ಸೆಪ್ಟೆಂಬರ್ 30 ಆಕೆ ಈ ಭೂಮಿಯಲ್ಲಿ ತನ್ನ 63ನೇ ವರುಷ ಕಳೆದ ಮಧ್ಯ ರಾತ್ರಿಯಲ್ಲಿ ಅದು ಏನೆನೆಲ್ಲಾ ನೆನಸಿಕೊಂಡು ಕಣ್ಣು ಮುಚ್ಚಿದಳೋ ಗೊತ್ತಿಲ್ಲ.
2003 ಜುಲೈ ತಿಂಗಳ ಮಧ್ಯ ರಾತ್ರಿಯಲ್ಲಿ ಮಡಿಕೇರಿಗೆ ಕಾಲಿಟ್ಟವಳು ಅವಳು. ಬೇಕೂಬೇಡದಂತಿದ್ದ ಮಡಿಕೇರಿ ಆಕಾಶವಾಣಿಗೆ ಕಳೆ ತುಂಬಿದವಳು ಅವಳು.
ಇಂದಿರಾ ಏಸುಪ್ರಿಯ ಗಜರಾಜ್ ಎಂಬ ಮಾರುದ್ಧದ ಹೆಸರಿನ ಅವಳು ಬರೋಬ್ಬರಿ ಆರು ಅಡಿ ಎತ್ತರ. ಬಟ್ಟಲಗಲ ಹಣೆಯಲ್ಲಿ ಕುಂಕುಮದಾರಿತೆಯಾಗಿದ್ದಳು.
ಮಡಿಕೇರಿಗೆ ಕಾಲಿರಿಸಿದ ‘ಇಂದಿರ’ ಇಲ್ಲಿಯ ಮಳೆ - ಚಳಿಗೆ ಬೆಚ್ಚಿಬಿದ್ದದೂ ಹೌದು. ನಂತರ ಸುಧಾರಿಸಿಕೊಂಡವಳು ಇಲ್ಲಿಯೇ ಬೆಚ್ಚನೆಯ ಮನೆಯ ಮಾಡಿಕೊಂಡು ನಿವೃತ್ತ ಜೀವನ ನಡೆಸುವ ತೀರ್ಮಾನವನ್ನು ತೆಗೆದುಕೊಳ್ಳುತ್ತಾಳೆ. ಹಾಗಾಗಿ ಕೊಡಗಿನ ಕಡಗದಾಳು ಗ್ರಾಮದಲ್ಲಿ ಒಂದಷ್ಟು ಅಗಲದ ಭೂಮಿಯನ್ನು ಕೊಂಡುಕೊಂಡು ಇದೀಗ ಕೊಡಗಿನವಳೇ ಆಗಿ... ಆಗಿ ಹೋದಳು ಕೂಡ.
2003 ರಿಂದ 2005 ರವರೆಗೆ ಕೊಡಗಿನ ಮಿಡಿತಗಳನ್ನು ಕರಗತ ಮಾಡಿಕೊಂಡ ನಂತರ 2005 ರಲ್ಲಿ ಕೊಡವ ಭಾಷೆಯಲ್ಲಿ ಸುದ್ದಿ ಸಮಾಚಾರವನ್ನು ಪ್ರಸಾರ ಮಾಡುವದರ ಮೂಲಕ ಕೊಡಗಿನ ಕುಗ್ರಾಮಗಳಿಗೂ ಬೆಳ್ಳಂಬೆಳಗ್ಗೆ 7.30 ಹಾಗೂ ಸಂಜೆ 7.30 ಕ್ಕೆ ಕೊಡವ ಭಾಷೆಯ ಸುದ್ದಿಗಳ ಅಗತ್ಯ ಮಾಹಿತಿಗಳನ್ನು ತಲಪಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಇತಿಹಾಸ.
