ಮಡಿಕೇರಿ, ಅ. 1: ಉತ್ತಮ ಗುಣಮಟ್ಟದ ಕೊಡಗಿನ ಕಾಫಿಯನ್ನು ಎಲ್ಲೆಡೆ ಪ್ರಚಾರಪಡಿಸುವ ನಿಟ್ಟಿನಲ್ಲಿ ಕಾಫಿ ಜಾಗೃತಿ ಅಭಿಯಾನದ ಮೂಲಕ ಕಾಫಿ ಉದ್ಯಮದ ರಕ್ಷಣೆಗೆ ಮುಂದಾಗಿರುವ ಕೊಡಗಿನ ಮಹಿಳಾ ಸಂಘಟನೆ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಶ್ಲಾಘಿಸಿದ್ದಾರೆ.

ಕೊಡಗಿನ ಪ್ರವಾಸಿ ತಾಣ ದುಬಾರೆಯಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದಿಂದ ಆಯೋಜಿತ ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ, ಕೊಡಗಿನಲ್ಲಿ ಪ್ರವಾಸೋದ್ಯಮ ಮತ್ತು ಕಾಫಿ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದೆ. ಹೀಗಿರುವಾಗ ಕೊಡಗಿನಲ್ಲಿ ಉತ್ಕøಷ್ಟ ದರ್ಜೆಯ ಕಾಫಿ ತಯಾರಾಗಬೇಕು. ಮನೆಗಳಿಗೆ ಬರುವವರಿಗೆ ಸ್ವಾದಿಷ್ಟ ಕಾಫಿ ದೊರಕಿದ್ದೇ ಆದಲ್ಲಿ ಕೊಡಗಿನ ಕಾಫಿಗೆ ಮತ್ತಷ್ಟು ಬೇಡಿಕೆ ಖಂಡಿತಾ ಎಂದು ಅಭಿಪ್ರಾಯಪಟ್ಟರಲ್ಲದೇ, ಜಿಲ್ಲೆಯ ಗ್ರಾಮೀಣ ಪ್ರದೇಶಗಳ ರಸ್ತೆ ಬದಿಗಳಲ್ಲಿಯೂ ಸ್ವಾದಿಷ್ಟ ಕಾಫಿ ದೊರಕುವ ನಿಟ್ಟಿನಲ್ಲಿ ವ್ಯವಸ್ಥೆಗಳಾಗಬೇಕೆಂದು ಸಲಹೆ ನೀಡಿದರು.

ಕರ್ನಾಟಕದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಸಮೃದ್ಧ ಜಿಲ್ಲೆ ಎಂಬ ಹೆಗ್ಗಳಿಕೆಗೆ ಕೊಡಗು ಪಾತ್ರವಾಗಲು ಇಲ್ಲಿನ ಕಾಫಿ ಉದ್ಯಮವೂ ಪ್ರಮುಖ ಕಾರಣವಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಸಣ್ಣ ಉದ್ಯಮವಾಗಿಯೂ ಕಾಫಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಗಮನ ಹರಿಸಿ ಎಂದು ಕರೆ ನೀಡಿದರು. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಮಾತನಾಡಿ, ಮರಗಳನ್ನು ಕಡಿದು ಕಾಫಿ ಬೆಳೆಯುವ ಪ್ರಯತ್ನಕ್ಕೆ ಕೊಡಗಿನ ಕಾಫಿ ಬೆಳೆಗಾರರು ಪೆÇ್ರೀತ್ಸಾಹ ನೀಡಬಾರದು. ಕೊಡಗಿನಲ್ಲಿರುವ ಅಪೂರ್ವ ಜೀವವೈವಿದ್ಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಉತ್ತಮ ಕಾಫಿ ಬೆಳೆಯುವ ನಿಟ್ಟಿನಲ್ಲಿ ಬೆಳೆಗಾರರು ಮುಂದಾಗಬೇಕೆಂದು ಸಲಹೆ ನೀಡಿದರು. ಕೊಡಗಿನ ಮುಖ್ಯ ವಾಣಿಜ್ಯ ಬೆಳೆಯಾದ ಕಾಫಿಯೊಂದಿಗೇ ಇಲ್ಲಿನ ಮೌಲ್ಯಯುತ ನಿಸರ್ಗ ಸಂಪತ್ತನ್ನು ಸಂರಕ್ಷಿಸುವ ಮಹತ್ವದ ಹೊಣೆಗಾರಿಕೆ ಕಾಫಿ ಬೆಳೆಗಾರರಿಗಿದೆ ಎಂದು ಹೇಳಿದ ಸೂರ್ಯಸೇನ್, 3 ವರ್ಷದಿಂದ ಕೊಡಗಿಗೆ ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿಯಿದೆ. ಬರಪೀಡಿತ ಜಿಲ್ಲೆ ಎನಿಸಿಕೊಳ್ಳದೆ ಇರಲು ಕೊಡಗಿನಲ್ಲಿ ಪ್ರಕೃತಿ ಸಂರಕ್ಷಣೆಯೊಂದಿಗೆ ನೀರಿನ ಸಂರಕ್ಷಣೆಯೂ ಅತ್ಯಂತ ಮುಖ್ಯ ಎಂದರು.

