ಗೋಣಿಕೊಪ್ಪಲು, ಸೆ. 28 : ಕಾವೇರಿ ದಸರಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸರ್ಕಾರಿ ಪ್ರೌಢಶಾಲಾ ಮೈದಾನದ ಕಾವೇರಿ ಕಲಾ ವೇದಿಕೆಯಲ್ಲಿ 7ನೇ ದಿನದ ಸಾಂಸ್ಕøತಿಕ ಸಂಜೆಯಲ್ಲಿ ಕೊಡವ ನೈಟ್ಸ್ ಸಿಂಪೋನಿ ತಂಡ ನಡೆಸಿಕೊಟ್ಟ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮ ಜನಮನ ಗೆದ್ದಿತು.
ತಂಡದ 5 ಗಾಯಕರಿಂದ ಇಂಪಾದ ಕೊಡವ ಗೀತೆಗಳು ಮೂಡಿಬಂದು ನೆರೆದಿದ್ದ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ಕೊಂಡೊಯ್ದರು. ಮುಲ್ಲೇರ ಜಿಮ್ಮಿ ಅಯ್ಯಪ್ಪ ರಚಿಸಿರುವ ಶ್ರೀ ಗಣಪತಿ, ಓಂ ಗಣಪತಿ ಹಾಡನ್ನು ಗಾಯಕ ಉಳುವಂಗಡ ಲೋಹಿತ್ ಭೀಮಯ್ಯ ಹಾಡುವ ಮೂಲಕ ರಸಮಂಜರಿ ಪ್ರಾರಂಭಿಸಿದರು. ನಂತರ ಹಾಡಿದ ಕುಂದುಲ್ ಕ್ಯಾಮೋ, ಕಳ್ಳ್ ಕುಡಿಕಂಡ ಬಾವ; ಕಳ್ಳೇ ನಂಗಡ ದೇವ ಹಾಡು ನೆರೆದಿದ್ದ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು. ನೊರೆ.. ನೊರೆ ಬೀರ್ ಹಾಡು ಕೇಳುಗನನ್ನು ಸೆಳೆಯಿತು. ಚೆಕ್ಕೇರ ಪಂಚಮ್ ತ್ಯಾಗರಾಜ್ ಧನಿಯಲ್ಲಿ ಪೊಂಬಣ್ಣ ಚೀಲತ್‍ರ.. ಬೋಜತ್‍ನ ನೋಟ್, ನೆಪ್‍ಲೆಡುತ್ತವ ಬೊಳ್ಳವ.. ಬೊಳ್ಳೆ ಕಳ್ಳವ, ಚೆರಿಯಮನೆಲ್ ಇಪ್ಪುಳಿಯಾ, ಪತ್ ಕಾಲ ಕೈಂಜ ಪಿಂಞ ಮಾಯ್‍ರ ಮೋವಳ ನೋಟ್... ಹಾಡುಗಳು ಸೊಗಸಾಗಿ ಮೂಡಿಬಂದವು. ನೆಲ್ಲಮಕ್ಕಡ ಸಾಗರ್ ಕಂಠದಲ್ಲಿ ಮೂಡಿದ ಬಂದೀರ ಬೆಂದಕಳೇ ಹಾಡಿಗೆ ಕೇಳುಗ ತಲೆದೂಗಿದರೆ ಕೊಡವತಿ ಚಾಯಿಕಾರತಿ ಹಾಡು ಕೊಡವ ಹೆಣ್ಣಿನ ಸೌಂದರ್ಯ ವರ್ಣಿಸಿತು. ಜೆಫ್ರಿ ರಚಿಸಿರುವ ಊರ್ ಕಂಡನ.. ನೀರ್ ಕಂಡನ... ಹಾಡು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿತು. ಮಾಳೇಟೀರ ಅಜಿತ್ ಹಾಡಿದ ಕೊಡವ ಭಾಷೆ, ಕೊಡವ ನಾಡ್ ಎಂದೇದ್ ನಂಗಡ ಆಯಿತಿರಡ್... ಕೊಡಗಿನ ವೈಭವವನ್ನು ನೆನಪಿಸಿತು. ತಾಪಂಡ ಮಂಜು ಕುಶಾಲಪ್ಪ ರಚಿಸಿರುವ ನೀಡದೇ ಓ ನೀಡದೇ ಹಾಡು ಸುಮಧುರವಾಗಿ ಕೇಳಿತು. ಪುಟಾಣಿ ಮಚ್ಚಮಾಡ ಗ್ರೀಷ್ಮಾ ಉತ್ತಪ್ಪ ಹಾಡಿದ ಬೊಳ್‍ಚ ಬೆಕೊಂಡ್.. ಕಾವೇರಿ ಮಾತೆಯ ತೊತ್ತೊಡ್ ಹಾಡಿಗೆ ಪ್ರೇಕ್ಷಕರು ಮನಸೋತರು. 7ರ ಪೋರ ಉಳುವಂಗಡ ಮೋಹಿತ್ ಅಪ್ಪಯ್ಯ ಮತ್ತೊಮ್ಮೆ ಕುಂದುಲ್ ಕ್ಯಾಮೊ ಹಾಡಿ ಮನರಂಜಿಸಿದರು. ಚಮ್ಮಟೀರ ಪ್ರವೀಣ್ ಮನಸ್‍ರ ಅಂತರಾಳತ್‍ರ ಹಾಡಿಗೆ ಧನಿಯಾದರು. ಕಾವೇರಿ ಕಾಲೇಜಿನ ವಿದ್ಯಾರ್ಥಿನಿಯ ಕೊಡವ ನೃತ್ಯ ಮನತಣಿಸಿದವು.
