ಕೂಡಿಗೆ, ಅ. 1: ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಪಂಚಾಯಿತಿ ಅಧ್ಯಕ್ಷ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ನಲ್ಲೂರು ರಸ್ತೆಯ ಬದಿಯಲ್ಲಿ ಇರುವ ವಿದ್ಯುತ್ ಟ್ರಾನ್ಸ್‍ಫಾರ್ಮರ್ ನಿಂದ ಅಪಾಯ ಇರುವ ಹಿನ್ನೆಲೆ ಕಳೆದ ಗ್ರಾಮಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ಸ್ಥಳಾಂತರ ಮಾಡುವ ಬಗ್ಗೆ ಒತ್ತಾಯಿಸಿ, ಕ್ರಮ ಕೈಗೊಳ್ಳ ಲಾಗುವದು ಎಂದು ಅಧಿಕಾರಿಗಳು ಭರವಸೆ ನೀಡಿ, ಇನ್ನು ಸ್ಥಳಾಂತರದ ವಿಷಯದಲ್ಲಿ ಕ್ರಮ ಕೈಗೊಳ್ಳದಿರುವ ಬಗ್ಗೆ ಚೆಸ್ಕಾಂ ಅಧಿಕಾರಿಯನ್ನು ಗ್ರಾಮಸ್ಥರು ಪ್ರಶ್ನಿಸಿದರು.

ಚೆಸ್ಕಾಂ ಅಧಿಕಾರಿ ಉತ್ತರ ನೀಡುತ್ತ, ಮುಂದಿನ ದಿನಗಳಲ್ಲಿ ಸ್ಥಳ ಪರಿಶೀಲಿಸಿ ಅತಿ ಶೀಘ್ರವಾಗಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಪಡಿತರ ವಸ್ತುಗಳ ವಿತರಣೆಯಲ್ಲಿ ಈಗಾಗಲೇ ಸರಕಾರ ನಿಗದಿಪಡಿಸಿದ ಕುಟುಂಬಗಳಿಗೆ ಸಮರ್ಪಕವಾಗಿ ಪಡಿತರ ವಸ್ತುಗಳು ಬಾರದಿರುವ ಬಗ್ಗೆ ಸಭೆಯಲ್ಲಿ ಮಂಟಿಗಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಪ್ರಸ್ತಾಪಿಸಿದರು.

ಪಡಿತರ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ವ್ಯವಸ್ಥೆ ಇದ್ದರೂ ಪಡಿತರದಾರರಿಗೆ ಪಡಿತರ ವಸ್ತುಗಳು ಇದುವರೆಗೂ ಸಿಗದಿರುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಆಹಾರ ನಿರೀಕ್ಷಕ ರಾಜಣ್ಣ ಮಾಹಿತಿ ನೀಡಿ, ಪಡಿತರದಾರರಿಗೆ ಯಾವದೇ ವಸ್ತುಗಳನ್ನು ಕಡಿತಗೊಳಿಸಲಾಗಿಲ್ಲ. ಸರಕಾರದ ನಿಯಮಾನುಸಾರ ಪಡಿತರ ಚೀಟಿದಾರರು ಆಧಾರ್‍ಲಿಂಕ್ ಅನ್ನು ಸಮರ್ಪಕವಾಗಿ ಮಾಡಿದಾಗ ಈಗಿನ ಗಣಕೀಕೃತ ವ್ಯವಸ್ಥೆಯ ಮೇಲೆ ಪಡಿತರ ವಸ್ತುಗಳು ಕ್ರಮಬದ್ಧವಾಗಿ ಬರಲಿವೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್ ಮಾತನಾಡಿ, ಜಿಲ್ಲಾ ಪಂಚಾಯಿತಿಯ ಅನುದಾನದಲ್ಲಿ ಶಾಲೆಯ ಅಭಿವೃದ್ಧಿಗೆ ರೂ. 2.5 ಲಕ್ಷ ವಿನಿಯೋಗಿಸುವ ಬಗ್ಗೆ ಈಗಾಗಲೇ ಕ್ರಿಯಾಯೋಜನೆ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಅನುದಾನ ವನ್ನು ಕಾರ್ಯರೂಪಕ್ಕೆ ತಂದು ಕಾಮಗಾರಿಯನ್ನು ಪೂರ್ಣಗೊಳಿಸ ಲಾಗುವದು ಎಂದು ತಿಳಿಸಿದರು.

ಸಭೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಶಿರಂಗಾಲ ಗ್ರಾಮ 2ನೇ ಬ್ಲಾಕಿನ ಸದಸ್ಯರು ಎರಡೂ ಗ್ರಾಮಸಭೆಗಳಿಗೆ ಹಾಜರಾಗದ ಬಗ್ಗೆ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಜಯಣ್ಣ, ಗ್ರಾ.ಪಂ. ಉಪಾಧ್ಯಕ್ಷೆ ಸೇರಿದಂತೆ ಸದಸ್ಯರುಗಳು ಇದ್ದರು.