ಗೋಣಿಕೊಪ್ಪಲು, ಸೆ. 28: ಮಡಿಕೇರಿಯ ತಿರಿಬೊಳ್ಚ ಕೊಡವ ಸಂಘದ ಆಶ್ರಯದಲ್ಲಿ ವೀರಾಜಪೇಟೆ ತಾಲೂಕು ಮಟ್ಟದ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮ ಗೋಣಿಕೊಪ್ಪ-ಅತ್ತೂರಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನ್ಯಾಷನಲ್ ಅಕಾಡೆಮಿ ಶಾಲೆಯ ಮುಖ್ಯಸ್ಥೆ ಅಪ್ಪನೆರವಂಡ ಶಾಂತಿ ಅಪ್ಪಚ್ಚ ಕಾರ್ಯಕ್ರಮ ಉದ್ಘಾಟಿಸಿದರು. ಕೊಡವ ಸಂಪ್ರದಾಯದಂತೆ ‘ತಪ್ಪಡ್ಕ’ ಕಟ್ಟಿ ಅಕ್ಕಿ ಹಾಕಿ ಗುರುಕಾರೋಣರಿಗೆ ನಮಿಸಲಾಯಿತು. ‘ಮಂಗಲತ್ ನೀರೆಡ್ಪ ನೇರತ್ ಮೂಡಿನ ತಡ್ತ್ ಆಡುವೊ’ ಈ ವಿಷಯವಾಗಿ ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಶಿಕ್ಷಕಿ ಚೋಕಿರ ಅನಿತಾ ದೇವಯ್ಯ ಪ್ರಬಂಧ ಮಂಡಿಸಿದರು. ಬಳಿಕ ಆಹ್ವಾನಿತ ಅತಿಥಿಗಳಾದ ಪ್ರೊ. ಇಟ್ಟೀರ ಬಿದ್ದಪ್ಪ, ಮುಲ್ಲೇಂಗಡ ಶಂಕರಿ, ಮಾಚಿಮಾಡ ರವೀಂದ್ರ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೊಟ್ಟೆಕಮಾಡ ರಾಜೀವ್ ಬೋಪಯ್ಯ, ಚಮ್ಮಟ್ಟಿರ ಪ್ರವೀಣ್, ಮಚ್ಚಮಾಡ ಅನೀಶ್, ಬಲ್ಯಮೀದೆರಿರ ಸುಬ್ರಮಣಿ, ಕೊಟ್ಟಂಗಡ ಅಮ್ಮಕ್ಕಿ ಪೂವಯ್ಯ, ತಾತಂಡ ಪ್ರಭಾ ನಾಣಯ್ಯ, ಕರೋಟಿರ ಶಶಿ ಸುಬ್ರಮಣಿ, ಕುಲ್ಲೇಟಿರ ಪವಿ ಮೊಣ್ಣಪ್ಪ ಮುಂತಾದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕೊಡವ ಸಮಾಜಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದು ಕೊಳ್ಳುವಂತೆ ಮನವಿ ಮಾಡುವದು ಪ್ರತಿಯೊಂದು ಕುಟುಂಬದಲ್ಲಿಯೂ ‘ನೀರೆಡ್ಪೊ’ ಶಾಸ್ತ್ರಕ್ಕೆ ಸಮಯ ನಿಗದಿಮಾಡುವದು, ಸಾಧ್ಯವಾದರೆ ವರನ ಮನೆಯಲ್ಲಿ ಈ ಶಾಸ್ತ್ರ ನಡೆಸುವದು, ಮದುವೆಯ ದುಂದು ವೆಚ್ಚವನ್ನು ಕಡಿತಗೊಳಿಸುವದು, ಇದನ್ನು ಜನಾಂಗದ ಶ್ರೀಮಂತ ವರ್ಗದವರು, ಪ್ರತಿಷ್ಠಿತ ವ್ಯಕ್ತಿಗಳು, ಮುಖಂಡರು ಅನುಷ್ಠಾನಕ್ಕೆ ತರುವಂತೆ ಕೋರುವದು, ಜನಾಂಗದ ಯುವಕ-ಯುವತಿಯರಿಗೆ ಇದರ ಒಳಿತು-ಕೆಡುಕುಗಳ ಬಗ್ಗೆ ಅರಿವು ಮಾಡಿಕೊಡುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ವಿಚಾರ ಸಂಕಿರಣಗಳನ್ನು ನಡೆಸುವಂತೆ ಅಭಿಪ್ರಾಯಗಳು ಕೇಳಿಬಂದವು.