ಕೊಡಗಿನಲ್ಲಿ ಸಾವಿಗೆ ಬಹಳ ಪ್ರಾಮುಖ್ಯತೆ ಇದೆ. ಇದನ್ನರಿತುಕೊಂಡ ಇಂದಿರ ಏಸುಪ್ರಿಯ ಗಜರಾಜ್ 2006ನೇ ಇಸವಿಯಲ್ಲಿ ನಿದಾನವಾಗಿ ಸಾವಿನ ಸುದ್ದಿಗಳನ್ನು ಭಿತ್ತರಿಸತೊಡಗಿದಳು.
ಸುದ್ದಿ ಸಮಾಚಾರ ಕೇಳಿಸಿಕೊಳ್ಳುವದಕ್ಕಿಂತ ಸಾವಿನ ಸುದ್ದಿ ಇದೀಗ ಸೇವಾ ಮಾಹಿತಿಗಳನ್ನು ಕಿವಿ ನಿಮಿರಿಸಿಕೊಂಡು ಕೇಳುವವರ ಸಂಖ್ಯೆ ತನ್ನಷ್ಟಕ್ಕೆ ಹೆಚ್ಚಾಯಿತು. ಹಾಗಾಗಿ 1993 ರಲ್ಲಿ ಪ್ರಾರಂಭಗೊಂಡು ತನ್ನಷ್ಟಕ್ಕೆ ಆಕಾಶದಲ್ಲಿ ಕೇಳುಗರೇ ಇಲ್ಲದ ಮಡಿಕೇರಿ ಆಕಾಶವಾಣಿ ಕೊಡಗು, ಅರಕಲಗೂಡು, ಸುಳ್ಯ, ಪುತ್ತೂರು, ಕಾಸರಗೋಡು ಮುಂತಾದ ಕಡೆಗಳಲ್ಲಿ 2005 - 2006 ರ ನಂತರ ಮಿಂಚಿನ ಸಂಚಾರವನ್ನು ಮೂಡಿಸಿದೆ.
ಬಾಸ್ಕರ ಏಸುಪ್ರಿಯ ಹಾಗೂ ಎಲಿಸ್ ದಂಪತಿಗಳಿಗೆ ಜನಿಸಿದ ಈ ‘ಲಂಬೂ ಲೇಡಿಗೆ’ ತನ್ನ 18ನೇ ಪ್ರಾಯದಲ್ಲಿ ಪಿತ್ರವಿಯೋಗದ ಅನುಭವ. ಬಾಸ್ಕರ ಏಸುಪ್ರಿಯ ಮೂಲತಃ ಮಂಗಳೂರು ಮೂಲದ ಬೆಸ್ತ ಕೃಷಿಕ. ಆತನ ಪೂರ್ವಿಕರು ಬಾಲ್ಯದಲ್ಲಿ ಕ್ರೈಸ್ತ ಧರ್ಮವನ್ನು ಅವಲಂಭಿಸಿ ವಿದ್ಯಾಭ್ಯಾಸ ಮುಗಿಸಿ ಆಲ್ ಇಂಡಿಯಾ ರೇಡಿಯೋದಲ್ಲಿ ಕೆಲಸ ಒದಗಿಸಿ ಕೊಳ್ಳುತ್ತಾಳೆ.
1965 ರಲ್ಲಿ ಬಾಸ್ಕರ ಏಸುಪ್ರಿಯನ ಅಚಾನಕ್ ಮರಣದ ಸಂದರ್ಭ ಏಸುಪ್ರಿಯ ಇಂದಿರಾ ಗಜರಾಜಳಿಗೆ ಕೇವಲ 18 ವರುಷ. ಅಂದಿನ ಭಾರತದ ಪ್ರಧಾನಿ ಜವಹರ ಲಾಲ್ ನೆಹರೂ ತಾನೇ ಸ್ವತಃ ಕೈಯಾರ ಬರೆದ ಪತ್ರದ ಮೂಲಕ ತಂದೆ ಬಾಸ್ಕರ ಏಸುಪ್ರಿಯರ ಕೆಲಸವನ್ನು ಈಕೆಗೆ ವರ್ಗಾಯಿಸಿಕೊಡುತ್ತಾರೆ.
