ಮಡಿಕೇರಿ, ಅ. 1 : ಮಡಿಕೇರಿ ದಸರಾ ನಾಡಹಬ್ಬದ ವೈಭವಕ್ಕೆ ಶೋಭಾಯಮಾನಗೊಂಡಿದ್ದ ದಶಮಂಟಪಗಳ ಮೆರವಣಿಗೆಯೂ, ವಿದ್ಯುತ್ ಬೆಳಕಿನ ಚಿತ್ತಾರದೊಂದಿಗೆ ಝಗಮಗಿಸುವ ಮೂಲಕ ಧರೆಯೊಳಗೆ ಸುರಲೋಕವನ್ನು ತೋರಿಸಿದಂತೆ ಭಾಸವಾಯಿತು. ವಿಭಿನ್ನ ಪುರಾಣ ಕಥೆಗಳಿಂದ ಅಸುರೀಶಕ್ತಿಯ ಸಂಹಾರದೊಂದಿಗೆ ದೈವೀಶಕ್ತಿ ವಿಜಯ ಸಾಧಿಸಿದ ಸಂದೇಶ ರವಾನಿಸಿದ ಮಂಟಪೋತ್ಸವಗಳಲ್ಲಿ ಶ್ರೀ ಕೋಟೆ ಮಹಾಗಣಪತಿ ದೇವಾಲಯ ಕಲಾಕೃತಿಗೆ ಪ್ರಥಮ ಬಹುಮಾನ ಲಭಿಸಿತು.ಇತಿಹಾಸ ಪ್ರಸಿದ್ಧ ಕರಗ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಕಂಚಿ ಕಾಮಾಕ್ಷಿ ಸನ್ನಿಧಿಯಿಂದ ಮೂಡಿಬಂದ ಕಲಾಕೃತಿ ದ್ವಿತೀಯ ಸ್ಥಾನ ಪಡೆದರೆ, ಇನ್ನೆರಡು ಕರಗ ದೇವಾಲಯಗಳಾದ ಶ್ರೀ ಕುಂದೂರುಮೊಟ್ಟೆ, ಚೌಟಿ ಮಾರಿಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ಮಂಟಪಗಳ ಕಲಾಕೃತಿಗಳು ತೃತೀಯ ಬಹುಮಾನ ಹಂಚಿಕೊಂಡವು.
ಪ್ರಥಮ ಬಹುಮಾನ ಪಡೆದ ಶ್ರೀ ಕೋಟೆ ಗಣಪತಿ ಕಲಾಕೃತಿಯು ಶ್ರೀ ವಿನಾಯಕನಿಂದ ದುಷ್ಟ ರಕ್ಕಸ ತಾಳಾಸುರನನ್ನು ಸಂಹಾರಗೈಯ್ಯುವ ಕಥೆಯೊಂದಿಗೆ ಪ್ರೇಕ್ಷಕರ ಕಣ್ಮನ ಸೂರೆಗೊಂಡು ದೈವೀ ಶಕ್ತಿಯ ವಿಜಯದ ಸಂದೇಶ ನೀಡಿತು. ದ್ವಿತೀಯ ಬಹುಮಾನ ಪಡೆದುಕೊಂಡ ಶ್ರೀ ಕಂಚಿ ಕಾಮಾಕ್ಷಮ್ಮ ದೇವಾಲಯ ಮಂಟಪವು, ವಿಜಯದಶಮಿ ಹಿನ್ನೆಲೆಯ ಕಥಾನಕದೊಂದಿಗೆ ಶ್ರೀ ರಾಮಾಂಜನೇಯರಿಂದ ದಶಾನನ ರಾವಣನನ್ನು ಸಂಹಾರ ಗೈಯ್ಯುವ ದೃಶ್ಯಾವಳಿಯನ್ನು ಪ್ರತಿ ಬಿಂಬಿಸಿತು.
ತೃತೀಯ ಬಹುಮಾನಕ್ಕೆ ಭಾಜನವಾದ ಶ್ರೀ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಕಲಾಕೃತಿಯು, ಶ್ರೀಮನ್ನಾರಾಯಣನು ಗರುಡ ವಾಹನನಾಗಿ ದುಷ್ಟರಾಕ್ಷಸನನ್ನು ಸಂಹರಿಸುವ ಕಥಾ ಹಿನ್ನೆಲೆಯಿಂದ ಕೂಡಿದ್ದರೆ, ಶ್ರೀ ಕೋಟೆ ಮಾರಿಯಮ್ಮ ಮಂಟಪ ಕಲಾಕೃತಿಯು ಸಿಂಹಾರೂಢಳಾದ ದೇವಿಯ ಹಿರಣ್ಯಾಕ್ಷನನ್ನು ಮರ್ದನಗೈಯ್ಯುವ ದೃಶ್ಯಾವಳಿಯಿಂದ ಜನಮನ ಸೆಳೆಯಿತು.
ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯ ಕಲಾಕೃತಿ ಜಗನ್ಮಾತೆಯು ಅಸುರರನ್ನು ಸಂಹಾರಗೈಯುವ ಸಂದೇಶ ನೀಡಿದರೆ, ಕೊಲ್ಲೂರು ಮೂಕಾಂಬಿಕೆಯು ಮೂಕಾಸುರನನ್ನು ವಧಿಸುವ ಸಂದೇಶವನ್ನು ಶ್ರೀ ಕೋದಂಡರಾಮ ದೇವಾಲಯ ಮಂಟಪ ಬಿತ್ತರಿಸಿತು. ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಮಂಟಪವು ಆದಿಶಕ್ತಿಯಾದ ಚಾಮುಂಡೇಶ್ವರಿಯು ಮಹಿಷಾಸುರನನ್ನು ವಧೆಗೈಯುವ ಕಥೆಯಿಂದ ಕೂಡಿದ್ದರೆ, ಕರವಾಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ಮಂಟಪವು, ಜೀವರಾಶಿಯ ಸಂರಕ್ಷಣೆಗಾಗಿ ಭೂದೇವಿಯು ನರಕಾಸುರನನ್ನು ಧಮನಿಸುವ ಕತೆಯನ್ನು ಪ್ರದರ್ಶಿಸಿತು.
ಪೇಟೆ ಶ್ರೀರಾಮ ಮಂದಿರ ಮಂಟಪವು ಪ್ರತಿವರ್ಷದಂತೆ ಶಾಂತ ಸ್ವರೂಪದಿಂದ ಕ್ಷೀರ ಸಾಗರದೊಳು ಆದಿಶೇಷನಲ್ಲಿ ಶ್ರೀ ಲಕ್ಷ್ಮಿ ಸಹಿತನಾಗಿ ಪವಡಿಸಿರುವ ಅನಂತ ಪದ್ಮನಾಭ ಸ್ವಾಮಿಯ ಕಲಾಕೃತಿಯಿಂದ ಮೂಡಿಬಂತು. ಅಂತೆಯೇ ದೇಚೂರು ಶ್ರೀ ರಾಮ ಮಂದಿರ ಮಂಟಪ ಕಲಾಕೃತಿಯು ಶ್ರೀ ಕೃಷ್ಣ ಪರಮಾತ್ಮನಿಂದ ದೇವೇಂದ್ರನ ಗರ್ವಭಂಗದ ಕಥೆಯಿಂದ ಪ್ರದರ್ಶನಗೊಂಡಿತು. ಒಟ್ಟಿನಲ್ಲಿ ಜನಸಾಗರದ ನಡುವೆ ಸಾಗಿ ಬಂದ ಮಂಟಪೋತ್ಸವ ಶೋಭಾಯಾತ್ರೆಯು ವರುಣನ ಕೃಪೆಯಿಂದ ಸಂಪನ್ನವಾಯಿತು.
(ಮೊದಲ ಪುಟದಿಂದ) ಮಂಟಪೋತ್ಸವ ಸ್ಪರ್ಧಾ ವಿಜೇತ ತಂಡಗಳಿಗೆ ಹಾಗೂ ಎಲ್ಲಾ ಮಂಟಪಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು. ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪದಾಧಿಕಾರಿ ಉಸ್ಮಾನ್ ಈ ಸಂದರ್ಭ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ ತೀರ್ಪು ಪ್ರಕಟಿಸಿದರು. ತೀರ್ಪುಗಾರರನ್ನು ಈ ವೇಳೆ ಗೌರವಿಸಲಾಯಿತು. ಅಪಾರ ಜನಸ್ತೋಮದ ನಡುವೆ ಪೊಲೀಸ್ ಇಲಾಖೆಯಿಂದ ಎಲ್ಲೆಡೆ ಭದ್ರತೆಯೊಂದಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ತೆನ್ನಿರ ಮೈನಾ ನಿರೂಪಿಸಿದರು. ದೇವಾಲಯಗಳು, ವಿವಿಧ ಇಲಾಖಾ ಕಚೇರಿಗಳು, ವ್ಯಾಪಾರೋದ್ಯಮ ಸಹಿತ ಅಲಂಕಾರ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.