ತಿರಿಬೊಳ್ಚ ಸಂಘದ ಸಲಹೆಗಾರ ಉಳ್ಳಿಯಡ ಎಂ. ಪೂವಯ್ಯ ಮಾತನಾಡಿ, ‘ಇಂದಿನ ಸಂವಾದದಲ್ಲಿ ಒಳ್ಳೆಯ ಸಲಹೆಗಳು ಕೇಳಿಬಂದಿದ್ದು, ಅವೆಲ್ಲವನ್ನು ಪರಿಗಣಿಸಿ ಸಂಘವು ಎಲ್ಲಾ ಕೊಡವ ಸಮಾಜಗಳ ಸಂಘ-ಸಂಸ್ಥೆಗಳ ಮತ್ತು ಜನಾಂಗ ಬಾಂಧವರ ಸಹಕಾರ ದೊಂದಿಗೆ ಮೂಲ ಪದ್ಧತಿಗೆ ಧಕ್ಕೆ ಬರದಂತೆ ಕಾರ್ಯಪ್ರವೃತ್ತರಾಗೋಣ’ ಎಂದರು. ತಿರಿಬೊಳ್ಚ ಸಂಘ ಒಳ್ಳೆಯ ವಿಷಯವನ್ನು ಸಂವಾದಕ್ಕೆ ಆಯ್ದುಗೊಂಡಿದ್ದು, ಸರ್ವರ ಸಹಕಾರದಿಂದ ಉದ್ದೇಶ ಫಲಪ್ರದವಾಗಲೆಂದು ಸಲಹೆಗಾರ ಕುಕ್ಕೇರ ಜಯ ಚಿಣ್ಣಪ್ಪ ಹೇಳಿದರು.
ಸಂಚಾಲಕ ಚೈಯ್ಯಂಡ ಸತ್ಯ ಅವರು ಮಾತನಾಡಿ, ಸಮಾಜದಲ್ಲಿ ಇಂದು ನಡೆಯುತ್ತಿರುವ ಡಿವೋರ್ಸ್, ಅಪಘಾತ ಇವೆಲ್ಲವುಗಳಿಗೆ ಪದ್ಧತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಅನುಸರಿಸದೆ, ಅನರ್ಥ ಮಾಡುತ್ತಿರುವದೇ ಕಾರಣ ಎಂದರು. ಪ್ರೊ. ಇಟ್ಟಿರ ಬಿದ್ದಪ್ಪ ಮಾತನಾಡಿ, ಪ್ರಕೃತಿಯನ್ನು ವಿಕೃತಗೊಳಿಸುತ್ತಾ ಸಾಗಿರುವದು ಅಪಾಯದ ಸೂಚಕ ಎಂದರು. ಸಂವಾದ ನಡೆಸಿದ ಉಳ್ಳಿಯಡ ಡಾಟಿ ಪೂವಯ್ಯ, ಅಧ್ಯಕ್ಷೀಯ ಭಾಷಣದಲ್ಲಿ ಸಂಘದ ಉದ್ಧೇಶ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸುತ್ತಾ, ತಿರಿಬೊಳ್ಚ ಕೊಡವ ಸಂಘ, ಪದ್ಧತಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಪುನಶ್ಚೇತನಗೊಳಿಸುವಲ್ಲಿ ಒಂದೊಂದೇ ವಿಷಯಗಳನ್ನು ಕೈಗೆತ್ತಿಕೊಂಡು ಫಲಪ್ರದವಾಗುವಲ್ಲಿ ಪ್ರಯತ್ನಿಸಲಾಗುವದು.
ಕೊಡಗಿನಲ್ಲಿ ಅಲ್ಲದೇ ಬೆಂಗಳೂರು, ಮೈಸೂರು ಮತ್ತು ಇತರ ಜಿಲ್ಲೆಗಳಲ್ಲೂ ಸಂವಾದ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.
ಸಲಹೆಗಾರರಾದ ಕಾಳೇಂಗಡ ಕಸ್ತೂರಿ ಮುತ್ತಪ್ಪ, ಸಂಘದ ಕೂಪದಿರ ಶಾರದ ನಂಜಪ್ಪ, ತೆನ್ನಿರ ರಾಧ ಪೊನ್ನಪ್ಪ, ಕಾಳೇಂಗಡ ಕಸ್ತೂರಿ, ಕೂಪದೀರ ಜೂನಾ ವಿಜಯ್, ಬೊಟ್ಟೋಳಂಡ ನಿವ್ಯಾ ಅವರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.