ದೆಹಲಿಯ ಆಕಾಶವಾಣಿಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಈಕೆ ನವ ಪ್ರಪಂಚದತ್ತ ಕಣ್ಣರಳಿಸಿಕೊಂಡು ‘ಸಮುದಾಯ’ ಸಮೂಹದೊಡನೆ ಜತೆ ಗೂಡಿಕೊಂಡು ನೂರಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಅನುಭವವನ್ನು ಆಧಾರಿಸಿಕೊಂಡೇ ಆಕಾಶವಾಣಿಯಲ್ಲಿ ಆದಷ್ಟು ಜನಪರ ಕಾರ್ಯಕ್ರಮಗಳನ್ನು ಜನಮನ ತಟ್ಟುವ ರೀತಿಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗುತ್ತಾಳೆ ಕೂಡ.
ಹಾಗಾಗಿಯೇ ಭಾರತ ಆಕಾಶವಾಣಿಯಲ್ಲಿ ಈಕೆಯ ಹೆಸರು ಪ್ರತೀ ಆಕಾಶವಾಣಿ ಕೇಂದ್ರದಲ್ಲಿ ‘ಇಂದೂ’ ಎಂದೇ ಪ್ರಸಿದ್ಧವಾಗಿದೆ. ಆಕೆ ಒಂದು ಆಕ್ಟೋಪಸ್ ಇದ್ದಂತೆ. ಭಾರತವಲ್ಲದೆ ಪ್ರಪಂಚದ ಉದ್ದಗಲದಲ್ಲಿ ಬಹಳಷ್ಟು ಜನಪರ ಕಾರ್ಯಕರ್ತರ ಸಂಪರ್ಕವಿದ್ದಂತ ಅದ್ಭುತ ಮಹಿಳೆ ಈಕೆ.
ಬಾಹ್ಯಾಕಾಶದಿಂದ ಮರಳಿ ಮಣ್ಣಿಗೆ ಮರಳಲಾರದಂತಹ ಕಲ್ಪನಾ ಚಾವ್ಲ ಜತೆ ಕೂಡ ಈಕೆಯ ಸಂಪರ್ಕವಿತ್ತು. ಆಕೆ ಅದೊಂತರ ಅನ್ನದಾತೆ, ಪ್ರಾಣಿ ಪ್ರಿಯೆ. ಅದಕ್ಕಿಂತ ಮಿಗಿಲಾಗಿ ಮನುಷ್ಯ ಪ್ರಿಯೆ. ಬಟ್ಟಲಗಲದ ಕುಂಕುಮ ಇಟ್ಟುಕೊಂಡು ಬಾಯಗಲ ನಗೆ ತೋರಿಸುತ್ತಿದ್ದ ಅವಳು ಅದೆಷ್ಟು ಅನಾಥರಿಗೆ ಅಂಗೈಯಲ್ಲಿ ಯಾರ ಅರಿವಿಗೂ ಬರದಂತೆ ಕೊಟ್ಟದ್ದು ಆಕೆಯ ಅಂಗೈ ರೇಖೆಗಳಿಗೂ ಗೊತ್ತಿಲ್ಲ. ಹಾಗಿದ್ದೂ ಕೊಡಗಿಗೆ ಆಕೆ ನೀಡಿದ ಆಕೆಯದೇ ಆದ ಕಾಣಿಕೆಗಳನ್ನು ತಿರುಚಿ ಲೇಖನಿಗಳ ಮಸಿಗಳನ್ನು ಮಿಗಿಸಿದವರೂ ಇದ್ದಾರೆ. ಅದಕ್ಕೆ ಸಾಕ್ಷಿಯಾಗಿ ಆಕೆಯ ಹುಟ್ಟಿದ ದಿನವೇ ಆದ ಸೆಪ್ಟೆಂಬರ್ 30 ರ ಮಧ್ಯರಾತ್ರಿಯ ಕಂಬನಿ ಮಿಡಿದುಕೊಂಡವು.
