ಕುಶಾಲನಗರ, ಸೆ 29: 2012ರ ಬಜೆಟ್‍ನಲ್ಲಿ ಅನುಮೋದನೆಗೊಂಡ ಮೈಸೂರು- ಕುಶಾಲನಗರ- ಮಡಿಕೇರಿ ನೂತನ ರೈಲ್ವೇ ಯೋಜನೆಗೆ ಅಂದಾಜು ರೂ 1818.10 ಕೋಟಿ ವೆಚ್ಚ ನಿಗದಿಪಡಿಸಲಾಗಿದೆ ಎಂದು ದಕ್ಷಿಣ ನೈರುತ್ಯ ರೈಲ್ವೇ ವಿಭಾಗ ಸ್ಪಷ್ಟಪಡಿಸಿದೆ. ಪ್ರಾಥಮಿಕ ಸರ್ವೆ ಕಾರ್ಯ ಸಂಪೂರ್ಣಗೊಂಡಿದ್ದು ಯೋಜನೆಗೆ ಅವಶ್ಯಕತೆಯುಳ್ಳ ಭೂಮಿಯ ಸ್ವಾಧೀನ ಕಾರ್ಯವನ್ನು ರಾಜ್ಯ ಸರಕಾರ ಕೈಗೊಳ್ಳಬೇಕಾಗಿದೆ ಎಂದು ತಿಳಿದುಬಂದಿದೆ.ಮಾಹಿತಿ ಹಕ್ಕು ಕಾಯಿದೆ ಅನ್ವಯ ರೈಲ್ವೇ ಇಲಾಖೆ ಖಚಿತ ವಿವರ ಒದಗಿಸಿದ್ದು ಮೈಸೂರಿನಿಂದ ಮಡಿಕೇರಿಯ ತನಕ ರೈಲ್ವೇ ಯೋಜನೆ ಇದಾಗಿದ್ದು ಮಡಿಕೇರಿ ಪಟ್ಟಣದ 3.5 ಕಿಮೀ ದೂರದ ಮಕ್ಕಂದೂರು ತನಕ ರೈಲ್ವೇ ಕಾಮಗಾರಿಗೆ ಸರ್ವೆ ನಡೆದಿದೆ. ವರದಿ-ಚಂದ್ರಮೋಹನ್

ಕುಶಾಲನಗರ, ಸೆ 29: 2012ರ ಬಜೆಟ್‍ನಲ್ಲಿ ಅನುಮೋದನೆಗೊಂಡ ಮೈಸೂರು- ಕುಶಾಲನಗರ- ಮಡಿಕೇರಿ ನೂತನ ರೈಲ್ವೇ ಯೋಜನೆಗೆ ಅಂದಾಜು ರೂ 1818.10 ಕೋಟಿ ವೆಚ್ಚ ನಿಗದಿಪಡಿಸಲಾಗಿದೆ ಎಂದು ದಕ್ಷಿಣ ನೈರುತ್ಯ ರೈಲ್ವೇ ವಿಭಾಗ ಸ್ಪಷ್ಟಪಡಿಸಿದೆ. ಪ್ರಾಥಮಿಕ ಸರ್ವೆ ಕಾರ್ಯ ಸಂಪೂರ್ಣಗೊಂಡಿದ್ದು ಯೋಜನೆಗೆ ಅವಶ್ಯಕತೆಯುಳ್ಳ ಭೂಮಿಯ ಸ್ವಾಧೀನ ಕಾರ್ಯವನ್ನು ರಾಜ್ಯ ಸರಕಾರ ಕೈಗೊಳ್ಳಬೇಕಾಗಿದೆ ಎಂದು ತಿಳಿದುಬಂದಿದೆ.

