯಾಹ್ನ ಗ್ರಾ.ಪಂ. ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್‍ಗಣಪತಿ ಅವರು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಅತ್ಯುತ್ತಮ ಉತ್ಸವ ಮೂರ್ತಿಗಳಿಗೆ ಬಹುಮಾನ ಘೋಷಣೆ ಮಾಡಿದರು. ಪ್ರಥಮ ಬಹುಮಾನ ರೂ.20 ಸಾವಿರ, ದ್ವಿತೀಯ ರೂ.15 ಸಾವಿರ ಹಾಗೂ ತೃತೀಯ ಬಹುಮಾನವಾಗಿ ರೂ. 10 ಸಾವಿರ ನಗದು ಮತ್ತು ಟ್ರೋಫಿ ನೀಡುತ್ತಿರುವದಾಗಿ ವಿವರಿಸಿದರು.
ಶ್ರೀ ಕಾವೇರಿ ದಸರಾ ಸಮಿತಿಯ ಮಂಟಪ ಮುಂಚೂಣಿಯಲ್ಲಿದ್ದೂ ಈವರೆಗೂ ರಾತ್ರಿ 10 ಗಂಟೆಯ ನಂತರ ಇಲ್ಲಿನ ಪ್ರಾಥಮಿಕ ಶಾಲಾ ಮೈದಾನದಿಂದ ತೇರು ಹೊರಡುತ್ತಿತ್ತು. ಈ ಬಾರಿ 8 ಗಂಟೆಗೆ ಚಾಮುಂಡೇಶ್ವರಿ ಪೂಜೆಯನ್ನು ಮುಗಿಸಿ, ತೇರಿನ ಉದ್ಘಾಟನೆಯೊಂದಿಗೆ ಮಂಟಪ ಬೇಗನೆ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಮುಂಭಾಗ ತೆರಳಲಿದೆ. ನಂತರವೇ ನವರಾತ್ರಿ ಹಬ್ಬದ ಸಮಾರೋಪ ಕಾರ್ಯಕ್ರಮ ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ಜರುಗಲಿದೆ ಎಂದು ಹೇಳಿದರು.
ಚಂಡೆ ವಾದ್ಯ ಹಾಗೂ ಸಿಡಿಮದ್ದು ಪ್ರದರ್ಶನದ ಉದ್ದೇಶವಿತ್ತು. ಆದರೆ ಮಳೆಯ ಕಾರಣ ಈ ಬಾರಿ ರದ್ದು ಪಡಿಸಲಾಗಿದೆ ಎಂದರು. ಎಲ್ಲ ದಶಮಂಟಪಗಳೂ ಇಲ್ಲಿನ ಬಸ್ ನಿಲ್ದಾಣವನ್ನು ರಾತ್ರಿ 2 ಗಂಟೆಗೂ ಮುನ್ನ ತಲುಪಲು ಸೂಚಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಮಂಟಪಗಳು ಮೂರು ಪ್ರದರ್ಶನ ನೀಡಬೇಕಾಗಿದೆ. ವಿಜಯಾ ಬ್ಯಾಂಕ್ ಮುಂಭಾಗ, ಬೈಪಾಸ್ ರಸ್ತೆಯಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಮಂಟಪಗಳು ಸಂಪೂರ್ಣ ಚಿತ್ರಣವನ್ನು ನೀಡಬೇಕಿದ್ದು, ಮೂವರು ತೀರ್ಪುಗಾರರು ವಿಜೇತರನ್ನು ಆಯ್ಕೆಮಾಡಲಿದ್ದಾರೆ ಎಂದರು.
ಗೋಣಿಕೊಪ್ಪಲಿನ ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ಸಮಾರೋಪ ಸಭಾ ಕಾರ್ಯಕ್ರಮದ ನಂತರ ಸಂಗೀತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು ರಾತ್ರಿ 2 ಗಂಟೆಯವರೆಗೂ ನಡೆಯಲಿದೆ. ಗೋಣಿಕೊಪ್ಪಲು ಬಸ್ ನಿಲ್ದಾಣ ದಲ್ಲಿಯೂ ಮತ್ತೊಂದು ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ದಶಮಂಟಪ ಶೋಭಾಯಾತ್ರೆ ಸ್ಪರ್ಧಾ ವಿಜೇತರಿಗೂ ಬಸ್ ನಿಲ್ದಾಣದ ವೇದಿಕೆಯಲ್ಲಿ ಬಹುಮಾನ ವಿತರಣೆ ಮಾಡಲಾಗು ವದು ಎಂದು ಹೇಳಿದರು.
