ಸೋಮವಾರಪೇಟೆ, ಸೆ.29 : ಸೋಮವಾರಪೇಟೆಯ ದಸರಾ ಜನೋತ್ಸವ ಎಂದೇ ಹೆಸರಾಗಿರುವ ಮೋಟಾರು ಯೂನಿಯನ್‍ನಿಂದ ಆಯೋಜನೆಗೊಳ್ಳುವ ಆಯುಧ ಪೂಜೋತ್ಸವ ಸಮಾರಂಭ ಸಾವಿರಾರು ಸಾರ್ವಜನಿಕರ ಭಾಗಿತ್ವದೊಂದಿಗೆ ಜನೋತ್ಸವದ ರಂಗುಪಡೆದು, ಹತ್ತು ಹಲವು ಕಾರ್ಯಕ್ರಮಗಳ ಮೂಲಕ ವೈವಿಧ್ಯಮಯವಾಗಿ ನಡೆಯಿತು.ಸೋಮವಾರಪೇಟೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶ ಹಾಗೂ ಉತ್ತರ ಕೊಡಗಿನ ಹಲವು ಭಾಗಗಳ ದಸರಾ ಎಂದೇ ಖ್ಯಾತಿಯಾಗಿರುವ ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಆಯೋಜಿಸುವ ಅದ್ದೂರಿ ಆಯುಧ ಪೂಜೋತ್ಸವ

(ಮೊದಲ ಪುಟದಿಂದ) ಸಂಭ್ರಮ ದಿಂದ ಜರುಗಿತು. ಪೂಜೋತ್ಸವದ ಅಂಗವಾಗಿ ಸೋಮವಾರಪೇಟೆ ನಗರವನ್ನು ತಳಿರುತೋರಣಗಳಿಂದ ಸಿಂಗರಿಸ ಲಾಗಿತ್ತು. ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಣೆ, ನಗರದ ಪ್ರಮುಖ ಪ್ರತಿಮೆಗಳ ಶುಚಿತ್ವ, ಮಾಲಾರ್ಪಣೆ ನಡೆಯಿತು.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಸೋಮವಾರಪೇಟೆ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮೂಡಿಬಂದ ಡ್ಯಾನ್ಸ್ ಡ್ಯಾನ್ಸ್ ಸ್ಪರ್ಧೆ ನೋಡುಗರನ್ನು ರಂಜಿಸಿತು. ಡ್ಯಾನ್ಸ್ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳ ಸದಸ್ಯರುಗಳಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.

ಏಳನೇ ತರಗತಿ, ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ತರಗತಿಗಳಲ್ಲಿ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರಾದ ಕೆ.ಎ. ಇಬ್ರಾಹಿಂ ಮತ್ತು ಮಾಜೀ ಸೈನಿಕ ಕೆ.ಯು. ಸುಬ್ಬಯ್ಯ, ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿನ ಉತ್ತಮ ಸೇವೆಗಾಗಿ ಬಾಲಕೃಷ್ಣ ನಂಬಿಯಾರ್ ಅವರುಗಳನ್ನು ಸನ್ಮಾನಿಸಲಾಯಿತು.

ಇದೇ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಟಾರ್ ಯೂನಿಯನ್ ಅಧ್ಯಕ್ಷ ಸಿ.ಸಿ. ನಂದ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಸಂಘಟನೆಗಳು ಬಲಯುತವಾದಾಗ ಮಾತ್ರ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತದೆ ಎಂದರು.

ಉದ್ಯಮಿ ಹರಪಳ್ಳಿ ರವೀಂದ್ರ ಮಾತನಾಡಿ, ಇಂತಹ ಹಬ್ಬಾಚರಣೆ ಗಳಿಂದ ಸಮಾಜದಲ್ಲಿ ಪರಸ್ಪರ ಸಾಮರಸ್ಯ ಮೂಡುತ್ತದೆ. ಬಾಂಧವ್ಯ ಬೆಸುಗೆಗೆ ಸಾಮೂಹಿಕ ಆಚರಣೆಗಳು ಸಹಕಾರಿಯಾಗಿದೆ ಎಂದರು.