ಮಾಹಿತಿ ಹಕ್ಕು ಕಾಯಿದೆ ಅನ್ವಯ ರೈಲ್ವೇ ಇಲಾಖೆ ಖಚಿತ ವಿವರ ಒದಗಿಸಿದ್ದು ಮೈಸೂರಿನಿಂದ ಮಡಿಕೇರಿಯ ತನಕ ರೈಲ್ವೇ ಯೋಜನೆ ಇದಾಗಿದ್ದು ಮಡಿಕೇರಿ ಪಟ್ಟಣದ 3.5 ಕಿಮೀ ದೂರದ ಮಕ್ಕಂದೂರು ತನಕ ರೈಲ್ವೇ ಕಾಮಗಾರಿಗೆ ಸರ್ವೆ ನಡೆದಿದೆ. (ಮೊದಲ ಪುಟದಿಂದ) ದುಬಾರೆ ಮೀಸಲು ಅರಣ್ಯದ ಭಾಗವನ್ನು ಆಕ್ರಮಿಸಲಿದ್ದು ಅಲ್ಲಿನ 1.2 ಕಿಮೀ ಉದ್ದದ ತನಕ ಸುರಂಗ ಮಾರ್ಗ ನಿರ್ಮಾಣಗೊಳ್ಳಲಿದೆ. ಈ ಬಗ್ಗೆ ಅರಣ್ಯ ಇಲಾಖೆಯೊಂದಿಗೆ ರೈಲ್ವೇ ಇಲಾಖೆ ಚರ್ಚೆ ನಡೆಸಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರವಹಿಸಲಾಗುವದು. ವಿಶೇಷ ಸರ್ವೆ ಕಾರ್ಯ ನಡೆಸುವದರೊಂದಿಗೆ ಯಾವದೇ ಮರ ಗಿಡಗಳು ಹಾನಿಯಾದಲ್ಲಿ ಯೋಜನೆಯ ಮೂಲಕ ಗಿಡಮರ ನೆಡುವ ಕಾರ್ಯಕ್ರಮಗಳು ಅನುಷ್ಠಾನ ಗೊಳ್ಳಲಿದೆ ಎಂದು ಮಾಹಿತಿ ಹಕ್ಕು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಯಾವದೇ ಸಂದರ್ಭ ನದಿ ತಟದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳ ದಂತೆ ಎಚ್ಚರವಹಿಸ ಲಾಗುವದು ಎಂದು ದಕ್ಷಿಣ ನೈರುತ್ಯ ರೈಲ್ವೇ ವಿಭಾಗದ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.

ಇನ್ನೊಂದೆಡೆ ತಲಚೇರಿಯಿಂದ ಮೈಸೂರು ರೈಲ್ವೇ ಯೋಜನೆ ಯೊಂದರ ಬಗ್ಗೆ ಕೇರಳ ಸರಕಾರ ಆಸಕ್ತಿ ವಹಿಸಿದ್ದು ಕೇಂದ್ರ ಸರಕಾರದ ಬಳಿ ನಿಯೋಗ ತೆರಳಿದೆ. ಈ ಮಾರ್ಗ ಜಿಲ್ಲೆಯ ವೀರಾಜಪೇಟೆ ಮೂಲಕ ಹಾದು ಹೋಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ತಲಚೇರಿಯಿಂದ ಇರಿಟ್ಟಿ, ವೀರಾಜಪೇಟೆ ನಡುವೆ 193.5 ಕಿಮೀ ಮಾರ್ಗ ಮೈಸೂರಿಗೆ ತಲುಪಲಿದೆ. ವೀರಾಜಪೇಟೆ ವ್ಯಾಪ್ತಿಯಲ್ಲಿ 5 ಕಿಮೀ ಮೀಸಲು ಅರಣ್ಯದ ಮೂಲಕ ರೈಲ್ವೇ ಮಾರ್ಗ ನಿರ್ಮಾಣಗೊಳ್ಳಲಿದೆ.

