ಸಿದ್ದಾಪುರ, ಅ. 1: ಸರಕಾರಿ ಆಸ್ಪತ್ರೆಯ ವೈದ್ಯರ ವರ್ಗಾವಣೆಗೆ ಡಿ.ವೈ.ಎಫ್.ಐ. ವಿರೋಧ ವ್ಯಕ್ತಪಡಿಸಿದ್ದು, ಅ.4 ರಂದು ನಡೆಯುವ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಅನಿಲ್ ಕುಟ್ಟಪ್ಪ, ಸಿದ್ದಾಪುರ ವ್ಯಾಪ್ತಿಯಲ್ಲಿ ಬಹುತೇಕ ಕೂಲಿ ಕಾರ್ಮಿಕರೇ ಇದ್ದು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏಕೈಕ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಇರುವ ಒಬ್ಬ ವೈದ್ಯರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದ್ದು, ವೈದ್ಯರ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದರು. ವೈದ್ಯರ ವರ್ಗಾವಣೆಯನ್ನು ಖಂಡಿಸಿ ಸಿ.ಪಿ.ಐ.ಎಂ ತಾ. 4 ರಂದು ಆಸ್ಪತ್ರೆಯ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಪ್ರತಿಭಟನೆಗೆ ಡಿ.ವೈ.ಎಫ್.ಐ. ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಸಂಘಟನೆಯ ಸಂಚಾಲಕ ಮಹಮ್ಮದ್ ಮನ್ಸೂರ್ ಮಾತನಾಡಿ, ಹಲವಾರು ಸಮಸ್ಯೆಗಳಿರುವ ಆಸ್ಪತ್ರೆಯಲ್ಲಿ ಏಕೈಕ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಸಿದ್ದಾಪುರಕ್ಕೆ ಹೆಚ್ಚು ವೈದ್ಯರನ್ನು ನೇಮಕ ಮಾಡಬೇಕೆಂದು ಪ್ರತಿಭಟನೆ ನಡೆಸಿದರೂ ಈ ವರೆಗೂ ನೇಮಕ ಮಾಡದೆ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಎನ್. ಮಂಜು, ಸೀತಾರಾಂ ಇದ್ದರು.