ಗೋಣಿಕೊಪ್ಪಲು, ಸೆ. 29: 63 ನೇ ವನ್ಯಜೀವಿ ಸಪ್ತಾಹ ಆಚರಣೆಯ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅರಣ್ಯ, ವನ್ಯಜೀವಿ ಮತ್ತು ಜೀವ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತಾಲೂಕು ಮಟ್ಟದ ಸ್ಪರ್ಧೆಗಳನ್ನು ಸೆಪ್ಟೆಂಬರ್ 3 ಹಾಗೂ 4 ರಂದು ಇಲ್ಲಿನ ಕಾವೇರಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಅಕ್ಟೋಬರ್ 3 ರಂದು ಪ್ರಬಂಧ ಹಾಗೂ ಚಿತ್ರಕಲೆ, ಅ. 4 ರಸಪ್ರಶ್ನೆ ಸ್ಪರ್ಧೆಗಳು ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ.

ಪ್ರಬಂಧ ಸ್ಪರ್ಧೆ: ಅ. 3 ರಂದು ಬೆಳಿಗ್ಗೆ 10.30 ರಿಂದ 11.30 ರವರೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಸಮತೋಲನದಲ್ಲಿ ವನ್ಯ ಜೀವಿಗಳ ಪಾತ್ರ ವಿಷಯದಲ್ಲಿ, ಪದವಿಪೂರ್ವ ವಿದ್ಯಾರ್ಥಿಗಳಿಗೆ ವನ್ಯಜೀವಿಗಳ ಭವಿಷ್ಯ ನಮ್ಮ ಕೈಯಲ್ಲಿದೆ ಎಂಬ ವಿಷಯದಲ್ಲಿ, ಹಾಗೂ ಪದವಿ ವಿದ್ಯಾರ್ಥಿಗಳಿಗೆ ಭೂಮಿಯ ಸೃಷ್ಠಿ ಮಾನವನಿಗಷ್ಟೆ ಅಲ್ಲ ಸಕಲ ಜೀವರಾಶಿಗಳಿಗೂ ಕೂಡ ಎಂಬ ವಿಷಯದಲ್ಲಿ ಪ್ರಬಂಧ ನಡೆಯಲಿದೆ.

ಚಿತ್ರಕಲೆ ಸ್ಪರ್ಧೆ: ಅ. 3 ರಂದು ಬೆಳಿಗ್ಗೆ 10.30 ರಿಂದ 11.30 ರವರೆಗೆ 3 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಕೃತಿ ಮತ್ತು ವನ್ಯ ಜೀವಿ ವಿಷಯದಲ್ಲಿ ನಡೆಯಲಿದೆ.

ರಸಪ್ರಶ್ನೆ ಸ್ಪರ್ಧೆ: ಅ. 4 ರಂದು ಬೆಳಿಗ್ಗೆ 10.30 ಗಂಟೆಗೆ ಆರಂಭವಾಗಲಿದೆ. ಪ್ರೌಢ ಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ವಿಜ್ಞಾನ ವಿಷಯದಲ್ಲಿ ಪ್ರಶ್ನೆ ಕಾರ್ಯಕ್ರಮ ನಡೆಯಲಿದೆ.

ಚಿತ್ರಕಲಾ ಸ್ಪರ್ಧಿಗಳಿಗೆ ಚಿತ್ರ ಹಾಳೆಗಳನ್ನು ಮಾತ್ರ ಇಲಾಖೆ ವತಿಯಿಂದ ನೀಡಲಾಗುವದು. ಆಸಕ್ತ ವಿದ್ಯಾರ್ಥಿಗಳು ಹೆಸರುಗಳನ್ನು ಸ್ಪರ್ಧೆ ನಡೆಯುವ ದಿನ ಬೆಳಿಗ್ಗೆ 10 ರಿಂದ 10.30 ರವರೆಗೆ ನೋಂದಾಯಿಸಬಹುದು ಎಂದು ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತು ರಾಜ ಹೇಳಿಕೆಯಲ್ಲಿ ತಿಳಿಸಿದ್ದಾರೆ.