ತಲಚೇರಿ ಮೈಸೂರು ರೈಲ್ವೇ ಯೋಜನೆಗೆ ಕೇಂದ್ರ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಈ ಬಗ್ಗೆ ಸರ್ವೆ ಕಾರ್ಯ ನಡೆದಿದ್ದು ಈಗಾಗಲೆ ರೂ 50 ಲಕ್ಷ ವ್ಯಯಿಸ ಲಾಗಿದೆ. ಪ್ರಸಕ್ತ ಬೆಂಗಳೂರಿನಿಂದ ಕಣ್ಣೂರಿಗೆ ರೈಲ್ವೇ ಮಾರ್ಗ ಕ್ರಮಿಸಲು 708 ಕಿಮೀ ಸಂಚರಿಸಬೇಕಾಗಿದ್ದು ಈ ಮಾರ್ಗದ ಮೂಲಕ 339 ಕಿಮೀ ಅಂತರಕ್ಕೆ ಇಳಿಯಲಿದೆ ಎಂದು ರೈಲ್ವೇ ಇಲಾಖೆ ವರದಿಯಲ್ಲಿ ಸ್ಪಷ್ಟಗೊಂಡಿದೆ. ಕಳೆದ 6 ದಶಕಗಳಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದ್ದು ಇದೀಗ ಕಣ್ಣೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಯೋಜನೆ ಮತ್ತೆ ಮರುಜೀವ ಪಡೆದುಕೊಂಡಿದೆ.

ಕೇರಳ ಸರಕಾರದ ಮುಂದೆ ಎರಡು ರೈಲ್ವೇ ಯೋಜನೆಗಳಿದ್ದು ಈ ಪ್ರಕಾರ 247.05 ಕಿಮೀ ಉದ್ದದ ತಲಚೇರಿ ಮೈಸೂರು ವಯನಾಡು ಮೂಲಕದ ಯೋಜನೆಗೆ ರೂ 3,209.01 ಕೋಟಿ ತಗುಲಲಿದೆ. ಇನ್ನೊಂದೆಡೆ ಕೊಡಗು ಮೂಲಕ ಪ್ರಸ್ತಾವನೆಗೊಂಡಿರುವ 298.75 ಕಿಮೀ ರೈಲ್ವೇ ಮಾರ್ಗಕ್ಕೆ 3,778.71 ಕೋಟಿ ವೆಚ್ಚ ತಗುಲಲಿದೆ ಎಂದು ಅಂದಾಜು ಪಟ್ಟಿ ತಯಾರಾಗಿದೆ.

ರೈಲ್ವೇ ಇಲಾಖೆಯ ಪ್ರಸಕ್ತ ಮಾಹಿತಿಯ ಪ್ರಕಾರ ಮೈಸೂರು- ಕುಶಾಲನಗರ- ಮಡಿಕೇರಿ ರೈಲ್ವೇ ಮಾರ್ಗ ಸಂದರ್ಭ ಕುಶಾಲನಗರ, ಜಿಲ್ಲೆಯ ಹೇರೂರು, ಮಕ್ಕಂದೂರು ವ್ಯಾಪ್ತಿಯಲ್ಲಿ ರೈಲ್ವೇ ನಿಲ್ದಾಣಗಳು ತಲೆ ಎತ್ತಲಿವೆ ಎಂದಿರುವ ಕೂರ್ಗ್ ವೈಲ್ಡ್ ಲೈಫ್ ಸಂಚಾಲಕರಾದ ಚೆಪ್ಪುಡಿರ ಮುತ್ತಣ್ಣ ಅವರು ಈ ಮೂಲಕ ಜಿಲ್ಲೆಯ ಪರಿಸರ ಸಂಪೂರ್ಣ ಹಾನಿಯಾಗಲಿದೆ ಎಂದಿದ್ದಾರೆ. ಇನ್ನೊಂದೆಡೆ ತಲಚೇರಿ ಮೈಸೂರು ಸಂಪರ್ಕ ಜಿಲ್ಲೆಯ ಮೂಲಕ ಹಾದು ಹೋದಲ್ಲಿ ವೀರಾಜಪೇಟೆ ಮತ್ತು ಆ ಭಾಗದ ಹೆಬ್ಬಾಲೆ ವ್ಯಾಪ್ತಿಯಲ್ಲಿ ರೈಲ್ವೇ ನಿಲ್ದಾಣಗಳು ತಲೆ ಎತ್ತುವದರೊಂದಿಗೆ ಕೊಡಗು ಜಿಲ್ಲೆಯ ಭೌಗೋಳಿಕ ವ್ಯವಸ್ಥೆಗೆ ಬಹುತೇಕ ಧಕ್ಕೆ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.