ಕುಶಾಲನಗರ, ಸೆ. 28: ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ರೋಹಿಂಗ್ಯಾ ಮುಸಲ್ಮಾನರನ್ನು ತಕ್ಷಣ ಪತ್ತೆಹಚ್ಚಿ ಗಡಿಪಾರು ಮಾಡುವಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 1 ವರ್ಷದ ಅವಧಿಯಲ್ಲಿ ಜಿಲ್ಲೆಗೆ ರೋಹಿಂಗ್ಯಾ ಮುಸಲ್ಮಾನರು ನುಸುಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇವರೆಲ್ಲರಿಗೂ ಅಕ್ರಮವಾಗಿ ಆಧಾರ್ ಕಾರ್ಡ್ ವಿತರಿಸುವ ಜಾಲವೊಂದು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತಗೊಂಡಿದೆ. ಕಡಿಮೆ ಕೂಲಿ ನೀಡಿ ವಲಸಿಗರನ್ನು ನೇಮಿಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ತೋಟದ ಮಾಲೀಕರು ಸೇರಿದಂತೆ ಜಿಲ್ಲೆಗೆ ಭಾರೀ ಗಂಡಾಂತರದ ಅಪಾಯ ಕಾಡಲಿದೆ ಎಂದು ಸಂಸದರು ಎಚ್ಚರಿಸಿಸದ್ದಾರೆ.
ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ತಲಾ 50 ಲಕ್ಷ ರೂ.ಗಳನ್ನು 8 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಈ ಅನುದಾನ ಕಲ್ಪಿಸಲಾಗಿದೆ ಎಂದರು. ಕೊಡಗು ಜಿಲ್ಲೆಗೆ ರೈಲ್ವೇ ಮಾರ್ಗ ತರುವ ನಿಟ್ಟಿನಲ್ಲಿ 2016 ರ ಬಜೆಟ್‍ನಲ್ಲಿ ಪ್ರಸ್ತಾವನೆ ಮಂಜೂರಾಗಿದ್ದು ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರಕಾರ ನಿರ್ಲಕ್ಷ ತಾಳಿದೆ ಎಂದು ಆರೋಪಿಸಿದರು. ಕುಶಾಲನಗರದ ತನಕ ರೈಲ್ವೇ ಯೋಜನೆ ನಿರ್ಮಾಣ ಖಚಿತವಾಗಿದ್ದು ಈ ನಿಟ್ಟಿನಲ್ಲಿ ತಾವು ಪೂರ್ಣ ಪ್ರಮಾಣದಲ್ಲಿ ಶ್ರಮಿಸುತ್ತಿರುವದಾಗಿ ತಿಳಿಸಿದರು.