ಮಡಿಕೇರಿ, ಸೆ. 29: ಮಂಜಿನ ನಗರಿ ಖ್ಯಾತಿಯ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ದಕ್ಷಿಣ ಕೊಡಗಿನ ಪ್ರಮುಖ ಕೇಂದ್ರ ಗೋಣಿಕೊಪ್ಪಲು ತಾ. 30ರಂದು (ಇಂದು) ಸಾವಿರಾರು ಜನರನ್ನು ಆಕರ್ಷಿಸಲಿದೆ.

ವಿಜಯದಶಮಿಯ ದಿನವಾದ ಇಂದು ದಸರಾ ಉತ್ಸವದ ಸಂಭ್ರಮ ಮೇಳೈಸಲಿದೆ. ಮಳೆಯ ವಾತಾವರಣದ ನಡುವೆಯೂ ವೈಭವದ ದಸರಾ ಆಚರಣೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಶೋಭಾಯಾತ್ರೆ ಕಣ್ಮನ ತಣಿಸಲಿದೆ.ಪುರಾಣದ ಸನ್ನಿವೇಶವನ್ನು ಪ್ರತಿಬಿಂಬಿಸುವ ವಿವಿಧ ರೀತಿಯ ಕಥಾ ಸಾರಾಂಶಗಳನ್ನು ಒಣಗೊಂಡ ಚಲನವಲವ ಸಹಿತದ ಮಂಟಪಗಳು ಮೈಸೂರು ದಸರಾಕ್ಕಿಂತ ವಿಭಿನ್ನವಾಗಿ ಕೊಡಗಿನಲ್ಲಿ ಗಮನ ಸೆಳೆಯಲಿವೆ.

ಮಡಿಕೇರಿ ದಸರಾದಲ್ಲಿ ದಶಮಂಟಪಗಳ ಶೋಭಾಯಾತ್ರೆ ವಿಶೇಷವಾಗಿದ್ದರೂ, ಗೋಣಿಕೊಪ್ಪಲುವಿನಲ್ಲೂ ಮಡಿಕೇರಿಗೆ ಸರಿಸಾಟಿಯ ರೀತಿಯಲ್ಲಿಯೇ ಮಂಟಪಗಳ ಶೋಭಾಯಾತ್ರೆ ಜನತೆಯನ್ನು ಆಕರ್ಷಿಸಲಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆಯುಧ ಪೂಜಾ ದಿನವಾದ ತಾ. 29ರಿಂದಲೇ ಮೋಡಮುಸುಕಿದ ವಾತಾವರಣದ ನಡುವೆಯೂ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ. ವಿಜಯದಶಮಿಯ ಶೋಭಾಯಾತ್ರೆಯಲ್ಲಿ ದುಷ್ಟ ಸಂಹಾರ ಶಿಷ್ಟ ರಕ್ಷಣೆಯ ಕಥೆಯನ್ನು ಒಳಗೊಂಡ ಮಂಟಪಗಳ ತಯಾರಿ ಅಂತಿಮಗೊಳ್ಳುತ್ತಿದೆ. ರಾತ್ರಿಯಿಡೀ ಅಸುರರ ಅಟ್ಟಹಾಸ... ದೇವಾನುದೇವತೆಗಳಿಂದ ಈ ಅಟ್ಟಹಾಸವನ್ನು ಹತ್ತಿಕ್ಕುವ ಸನ್ನಿವೇಶ ರಂಗು ರಂಗಿನ ವಿದ್ಯುತ್ ಅಲಂಕಾರ ಕಲಾಕೃತಿಗಳ ಮೂಲಕ ಮಂಜಿನ ನಗರಿಗೆ ಹೊಸ ಕಳೆ ಮೂಡಿಸಲಿದೆ.

ಇರುಳನ್ನು ಬೆಳಗಾಗಿಸುವ ಮಡಿಕೇರಿಯ ದಸರಾ ಸವಿಯನ್ನು ಅನುಭವಿಸಲು ಈಗಾಗಲೇ ಸಾವಿರಾರು ಮಂದಿ ನಗರದಲ್ಲಿ ಬೀಡುಬಿಟ್ಟಿದ್ದಾರೆ. ನಗರ ವ್ಯಾಪ್ತಿಯ ಹಾಗೂ ಸನಿಹದ ಎಲ್ಲಾ ವಸತಿಗೃಹಗಳು, ಹೋಂಸ್ಟೇ, ರೆಸಾರ್ಟ್‍ಗಳು ಪ್ರವಾಸಿಗರಿಂದ ತುಂಬಿವೆ. ಜನಜಂಗುಳಿ, ವಾಹನ ದಟ್ಟಣೆ ಅಧಿಕಗೊಂಡಿದ್ದು, ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ.

ನಗರದಲ್ಲಿ ವಿವಿಧ ರೀತಿಯ ಅಂಗಡಿ ಮಳಿಗೆಗಳು, ತಲೆ ಎತ್ತಿವೆ. ಇಡಿ ನಗರ ವಿದ್ಯುತ್ ಅಲಂಕೃತಗೊಂಡಿದ್ದು, ನಗರ ಜಗಮಗಿಸುತ್ತಿದೆ. ವ್ಯಾಪಾರಿಗಳಿಗೆ, ದಸರಾ ವೀಕ್ಷಣೆಗೆ ಆಗಮಿಸುವವರಿಗೆ ಮಳೆ ಒಂದಷ್ಟು ಅಡ್ಡಿಪಡಿಸುತ್ತಿದೆಯಾದರೂ ಉತ್ಸಾಹಕ್ಕೆ ಕೊರತೆ ಕಾಣುತ್ತಿಲ್ಲ. ದಸರಾದ ಯಶಸ್ಸಿಗೆ ದಸರಾ ಸಮಿತಿ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುತ್ತಿದ್ದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಜಿಲ್ಲಾಡಳಿತವೂ ಅಗತ್ಯ ವ್ಯವಸ್ಥೆ ಮಾಡಿಕೊಂಡಿದೆ.

ಗೋಣಿಕೊಪ್ಪಲು ದಸರಾ ಆಚರಣೆಗೂ ಸಕಲ ಸಿದ್ಧತೆಗಳು ನಡೆದಿವೆ. ಮಡಿಕೇರಿಯಂತೆ ಗೋಣಿಕೊಪ್ಪಲು ಪಟ್ಟಣವೂ ಕಂಗೊಳಿಸುತ್ತಿದ್ದು, ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.

ಮಡಿಕೇರಿ ದಸರಾ ಜನೋತ್ಸವ ಹಾಗೂ ಗೋಣಿಕೊಪ್ಪಲು ದಸರಾ ಭದ್ರ್ರತೆಗಾಗಿ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಎರಡೂ ಕಡೆಗಳಲ್ಲೂ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು, ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ವರುಣನ ಭೀತಿ ಒಂದೆಡೆಯಿದ್ದರೂ ದಸರಾದ ಸಂಭ್ರಮ ಈ ಹಿಂದಿನ ವರ್ಷಗಳಂತೆ ಆಚರಿಸಲ್ಪಡುವ ನಿರೀಕ್ಷೆಯಿದೆ.