ಕೊಡಗಿಗೆ ರೈಲ್ವೇ ಮಾರ್ಗ, ವಿದ್ಯುತ್ ತಂತಿ ಮಾರ್ಗದಂತ ಯೋಜನೆಗಳು ಬಂದಲ್ಲಿ ಖಂಡಿತಾ ಪ್ರಕೃತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ ಸೂರ್ಯಸೇನ್, ಜಿಲ್ಲೆಯಲ್ಲಿ ಮರಕಡಿತಲೆಗೆ ಸಾವಿರಾರು ಅರ್ಜಿಗಳು ಪ್ರತೀ ವರ್ಷ ಬರುತ್ತಿರುವದು ಕಳವಳಕಾರಿಯಾಗಿದ್ದು, ಆರ್ಥಿಕ ಸಂಕಷ್ಟ ನಿವಾರಣೆ ನಿಟ್ಟಿನಲ್ಲಿ, ಟಿಂಬರ್ ಲಾಭಿಗೆ ಮಣಿದು ಅಮೂಲ್ಯವಾದ ಮರಗಳನ್ನು ಅತೀ ಕಡಿಮೆ ಬೆಲೆಗೆ ಮಾರಾಟ ಮಾಡುವ ಚಿಂತನೆಯನ್ನೂ ಜಿಲ್ಲೆಯ ಬೆಳೆಗಾರರು ಬಿಡಬೇಕೆಂದು ಮನವಿ ಮಾಡಿದರು. ಅಪ್ಪಂಗಳದಲ್ಲಿನ ಕೇಂದ್ರೀಯ ಸಂಬಾರ ಮಂಡಳಿಯ ಮುಖ್ಯಸ್ಥ ಡಾ. ಅಂಕೇಗೌಡ ಮಾತನಾಡಿ, ಚಿಕೋರಿ ರಹಿತ ಕಾಫಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಪಿ. ಚಿತ್ರಾ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದ, ಖಜಾಂಚಿ ಭಾವನಾ ಪ್ರವೀಣ್, ಜಂಟಿ ಕಾರ್ಯದರ್ಶಿ ಜ್ಯುತಿಕಾ, ಹಿರಿಯರಾದ ಪಟ್ಟಡ ರಾಣು ಮಾದಪ್ಪ, ಕರ್ನಾಟಕ ಬೆಳೆಗಾರರ ಒಕ್ಕೂಟದ ಜಿಲ್ಲಾಧ್ಯಕ್ಷ ನಂದಿನೆರವಂಡ ದಿನೇಶ್, ಕಾರ್ಯದರ್ಶಿ ಶಿವಶಂಕರ್, ಸಂಘಟನಾ ಕಾರ್ಯದರ್ಶಿ ಚೆಪ್ಪುಡೀರ ಸತೀಶ್ ಸೇರಿದಂತೆ ಸಂಘದ ವಿವಿಧ ವಲಯಗಳ ಅಧ್ಯಕ್ಷರು. ಪದಾಧಿಕಾರಿಗಳು, ಸದಸ್ಯೆಯರು ಪಾಲ್ಗೊಂಡಿದ್ದರು.