ಕೂಡಿಗೆ, ಸೆ. 28: ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಆದಿವಾಸಿಗಳ ಪುನರ್ವಸತಿ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶುಚಿತ್ವ ಕಾಪಾಡಿಕೊಂಡು ತಾವು ಶುಚಿತ್ವದಿಂದ ಇದ್ದು, ರೋಗ ರುಜಿನಗಳಿಂದ ದೂರವಿರಬೇಕೆಂದು ಶಿಬಿರದಲ್ಲಿದ್ದ 800 ಕ್ಕೂ ಹೆಚ್ಚು ಆದಿವಾಸಿಗಳಿಗೆ ವೈದ್ಯರು ಮಾಹಿತಿ ನೀಡಿದರು. ಮದ್ಯಪಾನ, ಧೂಮಪಾನ, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಆದಿವಾಸಿಗಳಿಗೆ ಮನವರಿಕೆ ಮಾಡಲಾಯಿತು. ಆದಿವಾಸಿಗಳನ್ನು ತಪಾಸಣೆ ಮಾಡುವದರ ಮೂಲಕ ಅವರಲ್ಲಿರುವ ಕಾಯಿಲೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಕ್ಷಯರೋಗ ಕಂಡುಬಂದ ಜನರಿಗೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ತಪಾಸಣೆ ನಡೆಸಿದ ನಂತರ ಅನಾರೋಗ್ಯ ಪೀಡಿತರಿಗೆ ಔಷಧಿಗಳನ್ನು ನೀಡಲಾಯಿತು.
ಇದೇ ವೇಳೆ ತಪಾಸಣೆ ಶಿಬಿರಕ್ಕೆ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಶಿವಕುಮಾರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಗಿರಿಜನ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ.ಚೇತನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ.ಶಾಂತಿ, ಗಿರಿಜನ ಆರೋಗ್ಯ ಸಂಚಾರಿ ಘಟಕ, ಪ್ರಯೋಗಾಲಯ ತಂತ್ರಜ್ಞರು, ಡಾ. ಮಂಜುನಾಥ್, ಆರೋಗ್ಯ ಇಲಾಖೆಯ ಹಾಗೂ ಹೆಬ್ಬಾಲೆ ಆರೋಗ್ಯ ಕೇಂದ್ರದ ಸಿಬ್ಬಂದಿ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.