ಶ್ರೀ ಕಾವೇರಿ ದಸರಾ ಸಮಿತಿಯ ಶ್ರೀ ಚಾಮುಂಡೇಶ್ವರಿ ವಿಗ್ರಹವನ್ನು ಮರುದಿನ ತಾ.1 ರಂದು ಬೆಳಿಗ್ಗೆ ಇಲ್ಲಿಗೆ ಸಮೀಪ ಸೀಗೆತೋಡುವಿನ ದಿ.ಚೆಲುವ, ಚಿತ್ರಾ ಯಶೋಧ ಮಾಲೀಕತ್ವದ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವದು ಎಂದು ಪ್ರಮೋದ್ ಗಣಪತಿ ಮಾಹಿತಿ ನೀಡಿದರು.
ಗೋಣಿಕೊಪ್ಪಲು ದಸರಾಗೆ ಈ ಬಾರಿ ರಾಜ್ಯ ಸರ್ಕಾರ ರೂ. 25 ಲಕ್ಷ ಅನುದಾನ ನೀಡುವ ಭರವಸೆ ಇದ್ದು, ಕಡಿಮೆ ಅವಧಿಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆಯಾದ ಹಿನ್ನೆಲೆ ಅನುದಾನ ದಸರಾಗೆ ಮುಂಚಿತವಾಗಿ ತರಲು ಸಾಧ್ಯವಾಗಿಲ್ಲ. ಮುಂದಿನ ವರ್ಷ 2 ತಿಂಗಳಿಗೆ ಮುನ್ನವೇ ಲೆಕ್ಕ ಪತ್ರ ಮಂಡನೆ ಮಾಡುವ ಮೂಲಕ ಶೀಘ್ರ ಅನುದಾನಕ್ಕೆ ಪ್ರಯತ್ನಿಸ ಲಾಗುವದು ಎಂದು ಹೇಳಿದರು.
ಸಮಾರೋಪ : ತಾ.30 ರಂದು ದಶಮಂಟಪ ಶೋಭಾಯಾತ್ರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಉದ್ಘಾಟಿಸಲಿದ್ದಾರೆ.
ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಗೌರವ ಉಪಸ್ಥಿತಿ ಯೊಂದಿಗೆ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಜೆ.ಎ.ಕರುಂಬಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೆÇನ್ನಪ್ಪ, ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್‍ಮಾಚಯ್ಯ, ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಬಿ.ಬಿ. ಭಾರತೀಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ, ರಾಜ್ಯ ಉಚ್ಚನ್ಯಾಯಾಲಯ ವಕೀಲ ಚಂದ್ರಮೌಳಿ, ಉಸ್ತುವಾರಿ ಸಚಿವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ, ರಾಜ್ಯ ಎಫ್‍ಕೆಸಿಸಿಐ ಪದಾಧಿಕಾರಿ ಕೆ.ಬಿ. ಗಿರೀಶ್ ಗಣಪತಿ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಹಾಗೂ ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್ ಉಪಸ್ಥಿತಿಯಲ್ಲಿ ಗೋಣಿಕೊಪ್ಪಲು ದಸರಾ ಸಮಿತಿಗೆ ನಿರಂತರ ಸಹಕಾರ ನೀಡುತ್ತಿರುವ ಮೂಡಬಿದ್ರಿಯ ಆಳ್ವಾಸ್ ಎಜುಕೇಷನ್ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಡಾ. ಮೋಹನ್ ಆಳ್ವಾ ಅವರನ್ನು ಸನ್ಮಾನಿಸಲಾಗುವದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಬಿ.ಎನ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಗ್ರಾ.ಪಂ.ಸದಸ್ಯರಾದ ಜಮ್ಮಡ ಸೋಮಣ್ಣ, ಯಾಸ್ಮೀನ್, ಮುರುಗ ಉಪಸ್ಥಿತರಿದ್ದರು.