ಇದಕ್ಕೂ ಮೊದಲು ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ಮೂಡಿಬಂತು. ಗೋಣಿಕೊಪ್ಪದ ರಿಫ್ಲೆಕ್ಷನ್ ಡ್ಯಾನ್ ತಂಡದಿಂದ ಹಿಪ್‍ಹಾಪ್, ಎಂಜೆ ಡ್ಯಾನ್ಸ್, ಫ್ರೀಸ್ಟೈಲ್, ಫಿಲ್ಮಿ ಪ್ರಕಾರ ನೃತ್ಯಗಳು ಅಕರ್ಷಿಸಿತು. ತಂಡದ ಬಿ-ಬಾಯಿಂಗ್ ನೃತ್ಯ ಪ್ರೇಕ್ಷಕನ ಎದೆ ಝಲ್ಲೆನಿಸಿತು. ಜಸ್ಟ್ ಮಾತ್ ಮಾತಲ್ಲೇ ಸೇರಿದಂತೆ ಹಾಡುಗಳನ್ನು ಹಾಡಿ ರಂಜಿಸಿದರು. ಚಂದನ್ ನೆಲ್ಲಿತಾಯ ಕನ್ನಡ ಖ್ಯಾತ 22 ಗೀತೆಗಳನ್ನು ಒಂದು ಹಾಡಿನಲ್ಲಿ ಜೋಡಿಸಿ ಹೊಸತನ ಪ್ರದರ್ಶಿಸಿದರು. ಕೀರ್ತನಾ ನೀನೆ.. ರಾಮ ನೀನೇ ಶಾಮ ಹಾಡನ್ನು ಹಾಡಿ ಜಾತಿ, ಧರ್ಮ ಬದಿಗೊತ್ತಿ ಮಾನವನಾಗು ಎಂಬ ಸಂದೇಶ ಹಾಡಿನ ಮೂಲಕ ನೀಡಿದರು. ಶಯನ್ ಚಿಟ್ಟಿಯಪ್ಪ ವೆಸ್ಟ್‍ರ್ನ್ ಶೈಲಿ ಗೀತೆ ಹಾಡಿದರು.
ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಶಮಂಟಪಗಳ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ, ತಾ.ಪಂ ಸದಸ್ಯ ಜಯಾ ಪೂವಯ್ಯ, ಗೋಣಿಕೊಪ್ಪ ಪೊಲೀಸ್ ಉಪ ನಿರೀಕ್ಷಕ ಹೆಚ್.ವೈ ರಾಜು, ಸ್ವಾಮಿ ವಿವೇಕಾನಂದಾ ಯೂತ್ ಮೂಮೆಂಟ್ ಸಂಚಾಲಕ ಡಾ.ಚಂದ್ರಶೇಖರ್, ನವಚೇತನ ದಸರಾ ಸಮಿತಿ ಅಧ್ಯಕ್ಷ ಕರ್ಣರಾಜ್, ಸ್ನೇಹಿತ ಬಳಗದ ಅಧ್ಯಕ್ಷ ಕಾಡ್ಯಾಮಾಡ ಚೇತನ್, ನಮ್ಮ ದಸರಾ ಸಮಿತಿ ಅಧ್ಯಕ್ಷ ಕರ್ತಂಡ ಸೋಮಣ್ಣ, ಶಾರದಾಂಭ ದಸರಾ ಸಮಿತಿ ಅಧ್ಯಕ್ಷ ಕಿರಣ್, ಸರ್ವರ ದಸರಾ ಸಮಿತಿ ಅಧ್ಯಕ್ಷ ಅನೀಶ್, ಯುವ ದಸರಾ ಸಮಿತಿ ಅಧ್ಯಕ್ಷ ಕೆ.ರಾಜೇಶ್, ಭಗವತಿ ಸಮಿತಿ ಅಧ್ಯಕ್ಷ ಚಿಯಕ್‍ಪೂವಂಡ ಸುಬ್ರಮಣಿ, ಕಾಡ್ಲಯ್ಯಪ್ಪ ದಸರಾ ಸಮಿತಿ ಅಧ್ಯಕ್ಷ ಸಜನ್, ದಸಂಸ ಜಿಲ್ಲಾ ಸಂಚಾಲಕ ಪರಶುರಾಮ್ ಇದ್ದರು.