ವೇದಿಕೆಯಲ್ಲಿ ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ದಾನಿಗಳಾದ ಅರುಣ್ ಕಾಳಪ್ಪ, ಗಿರೀಶ್ ಮಲ್ಲಪ್ಪ, ಶ್ರೀನಿವಾಸ್‍ಮೂರ್ತಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ವಿಎಸ್‍ಎಸ್‍ಎನ್ ಅಧ್ಯಕ್ಷ ಹೆಚ್.ಕೆ. ಮಾದಪ್ಪ, ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಶಿವಕುಮಾರ್, ಪ್ರಮುಖರಾದ ಎ.ಪಿ. ವೀರರಾಜು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅಜೀಶ್‍ಕುಮಾರ್, ಕರವೇ ತಾಲೂಕು ಅಧ್ಯಕ್ಷ ದೀಪಕ್, ಪ.ಪಂ. ಸದಸ್ಯರುಗಳಾದ ಶೀಲಾ ಡಿಸೋಜ, ಸುಷ್ಮಾ, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ವನಜ, ಬೇಳೂರು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಧ್ಯಾಹ್ನ ಇಲ್ಲಿನ ಜೇಸೀ ವೇದಿಕೆ ಬಳಿ ಆಯೋಜಿಸಿದ್ದ ಅನ್ನದಾನದಲ್ಲಿ ಸಾವಿರಾರು ಸಾರ್ವಜನಿಕರು ಭಾಗವಹಿಸಿದ್ದರು. ಆಯುಧ ಪೂಜೋತ್ಸವ ಪ್ರಯುಕ್ತ ನಗರದ ಅಂಗಡಿಗಳು ಹಾಗೂ ವರ್ಕ್‍ಶಾಪ್ ಗಳನ್ನು ವಿಶೇಷವಾಗಿ ಅಲಂಕರಿಸ ಲಾಗಿತ್ತು. ಅಲಂಕೃತ ವರ್ಕ್‍ಶಾಪ್‍ಗಳ ಸ್ಪರ್ಧೆ, ಅಲಂಕೃತ ವಾಹನಗಳ ಸ್ಪರ್ಧೆ ಯನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯಿಂದ ಕರಾಟೆ ಮತ್ತು ಯೋಗ ಪ್ರದರ್ಶನ ನಡೆಯಿತು. ಇದರೊಂದಿಗೆ ಉದಯ ಟಿ.ವಿ. ರೂಪೇಶ್ ಅವರ ಜಾಲಿಬಾಯ್ಸ್ ತಂಡದಿಂದ ಮೂಡಿಬಂದ ಅದ್ದೂರಿ ರಸಸಂಜೆ, ಝೀ ಕನ್ನಡ ಸರಿಗಮಪ ಖ್ಯಾತಿಯ ದೀಕ್ಷಾ, ಧನುಶ್ ಮತ್ತು ಪ್ರಕೃತಿ, ಸೂಪರ್ ಡ್ಯಾನ್ಸರ್ ಪುಟಾಣಿ ಪಂಟ್ರು ಮಧುಸೂದನ್ ಅವರು ಗಳಿಂದ ಮೂಡಿಬಂದ ನೃತ್ಯ ಕಾರ್ಯಕ್ರಮಗಳನ್ನು ಜನಮನಸೂg Éಗೊಂಡಿತು.

ಪ್ರಸಕ್ತ ಸಾಲಿನ ಆಯುಧ ಪೂಜೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸುವ ಮೂಲಕ ಜನೋತ್ಸವವಾಗಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಯಶಸ್ಸಿಗೆ ಮೋಟಾರು ಯೂನಿಯನ್ ಪದಾಧಿಕಾರಿಗಳು ಶ್ರಮಿಸಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಪೊಲೀಸ್ ಠಾಣಾ ಕಟ್ಟಡವನ್ನು ತಳಿರು ತೋರಣಗಳಿಂದ ಸಿಂಗರಿಸಿ, ಪೊಲೀಸ್ ಕುಟುಂಬ ಸದಸ್ಯರೊಂದಿಗೆ ಪೂಜೆ ನೆರವೇರಿಸಲಾಯಿತು.

ಠಾಣೆಯ ಹೊರಭಾಗದಲ್ಲಿ ವಿವಿಧ ಸ್ತಬ್ಧಚಿತ್ರಗಳನ್ನು ಅಳವಡಿಸಿ, ವಿಶೇಷವಾಗಿ ಸಿಂಗರಿಸಲಾಗಿತ್ತು. ತಾಯಿ ಚಾಮುಂಡೇಶ್ವರಿ ಭಾವಚಿತ್ರದೊಂದಿಗೆ, ಠಾಣೆಯಲ್ಲಿರುವ ಆಯುಧಗಳು ಹಾಗೂ ಸಿಬ್ಬಂದಿಗಳ ವಾಹನಗಳಿಗೆ ಪೂಜೆ ನೆರವೇರಿಸಲಾಯಿತು.

ಠಾಣಾಧಿಕಾರಿ ಎಂ.ಶಿವಣ್ಣ, ಅಪರಾಧ ವಿಭಾಗದ ಠಾಣಾಧಿಕಾರಿ ಮಂಚಯ್ಯ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಹಾಗೂ ಕುಟುಂಬ ವರ್ಗದವರು ಪೂಜಾ ಕಾರ್ಯದಲ್ಲಿ ಭಾಗವಹಿಸಿ ಸಂಭ್ರಮದಿಂದ ಹಬ್ಬ ಆಚರಿಸಿದರು.

- ವಿಜಯ್ ಹಾನಗಲ್