ವಿಶೇಷವಾಗಿ ಅನಾಥ ಬಾಲಕರ ಮಂದಿರದ ಮಕ್ಕಳು ಮತ್ತು ಅವರ ಶುಶ್ರೂಕಿ ಜತೆಗೂಡಿ ಕಣ್ಣೀರನ್ನು ಹರಿಸಿದ್ದು ಆಕೆಯ ಮನುಷ್ಯ ಪ್ರೇಮಕ್ಕೆ ಸಾಕ್ಷಿಯಾಗಿತ್ತು. ಮಾನವಪ್ರಿಯೆ ಏಸುಪ್ರಿಯ ಇಂದಿರಾ ಗಜರಾಜ್ ವಿರುದ್ಧ ಕೆಲವು ಮನುಷ್ಯ ವಿರೋಧಿ ಮನಸ್ಸುಗಳು ಅವಹೇಳನ ಆರೋಪ ಮಾಡಿದ್ದೂ ಕೂಡ ಇದೆ.
ಆದರೆ ಆಕೆಯ ಕೊನೆ ದಿನದ ನಂತರ ಆಕೆಯ ದೇಹವನ್ನೂ ಕೂಡ ಮಾನವ ಅನುಕೂಲತೆಗಾಗಿ ಆಸ್ಪತ್ರೆಗೆ ದಾನ ಮಾಡಿ ಮತ್ತಷ್ಟು ಸಾಮಾಜಿಕ ಕಳಕಳಿಯ ಪ್ರತ್ಯಕ್ಷತೆಗೂ ಸಾಕ್ಷಿಯಾಗಿ ಹೋಗಿದ್ದಾಳೆ.
ಮಡಿಕೇರಿ ಆಕಾಶವಾಣಿಯಲ್ಲಿ ಸುದ್ದಿ ಸಮಾಚಾರ, ಸುದ್ದಿ ಜೊಂಪೆ, ಬ್ಯಾರಿ ಸುದ್ದಿ ಜತೆಯಲ್ಲಿ ಸಾವಿನ ಸುದ್ದಿ ಇದೀಗ - ಸೇವಾ ಮಾಹಿತಿ ನೀಡಲು ಕಾರಣಕರ್ತಳಾದವಳು ಕೊಡಗಿನ ಮಣ್ಣಿನಲ್ಲೇ ಶಾಶ್ವತವಾಗಿ ಉಳಿಯಬೇಕೆಂಬ ಕನಸ್ಸು ಕಟ್ಟಿಕೊಂಡವಳು ಇದೀಗ ‘ಸೇವಾ ಮಾಹಿತಿ’ಯಲ್ಲಿ ತನ್ನ ಕೊನೇ ದಿನದ ಪ್ರಕಟಣೆ ಮಾಡಿಸಿಕೊಂಡದ್ದು ಆಕೆಯ ಅಭಿಮಾನಿಗಳಿಗೆ ದಿಗ್ಭ್ರಮೆ ಮೂಡಿಸಿತ್ತು.
ಹಾಗೆಯೇ ಸೇವಾ ಮಾಹಿತಿಗೆ ಮುನ್ನುಡಿ ಬರೆದವಳು ಸೇವಾ ಮಾಹಿತಿ ಪ್ರಕಟಣೆಯೊಂದಿಗೇ ಕಣ್ಮರೆಯಾದದ್ದು ದುರಂತ. ಆಕೆಯ ಆತ್ಮಕ್ಕೆ ಅದೆಷ್ಟೋ ಪ್ರೀತಿಯ ಮನಸ್ಸುಗಳು ಶಾಂತಿಯನ್ನು ಕೋರಿವೆ.
- ಅಲ್ಲಾರಂಡ ವಿಠಲ ನಂಜಪ್ಪ,
ಮೊ. 9448312310