ಮಡಿಕೇರಿ, ಸೆ. 28: ವೀರಾಜಪೇಟೆ ಪ.ಪಂ. ಅಧ್ಯಕ್ಷರಾಗಿ ರುವ ಇ.ಸಿ. ಜೀವನ್, ಮಂಗಳೂರಿನ ಇಂಜಿನಿಯರ್ ರಾಜೇಂದ್ರ ಎಂಬವರ ವಿರುದ್ಧ ರೂ. 2 ಲಕ್ಷ ಮೊತ್ತದ ಚೆಕ್ ಬೌನ್ಸ್ ಪ್ರಕರಣವನ್ನು ವೀರಾಜಪೇಟೆ ನ್ಯಾಯಾಲಯದಲ್ಲಿ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ವೀರಾಜಪೇಟೆ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿ, ಆರೋಪಿ ರಾಜೇಂದ್ರರನ್ನು ಆರೋಪದಿಂದ ಖುಲಾಸೆಗೊಳಿಸಿದೆ.
ಮಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ರಾಜೇಂದ್ರ ಸೆಪ್ಟೆಂಬರ್ 2003ರಲ್ಲಿ ವೀರಾಜಪೇಟೆ ಪಂಚಾಯಿತಿ ಅಧ್ಯಕ್ಷರಾಗಿರುವ ಇ.ಸಿ. ಜೀವನ್ ಅವರಿಂದ ಕೈ ಸಾಲವಾಗಿ ರೂ. 5 ಲಕ್ಷ ಪಡೆದು, ಈ ಹಣದ ಮರುಪಾವತಿ ಸಂಬಂಧ ವಿಜಯ ಬ್ಯಾಂಕ್ ಬೈಂದೂರು, ಮಂಗಳೂರು ಖಾತೆಯ ಚೆಕ್ ನೀಡಿದ್ದರು. ಈ ಬಗ್ಗೆ ಇ.ಸಿ. ಜೀವನ್ ವೀರಾಜಪೇಟೆ ಪ್ರಿನ್ಸಿಪಾಲ್ ನ್ಯಾಯಾಲಯದಲ್ಲಿ ಸಿ.ಸಿ. 554/2004ರಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ರಾಜೇಂದ್ರರನ್ನು ಅಪರಾಧಿ ಎಂದು ತೀರ್ಪಿತ್ತು ಆರು ತಿಂಗಳು ಶಿಕ್ಷೆ ಹಾಗೂ 2.50 ಲಕ್ಷ ರೂಪಾಯಿ ಹಣವನ್ನು ಪಾವತಿಸು ವಂತೆ ಆದೇಶ ಮಾಡಿದ್ದು, ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜೇಂದ್ರ ವೀರಾಜಪೇಟೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಧೀಶ ಮೋಹನ್ ಪ್ರಭು ಅವರು ಪಿರ್ಯಾಧಿ ಇ.ಸಿ. ಜೀವನ್ ಹಾಕಿರುವ ಚೆಕ್ ಅಮಾನ್ಯ ಪ್ರಕರಣ, ಸತ್ಯಕ್ಕೆ ದೂರವಾಗಿದ್ದು, ಪಿರ್ಯಾಧಿ ರೂ. 5 ಲಕ್ಷವನ್ನು ಕೊಡುವ ಆರ್ಥಿಕ ಸಾಮಥ್ರ್ಯನಾಗಿಲ್ಲ. ಕೆಲವು ಕಾನೂನಿನ ತೊಡಕಿನಿಂದ ಕೂಡಿದ ಪ್ರಕರಣವೆಂದು ಆದೇಶಿಸಿ ಆರೋಪಿ ಮಂಗಳೂರಿನ ಇಂಜಿನಿಯರ್ ರಾಜೇಂದ್ರನನ್ನು ದೋಷ ಮುಕ್ತಗೊಳಸಿ ಮೇಲ್ಮನವಿ ಯನ್ನು ಪುರಸ್ಕರಿಸಿ, ಇ.ಸಿ. ಜೀವನ್ ಸಲ್ಲಿಸಿದ ಚೆಕ್ ಬೌನ್ಸ್ ಪ್ರಕರಣವನ್ನು ವಜಾಗೊಳಿಸಿ ಆದೇಶ ನೀಡಿದೆ. ರಾಜೇಂದ್ರ ಪರವಾಗಿ ವೀರಾಜಪೇಟೆಯ ವಕೀಲ ಡಿ.ಸಿ. ಧ್ರುವ ವಕಾಲತ್ತು ವಹಿಸಿದ್ದರು.